ಸಪ್ತಸಾಗರ ವಾರ್ತೆ,ವಿಜಯಪುರ, ಆ. 13:
ಶಾಸನಾತ್ಮಕ ಹಾಗೂ ಸಂವಿಧಾನಬದ್ಧವಾಗಿ ರಚನೆಯಾಗಿರುವ ವಾರ್ಡ್ ಸಮಿತಿಗಳು ನಗರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಜನರ ಪಾಲ್ಗೊಳ್ಳುವಿಕೆಯಿಂದ ವಾರ್ಡ್ಗಳ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಕೂಡಲೇ ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ಸದಸ್ಯರ ಅಂತಿಮ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿ, ಪ್ರತಿ ವಾರ್ಡ್ನಲ್ಲಿ ನಿಯಮಿತವಾಗಿ ಸಭೆಗಳನ್ನು ನಡೆಸಬೇಕು ಎಂದು ವಾರ್ಡ್ ಸಮಿತಿ ಜಿಲ್ಲಾ ಸಂಚಾಲಕ, ನ್ಯಾಯವಾದಿ ದಾನೇಶ ಅವಟಿ ಆಗ್ರಹಿಸಿದರು.
ಗುರುವಾರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಅವರು, ಮಹಾನಗರ ಪಾಲಿಕೆ ವತಿಯಿಂದ ಪತ್ರಿಕಾ ಪ್ರಕಟಣೆ ಮೂಲಕ ಎರಡು ಬಾರಿ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿ, ವಾರ್ಡ್ ಸಮಿತಿ ಸದಸ್ಯರ ಆಯ್ಕೆ ಪಟ್ಟಿಯನ್ನು ಅಂತಿಮಗೊಳಿಸಿ ಹಲವು ತಿಂಗಳು ಕಳೆದರೂ ಇದುವರೆಗೆ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡದಿರುವುದು ಹಾಗೂ ವಾರ್ಡ್ ಅಭಿವೃದ್ಧಿಗಾಗಿ ಸಮಿತಿ ಸಭೆಗಳನ್ನು ನಡೆಸದಿರುವುದು ಸಾರ್ವಜನಿಕರಲ್ಲಿ ನಿರಾಸೆ ಮೂಡಿಸಿದೆ ಎಂದು ಹೇಳಿದರು.
ವಾರ್ಡ್ ಸಮಿತಿ ಸದಸ್ಯರ ಅಂತಿಮಗೊಂಡ ಪಟ್ಟಿಯನ್ನು ಕೂಡಲೇ ಅಧಿಕೃತವಾಗಿ ಬಿಡುಗಡೆಗೊಳಿಸಿ, ಪ್ರತಿ ವಾರ್ಡ್ನಲ್ಲಿ ವಾರ್ಡ್ ಸಮಿತಿ ಸಭೆಗಳನ್ನು ನಡೆಸುವ ಮೂಲಕ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡಬೇಕು. ಜನರ ಸಹಭಾಗಿತ್ವದೊಂದಿಗೆ ವಾರ್ಡ್ಗಳ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ವಾರ್ಡ್ ಸಮಿತಿ ಜಿಲ್ಲಾ ಸಹ ಸಂಚಾಲಕ ಯಲ್ಲಪ್ಪ ಈರಕಲ್ ಮಾತನಾಡಿ, ವಾರ್ಡ್ಗಳ ಅಭಿವೃದ್ಧಿ ಕಾರ್ಯಗಳಲ್ಲಿ ವಾರ್ಡ್ ಸದಸ್ಯರೊಂದಿಗೆ ಸಾರ್ವಜನಿಕರು ಕೈಜೋಡಿಸುವ ಮೂಲಕ ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ವಾರ್ಡ್ ಸಮಿತಿಗಳು ಅತ್ಯಂತ ಅಗತ್ಯವಾಗಿವೆ. ಆಡಳಿತಾತ್ಮಕ ಅನುಕೂಲತೆ ಹಾಗೂ ಸಮರ್ಪಕ ಅಭಿವೃದ್ಧಿಗೆ ವಾರ್ಡ್ ಸಮಿತಿಗಳು ಸಹಕಾರಿಯಾಗಲಿವೆ. ಆದ್ದರಿಂದ ಪ್ರತಿ ವಾರ್ಡ್ನಲ್ಲಿ ಶೀಘ್ರವಾಗಿ ಸಭೆ ನಡೆಸಿ ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡಬೇಕು ಎಂದು ಹೇಳಿದರು.
ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ ಅವರು, ವಾರ್ಡ್ ಸಮಿತಿ ಸದಸ್ಯರ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವುದರ ಜೊತೆಗೆ ವಾರ್ಡ್ ಸಮಿತಿ ಸಭೆಗಳಿಗೆ ಅಗತ್ಯ ಸಹಕಾರ ಮತ್ತು ಅನುಕೂಲತೆ ಕಲ್ಪಿಸುವುದಾಗಿ ಭರವಸೆ ನೀಡಿದರು.
ವಿಜಯಪುರ ಮಹಾನಗರ ಪಾಲಿಕೆ ವಾರ್ಡ್ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆಗೊಳಿಸಿ, ವಾರ್ಡ್ವಾರು ಸಭೆ ನಡೆಸಿ:ದಾನೇಶ


