ಅಧಿವೇಶನಕ್ಕೆ ಅಡ್ಡಿ ಸೃಷ್ಟಿಸುವುದು ಕಾಂಗ್ರೆಸ್ ಉದ್ದೇಶ: ರಮೇಶ ಜಿಗಜಿಣಗಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 14:
ಸಂಸತ್ತಿನಲ್ಲಿ ದೇಶದ ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸದೆ ಮುಂಗಾರು ಅಧಿವೇಶನ ಸುಸೂತ್ರವಾಗಿ ನಡೆಯಲು ಕಾಂಗ್ರೆಸ್ ಅಡ್ಡಿಪಡಿಸಿದೆ. ಅಧಿವೇಶನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿಸುವ ಮೂಲಕ ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಹುನ್ನಾರ ನಡೆಸಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತದತ್ತ ದೇಶದ ಜನರು ಹೆಜ್ಜೆ ಇಡುತ್ತಿರುವುದರಿಂದ ಕಾಂಗ್ರೆಸ್ ಹತಾಶಗೊಂಡಿದೆ. ಚುನಾವಣೆಯಲ್ಲಿ ಸೋತಾಗ ಇವಿಎಂಗಳನ್ನು ದೂಷಿಸುವುದು, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು, ದಂಗೆ ಹಾಗೂ ಅಶಾಂತಿಗೆ ಪ್ರಚೋದನೆ ನೀಡುವುದು ಕಾಂಗ್ರೆಸ್‌ನ ನಿರಂತರ ಚಟುವಟಿಕೆಯಾಗಿದೆ ಎಂದು ಅವರು ಟೀಕಿಸಿದ್ದಾರೆ.
ಪ್ರಸಕ್ತ ಅಧಿವೇಶನದಲ್ಲಿ ವಂದೇ ಮಾತರಂ ಮಸೂದೆ ಸೇರಿದಂತೆ 12 ಮಸೂದೆಗಳು ಅಂಗೀಕಾರವಾಗಿವೆ. ವಿರೋಧ ಪಕ್ಷಗಳ ಸದಸ್ಯರು ಪ್ರತಿಭಟನೆಯಲ್ಲಿ ನಿರತರಾಗಿದ್ದ ಸಂದರ್ಭದಲ್ಲಿ 11 ಮಸೂದೆಗಳು ಚರ್ಚೆಯಿಲ್ಲದೆ ಅಂಗೀಕಾರವಾಗಿವೆ. ಸ್ವಾತಂತ್ರ್ಯ ಹೋರಾಟಕ್ಕೆ ಸ್ಫೂರ್ತಿಯಾಗಿದ್ದ ವಂದೇ ಮಾತರಂ ಗೀತೆಗೆ ಕಾಂಗ್ರೆಸ್ ಆರಂಭದಿಂದಲೂ ವಿರೋಧ ವ್ಯಕ್ತಪಡಿಸುತ್ತ ಬಂದಿದೆ. ಇದೀಗ ಮೋದಿ ಸರ್ಕಾರ ವಂದೇ ಮಾತರಂ ರಾಷ್ಟ್ರಗೀತೆಗೆ ಸಮಾನವಾದ ಸ್ಥಾನಮಾನ ಕಲ್ಪಿಸಿರುವುದು ಕಾಂಗ್ರೆಸ್‌ಗೆ ಅಸಹನೀಯವಾಗಿದೆ ಎಂದು ಜಿಗಜಿಣಗಿ ಹೇಳಿದ್ದಾರೆ.
ವಿದೇಶಗಳಿಂದ ವಿವಿಧ ಸಂಘ-ಸಂಸ್ಥೆಗಳಿಗೆ ಹರಿದುಬರುವ ದೇಣಿಗೆಗೆ ನಿಯಂತ್ರಣ ಹೇರುವ ಮೂಲಕ ಮತಾಂತರ ಸೇರಿದಂತೆ ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕ್ರಮ ಕೈಗೊಂಡಿದೆ. ಇಂತಹ ಮಹತ್ವದ ಕ್ರಮಗಳಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿ ಅಧಿವೇಶನದ ಕಲಾಪಕ್ಕೆ ಅಡ್ಡಿಪಡಿಸಿದೆ ಎಂದು ಅವರು ಆರೋಪಿಸಿದ್ದಾರೆ.
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸರ್ಕಾರ ಆರಂಭದಿಂದಲೂ ಕಠಿಣ ಕ್ರಮ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದರು. ಆದರೆ, ಜಾರ್ಖಂಡ್‌ನಲ್ಲಿ ತಮ್ಮದೇ ಪಕ್ಷದ ವಿರುದ್ಧ ನಡೆದ ಪ್ರತಿಭಟನೆ ವೇಳೆ ಲಾಠಿಚಾರ್ಜ್ ನಡೆದಾಗ ರಾಹುಲ್ ಗಾಂಧಿ ಏಕೆ ಧ್ವನಿ ಎತ್ತಲಿಲ್ಲ ಎಂದು ಜಿಗಜಿಣಗಿ ಪ್ರಶ್ನಿಸಿದ್ದಾರೆ.
ದೆಹಲಿಯ ಜಂತರ್‌ಮಂತರ್‌ಗೆ ತೆರಳಿದ ರಾಹುಲ್ ಗಾಂಧಿ ಜಾರ್ಖಂಡ್‌ಗೆ ಏಕೆ ತೆರಳಲಿಲ್ಲ ಎಂಬುದನ್ನು ಜನ ಗಮನಿಸುತ್ತಿದ್ದಾರೆ. ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಪ್ರಯತ್ನವನ್ನು ಜನ ಎಂದಿಗೂ ಸಹಿಸುವುದಿಲ್ಲ. ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this