ವಿಜಯಪುರದಲ್ಲಿ ಮೊಳಗಿದ ದೇಶಭಕ್ತಿಯ ಘೋಷಣೆ: 300 ಮೀಟರ್ ತಿರಂಗಾ ಯಾತ್ರೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 13:
‘ಹರ್ ಘರ್ ತಿರಂಗಾ’ ಅಭಿಯಾನದ ಅಂಗವಾಗಿ ವಿಜಯಪುರ ನಗರದಲ್ಲಿ ಗುರುವಾರ ದೇಶಭಕ್ತಿಯ ಸಂಭ್ರಮ ಮನೆಮಾಡಿತು. 300 ಮೀಟರ್ ಉದ್ದದ ಬೃಹತ್ ತ್ರಿವರ್ಣ ಧ್ವಜ ಹಿಡಿದು ನೂರಾರು ವಿದ್ಯಾರ್ಥಿಗಳು, ಮಾಜಿ ಸೈನಿಕರು, ಯುವಕರು ಹಾಗೂ ಸಾರ್ವಜನಿಕರು ನಗರದ ಪ್ರಮುಖ ಬೀದಿಗಳಲ್ಲಿ ಹೆಜ್ಜೆ ಹಾಕಿದರು. ಯಾತ್ರೆಯುದ್ದಕ್ಕೂ ‘ಭಾರತ ಮಾತಾ ಕಿ ಜೈ’, ‘ವಂದೇ ಮಾತರಂ’ ಘೋಷಣೆಗಳು ಮೊಳಗಿದವು.
ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದ ಮುಂಭಾಗದಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಹಾನಗರ ಪಾಲಿಕೆ ಮಹಾಪೌರ ಎಂ.ಎಸ್. ಕರಡಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ ಹಾಗೂ ಮಾಜಿ ಸೈನಿಕರು ತಿರಂಗಾ ಯಾತ್ರೆಗೆ ಚಾಲನೆ ನೀಡಿದರು.
ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಆರಂಭಗೊಂಡ ಬೃಹತ್ ಯಾತ್ರೆಯು ಗಾಂಧಿ ಚೌಕ, ಬಸವೇಶ್ವರ ವೃತ್ತ, ಕನಕದಾಸ ವೃತ್ತ ಮಾರ್ಗವಾಗಿ ಅಂಬೇಡ್ಕರ್ ವೃತ್ತದವರೆಗೆ ಸಾಗಿತು. ನೂರಾರು ಜನರು ಕೈಕೈ ಹಿಡಿದು 300 ಮೀಟರ್ ಉದ್ದದ ರಾಷ್ಟ್ರಧ್ವಜವನ್ನು ಹೊತ್ತು ಸಾಗಿದ್ದು, ನಗರದ ಜನರ ಗಮನ ಸೆಳೆಯಿತು. ವಿದ್ಯಾರ್ಥಿಗಳು ಹಾಗೂ ಯುವಕರು ದೇಶಭಕ್ತಿ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು.

ಪ್ರತಿಯೊಂದು ಮನೆಯಲ್ಲಿ ತಿರಂಗಾ ಹಾರಲಿ: ರಾಮಪ್ಪ ಎಲ್.ಕೆ.

ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದ ಅಧ್ಯಕ್ಷ ರಾಮಪ್ಪ ಎಲ್.ಕೆ. ಮಾತನಾಡಿ, ದೇಶಪ್ರೇಮ ಎನ್ನುವುದು ಕೇವಲ ಘೋಷಣೆಗೆ ಸೀಮಿತವಾಗದೆ ಪ್ರತಿಯೊಬ್ಬ ಭಾರತೀಯನ ಬದುಕಿನ ಭಾಗವಾಗಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ‘ಹರ್ ಘರ್ ತಿರಂಗಾ’ ಅಭಿಯಾನದ ಮೂಲಕ ಪ್ರತಿಯೊಂದು ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸಿ ದೇಶಾಭಿಮಾನವನ್ನು ಮತ್ತಷ್ಟು ಬಲಪಡಿಸಬೇಕು ಎಂದು ಕರೆ ನೀಡಿದರು.
ಯಾತ್ರೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅರುಣ್ ಶಹಾಪುರ, ಉಮೇಶ್ ಕಾರಜೋಳ, ಗೋಪಾಲ ಘಟಕಂಬಾಳೆ, ಉಪಮಹಾಪೌರರಾದ ಸುಮಿತ್ರಾ ಜಾಧವ, ಚಂದ್ರಶೇಖರ ಕವಟಗಿ, ಉಮೇಶ ಕೊಳಕೂರ, ಪ್ರಕಾಶ ಅಕ್ಕಲಕೋಟ, ಭೀಮಾಶಂಕರ ಹದನೂರ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಬಿಜೆಪಿ ಮುಖಂಡರು, ಮಾಜಿ ಸೈನಿಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ನೂರಾರು ದೇಶಭಕ್ತರು ಭಾಗವಹಿಸಿದ್ದರು.
300 ಮೀಟರ್ ಉದ್ದದ ತ್ರಿವರ್ಣ ಧ್ವಜ ವಿಜಯಪುರದ ಬೀದಿಗಳಲ್ಲಿ ರಾರಾಜಿಸಿದ ದೃಶ್ಯ ದೇಶಭಕ್ತಿಯ ಸಂಭ್ರಮಕ್ಕೆ ಸಾಕ್ಷಿಯಾಯಿತು.

Share this