ವಿದ್ಯಾರ್ಥಿಗಳ ಶಿಷ್ಯವೇತನ ಸಮಸ್ಯೆ ಪರಿಹಾರಕ್ಕೆ ಮನವಿ

ಸಪ್ತಸಾಗರ ವಾರ್ತೆ,ಬಾಗಲಕೋಟೆ, ಆ. 13:
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ರೀಶೈಲ ಚಲವಾದಿ ಹಾಗೂ ಬೆಳಗಾವಿ ವಿಭಾಗೀಯ ಸಂಚಾಲಕ ಎಚ್.ಎನ್. ನೀಲನಾಯಕ ಅವರು ಗುರುವಾರ ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ್ ಅವರ ಜೊತೆಗೆ ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶಿಷ್ಯವೇತನಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚಿಸಿದರು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಡೀನ್ ಡಾ. ಶಾಂತಪ್ಪ ತಿರಕಣ್ಣವರ ಅವರನ್ನು ಭೇಟಿ ಮಾಡಿ, ವಿದ್ಯಾರ್ಥಿಗಳ ಶಿಷ್ಯವೇತನ ಸೇರಿದಂತೆ ವಿವಿಧ ಕುಂದುಕೊರತೆಗಳ ಕುರಿತು ಗಮನ ಸೆಳೆಯಲಾಯಿತು. ಮನವಿಗೆ ಸ್ಪಂದಿಸಿದ ಡೀನ್ ಅವರು, ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ನಂತರ ಬಾಗಲಕೋಟೆ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಬಾಗಲಕೋಟೆ ತಾಲೂಕು ಸಮಾಜ ಕಲ್ಯಾಣಾಧಿಕಾರಿ ಇದ್ದಲಗಿ ಅವರನ್ನು ಭೇಟಿ ಮಾಡಿ, ಮಹಾವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶಿಷ್ಯವೇತನವನ್ನು ಶೀಘ್ರ ಮಂಜೂರು ಮಾಡುವಂತೆ ಮನವಿ ಸಲ್ಲಿಸಲಾಯಿತು.
ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಯಾವುದೇ ಅಡಚಣೆಯಾಗದಂತೆ ಶಿಷ್ಯವೇತನವನ್ನು ತ್ವರಿತವಾಗಿ ಮಂಜೂರು ಮಾಡಬೇಕು ಎಂದು ಅವರು ಒತ್ತಾಯಿಸಿದರು. ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು ಹಾಗೂ ಡೀನ್ ಅವರಿಗೆ ಸಂಘಟನೆಯ ಮುಖಂಡರು ಕೃತಜ್ಞತೆ ಸಲ್ಲಿಸಿದ್ದಾರೆ.

Share this