ಎಐ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಲಿ

ಮುಗಳಖೋಡದಲ್ಲಿ ಪದವಿ ಮಹಾವಿದ್ಯಾಲಯದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಸಪ್ತಸಾಗರ ವಾರ್ತೆ,ಮುಗಳಖೋಡ, ಆ. 14:
ಆಧುನಿಕ ಯುಗದಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಹಲವು ರೀತಿಯಲ್ಲಿ ಸಹಕಾರಿಯಾಗುತ್ತಿದೆ. ಅಗತ್ಯವಿದ್ದಾಗ ಎಐ ತಂತ್ರಜ್ಞಾನವನ್ನು ಬಳಸಿಕೊಂಡು ಅದರಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಅಳವಡಿಸಿಕೊಂಡರೆ ಸಮಾಜದ ಉತ್ತಮ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಗುರನಿಂಗಯ್ಯ ಮಠಪತಿ ಹೇಳಿದರು.
ಪಟ್ಟಣದ ಶ್ರೀ ಚ.ವಿ.ವ. ಸಂಘದ ಡಾ. ಸಿ.ಬಿ. ಕುಲಿಗೋಡ ಪದವಿ ಮಹಾವಿದ್ಯಾಲಯದಲ್ಲಿ 2026-27ನೇ ಸಾಲಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ವಿವಿಧ ಘಟಕಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಅತಿಯಾಗಿ ಅವಲಂಬಿತರಾಗದೆ, ಉತ್ತಮ ಸ್ನೇಹಿತರನ್ನು ಬೆಳೆಸಿಕೊಂಡು ಜ್ಞಾನಾರ್ಜನೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವರ್ಗದ ರಾಜ್ಯ ಉಪಾಧ್ಯಕ್ಷ ಡಾ. ಸಿ.ಬಿ. ಕುಲಿಗೋಡ ಮಾತನಾಡಿ, ಪದವಿ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಂದು ವರ್ಷದೊಳಗೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಹೊಸ ಹೆಜ್ಜೆ ಇಡುತ್ತಾ ಹಲವು ಕನಸುಗಳನ್ನು ಹೊತ್ತು ಕಾಲೇಜಿಗೆ ಆಗಮಿಸಿರುವ ವಿದ್ಯಾರ್ಥಿಗಳು ಇಲ್ಲಿಂದ ಉತ್ತಮ ಜ್ಞಾನ ಪಡೆದು ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದರು.

ತಾಯಿಯ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ನಗದು ಬಹುಮಾನ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಮುಗಳಖೋಡ ಘಟಕದ ಅಧ್ಯಕ್ಷ ಚನ್ನವೀರಯ್ಯ ಹಿರೇಮಠ ಅವರು ತಮ್ಮ ಮಾತೋಶ್ರೀ ಲಿಂಗೈಕ್ಯ ಶ್ರೀಮತಿ ಗುರುಶಾಂತವ್ವ ಮುಪ್ಪಯ್ಯ ಹಿರೇಮಠ ಅವರ ಸ್ಮರಣಾರ್ಥವಾಗಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ 2025-26ನೇ ಸಾಲಿನ ಪರೀಕ್ಷೆಯಲ್ಲಿ ಕಾಲೇಜಿಗೆ ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.
95.84 ಪ್ರತಿಶತ ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಗಾಯತ್ರಿ ಬಾಳೋಜಿ ಅವರಿಗೆ ₹3,000, 95.69 ಪ್ರತಿಶತ ಅಂಕ ಗಳಿಸಿ ದ್ವಿತೀಯ ಸ್ಥಾನ ಪಡೆದ ಅಕ್ಷತಾ ಹುದ್ದಾರ ಅವರಿಗೆ ₹2,000 ಹಾಗೂ 95.38 ಪ್ರತಿಶತ ಅಂಕ ಗಳಿಸಿ ತೃತೀಯ ಸ್ಥಾನ ಪಡೆದ ಕಮಲಾಕ್ಷಿ ಚೌಗಲಾ ಅವರಿಗೆ ₹1,000 ನಗದು ಬಹುಮಾನ ನೀಡಿ ಶುಭ ಹಾರೈಸಿದರು.
ದ್ವಿತೀಯ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿಗಳು ಸಭಾಂಗಣವನ್ನು ಆಕರ್ಷಕವಾಗಿ ಅಲಂಕರಿಸಿ, ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪೆನ್ನು ಹಾಗೂ ಚಾಕಲೇಟ್ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಬಳಿಕ ಸಾವಿತ್ರಿ ಗೋಕಾಕ ಹಾಗೂ ಪೂಜಾ ತುಪ್ಪದ ಅವರು ವಿವಿಧ ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮನರಂಜನೆ ನೀಡಿದರು.
ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಸಂಗಮೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶ್ವೇತಾ ಕಾಡಶೆಟ್ಟಿ ಹಾಗೂ ಲಕ್ಷ್ಮೀ ಸಪ್ತಸಾಗರ ಕಾರ್ಯಕ್ರಮ ನಿರೂಪಿಸಿದರು. ಪ್ರಿಯಾಂಕಾ ಹೊಸಪೇಟೆ ವಂದಿಸಿದರು. ಪ್ರಾಚಾರ್ಯ ಪಿ.ಸಿ. ಕಂಬಾರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕ ಮಹಾವೀರ ಕುರಾಡೆ, ಹಿರಿಯರಾದ ಮುತ್ತಪ್ಪ ಬಾಳೋಜಿ, ಪ್ರಾಧ್ಯಾಪಕರಾದ ಡಾ. ಪಿ.ಬಿ. ಕೊರವಿ, ರೆಡ್‌ಕ್ರಾಸ್ ಘಟಕದ ಸಂಯೋಜಕ ಪ್ರದೀಪ್ ನಾಯಕ್, ಎಚ್.ಎಂ. ಕಂಕಣವಾಡಿ, ಬಿ.ಎಸ್. ಸವಸುದ್ದಿ, ಕೆ.ಬಿ. ಕೊಚೇರಿ, ವಿ.ಕೆ. ಹುಂಡರಗಿ, ಎಂ.ಎಸ್. ಮರಡಿ, ರತ್ನಾ ಖೇತಗೌಡರ, ಎ.ಎಲ್. ಗುರವ, ಗ್ರಂಥಪಾಲಕಿ ಶ್ರದ್ಧಾ ಹಿರೇಮಠ, ಕಚೇರಿ ಅಧೀಕ್ಷಕ ಹುಸೇನ ಯಲಿಗಾರ, ಸಹಾಯಕ ಅಧೀಕ್ಷಕ ಸಂಗಣ್ಣ ತೇಲಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this