ಚಕ್ರ ಎಸೆತದಲ್ಲಿ ಅವಿನಾಶ್‌ಗೆ ರಾಜ್ಯಮಟ್ಟದ ಚಿನ್ನ

ಸಪ್ತಸಾಗರ ವಾರ್ತೆ,ದೇವರ ಹಿಪ್ಪರಗಿ, ಆ. 13:
ಕರ್ನಾಟಕ ರಾಜ್ಯದಲ್ಲಿ ನಡೆದ 2026–27ನೇ ಸಾಲಿನ 20 ವರ್ಷ ವಯೋಮಿತಿಯೊಳಗಿನ ಮಕ್ಕಳ ರಾಜ್ಯಮಟ್ಟದ ಅಮೆಚೂರ್ ಕ್ರೀಡಾಕೂಟದಲ್ಲಿ ದೇವರ ಹಿಪ್ಪರಗಿ ಪಟ್ಟಣದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿ ಅವಿನಾಶ್ ಮಲ್ಲಿಕಾರ್ಜುನ ತಳಕೇರಿ ಚಕ್ರ ಎಸೆತ ಸ್ಪರ್ಧೆಯಲ್ಲಿ ರಾಜ್ಯಮಟ್ಟದ ಚಿನ್ನದ ಪದಕ ಗೆದ್ದಿದ್ದಾರೆ.
ಅವಿನಾಶ್ ಅವರು ಚಕ್ರವನ್ನು 50.63 ಮೀಟರ್ ದೂರ ಎಸೆಯುವ ಮೂಲಕ ಪ್ರಥಮ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.
ನಿರಂತರ ಪರಿಶ್ರಮ, ಕಠಿಣ ತರಬೇತಿ ಹಾಗೂ ಕ್ರೀಡಾ ಪ್ರತಿಭೆಯಿಂದ ಈ ಸಾಧನೆ ಸಾಧ್ಯವಾಗಿದೆ.
ಶಿಕ್ಷಕರ ಪುತ್ರರಾಗಿರುವ ಅವಿನಾಶ್, ವಿಜಯಪುರ ಜಿಲ್ಲೆಯ ಪರವಾಗಿ ಸತತ ಏಳನೇ ಬಾರಿ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ. ಅವರ ಸಾಧನೆಯಿಂದ ವಿಜಯಪುರ ಜಿಲ್ಲೆ ಹಾಗೂ ದೇವರ ಹಿಪ್ಪರಗಿ ತಾಲೂಕಿನ ಕೀರ್ತಿ ರಾಜ್ಯಮಟ್ಟದಲ್ಲಿ ಹೆಚ್ಚಾಗಿದೆ.
ಅವಿನಾಶ್ ಅವರ ಸಾಧನೆಗೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪದವಿ ಪೂರ್ವ ಕಾಲೇಜಿನ ಸಂಸ್ಥೆಯ ಅಧ್ಯಕ್ಷ ವಿ.ಕೆ. ಪಾಟೀಲ, ತರಬೇತುದಾರರಾದ ಹಾಜಿಲಾಲ್ ಮಕಾಂದರ್, ರಾಜು ಕಾಖಂಡಕಿ ಸೇರಿದಂತೆ ತಾಲೂಕಿನ ಗಣ್ಯರು ಹಾಗೂ ಕ್ರೀಡಾಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿಯೂ ಉತ್ತಮ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದ್ದಾರೆ.

Share this