ಕೃಷಿ ಉದ್ಯಮಿ ತರಬೇತಿಗೆ ಗ್ರಾಮೀಣ ಯುವಕರಿಂದ ಅರ್ಜಿ ಆಹ್ವಾನ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 13:
ಗ್ರಾಮೀಣ ಪ್ರದೇಶದ ಯುವಕರಿಗೆ ಕೃಷಿಯನ್ನೇ ಉದ್ಯೋಗವನ್ನಾಗಿ ರೂಪಿಸಿಕೊಂಡು ಸ್ವಾವಲಂಬಿಗಳಾಗಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ವಿಜಯಪುರದ ರುಡ್‌ಸೆಟ್ ಸಂಸ್ಥೆ ವತಿಯಿಂದ 13 ದಿನಗಳ ಉಚಿತ ಕೃಷಿ ಉದ್ಯಮಿ ತರಬೇತಿ ಆಯೋಜಿಸಲಾಗಿದೆ.
ರುಡ್‌ಸೆಟ್ ಸಂಸ್ಥೆ ಹಾಗೂ ಕೆನರಾ ಬ್ಯಾಂಕ್‌ನ ಪ್ರಾಯೋಜಕತ್ವದಲ್ಲಿ ನಡೆಯಲಿರುವ ಈ ತರಬೇತಿಯು ಆ.17ರಿಂದ 13 ದಿನಗಳ ಕಾಲ ನಡೆಯಲಿದೆ. ಸ್ವಯಂ ಉದ್ಯೋಗ ಮಾಡಲು ಆಸಕ್ತಿ ಹೊಂದಿರುವ ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಉದ್ದೇಶದಿಂದ ಕಾರ್ಯಕ್ರಮ ರೂಪಿಸಲಾಗಿದೆ.
ತರಬೇತಿಯಲ್ಲಿ ಹೈನುಗಾರಿಕೆ, ಕುರಿ ಸಾಕಾಣಿಕೆ, ಆಡು ಸಾಕಾಣಿಕೆ, ಕೋಳಿ ಸಾಕಾಣಿಕೆ ಹಾಗೂ ಮೀನು ಸಾಕಾಣಿಕೆ ಸೇರಿದಂತೆ ವಿವಿಧ ಕೃಷಿ ಮತ್ತು ಪೂರಕ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ಹಾಗೂ ಪ್ರಾಯೋಗಿಕ ಮಾರ್ಗದರ್ಶನ ನೀಡಲಾಗುತ್ತದೆ. ಇದರ ಜೊತೆಗೆ ಸರ್ಕಾರದ ವಿವಿಧ ಯೋಜನೆಗಳ ಮಾಹಿತಿ, ಉದ್ಯಮಶೀಲತೆ ಬೆಳೆಸಿಕೊಳ್ಳುವ ವಿಧಾನ, ಮಾರುಕಟ್ಟೆ ನಿರ್ವಹಣೆ, ಬ್ಯಾಂಕಿಂಗ್ ವ್ಯವಸ್ಥೆ, ಸಾಲ ಸೌಲಭ್ಯ ಹಾಗೂ ಸ್ವಯಂ ಉದ್ಯೋಗ ಆರಂಭಿಸುವ ತಂತ್ರಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.
19ರಿಂದ 45 ವರ್ಷದೊಳಗಿನ ಗ್ರಾಮೀಣ ಯುವಕರು ತರಬೇತಿಗೆ ಅರ್ಹರಾಗಿದ್ದು, ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿ ಹೊಂದಿರುವವರಿಗೆ ಆದ್ಯತೆ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಸಂಪೂರ್ಣ ಉಚಿತವಾಗಿರುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಸ್ವಂತ ಉದ್ಯಮ ಆರಂಭಿಸಲು ಅಗತ್ಯವಾದ ಮಾಹಿತಿ, ಸಲಹೆ ಮತ್ತು ಮಾರ್ಗದರ್ಶನವನ್ನೂ ಸಂಸ್ಥೆಯ ವತಿಯಿಂದ ನೀಡಲಾಗುತ್ತದೆ.
ಕೃಷಿ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಯುವಕರು ತರಬೇತಿಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಮುಕುಂದ ಝಳಕಿ ಮನವಿ ಮಾಡಿದ್ದಾರೆ.
ಆಸಕ್ತರು ತಮ್ಮ ಹೆಸರು ನೋಂದಾಯಿಸಿಕೊಳ್ಳಲು 08352-353865, 9739511914, 9060186109, 9480078829, 9845490323 ಹಾಗೂ 7483987824 ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು.
ವಿಳಾಸ: ರುಡ್‌ಸೆಟ್ ಸಂಸ್ಥೆ, ಹೊಸಕೋಟೆ ಹತ್ತಿರ, ರಾಘವೇಂದ್ರ ಕಾಲೋನಿ, ಜಮಖಂಡಿ–ಬಾಗಲಕೋಟೆ ಬೈಪಾಸ್ ರಸ್ತೆ, ವಿಜಯಪುರ–586109.

Share this