ಸಪ್ತಸಾಗರ ವಾರ್ತೆ,ವಿಜಯಪುರ, ಆ. 14:
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿಜಯಪುರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ ವೃತ್ತ, ಬಸವೇಶ್ವರ ವೃತ್ತದ ಮಾರ್ಗವಾಗಿ ಶಿವಾಜಿ ವೃತ್ತದವರೆಗೆ ಬೃಹತ್ ತಿರಂಗಾ ಯಾತ್ರೆ ನಡೆಯಿತು.
ಸುಮಾರು 300 ಮೀಟರ್ ಉದ್ದದ ರಾಷ್ಟ್ರಧ್ವಜ ಯಾತ್ರೆಯ ಪ್ರಮುಖ ಆಕರ್ಷಣೆಯಾಗಿತ್ತು. ನೂರಾರು ವಿದ್ಯಾರ್ಥಿಗಳು ಹಾಗೂ ಯುವಕರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಶಿಸ್ತಿನಿಂದ ಯಾತ್ರೆಯಲ್ಲಿ ಪಾಲ್ಗೊಂಡರು. ಯಾತ್ರೆಯುದ್ದಕ್ಕೂ ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಸೇರಿದಂತೆ ದೇಶಭಕ್ತಿ ಘೋಷಣೆಗಳು ಮೊಳಗಿದವು.
ನಗರದ ಪ್ರಮುಖ ರಸ್ತೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುತ್ತಿದ್ದ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ಮಕ್ಕಳು, ಯುವಕರು ಹಾಗೂ ಸಾರ್ವಜನಿಕರು ಯಾತ್ರೆಯನ್ನು ವೀಕ್ಷಿಸಿ ಮೊಬೈಲ್ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಬಿವಿಪಿ ಕೇಂದ್ರ ಕಾರ್ಯಸಮಿತಿ ಸದಸ್ಯ ಸಚಿನ್ ಕುಳಗೇರಿ, ರಾಷ್ಟ್ರಧ್ವಜ ಕೇವಲ ಒಂದು ಧ್ವಜವಲ್ಲ; ಅದು ದೇಶದ ಸ್ವಾಭಿಮಾನ, ಸಾರ್ವಭೌಮತ್ವ, ಏಕತೆ ಮತ್ತು ಅಖಂಡತೆಯ ಪ್ರತೀಕವಾಗಿದೆ ಎಂದರು. ಯುವಕರು ದೇಶದ ಇತಿಹಾಸ, ಸ್ವಾತಂತ್ರ್ಯ ಹೋರಾಟ ಹಾಗೂ ದೇಶಕ್ಕಾಗಿ ತ್ಯಾಗ ಮಾಡಿದ ಮಹನೀಯರ ಆದರ್ಶಗಳನ್ನು ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.
ಸ್ವಾತಂತ್ರ್ಯವನ್ನು ಆಚರಿಸುವುದಷ್ಟೇ ಅಲ್ಲದೆ, ದೇಶದ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವ ಜವಾಬ್ದಾರಿಯನ್ನು ಯುವಜನತೆ ವಹಿಸಿಕೊಳ್ಳಬೇಕು. ಜಾತಿ, ಭಾಷೆ, ಪ್ರದೇಶ ಸೇರಿದಂತೆ ಎಲ್ಲ ಭೇದಗಳನ್ನು ಮೀರಿ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಕಾರ್ಯದಲ್ಲಿ ವಿದ್ಯಾರ್ಥಿಗಳು ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಹೇಳಿದರು.
ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರಡ್ಡಿ, ಬಸವರಾಜ ಯಾದವಾಡ, ಹರ್ಷಾ ನಾಯಕ, ಅಮಿತಕುಮಾರ ಬಿರಾದಾರ, ಎಂ.ಎಸ್. ಬಿರಾದಾರ, ಹಣಮಂತ ಹಳ್ಳೂರ, ಸಂಜು ಕುಲಕರ್ಣಿ, ಸುರೇಖಾ ಕುಲಕರ್ಣಿ, ಮಂಜುನಾಥ ಹಳ್ಳಿ, ಬಾಲಾಜಿ ಬಿರಾದಾರ, ಸ್ನೇಹಾ ಚವಾಣ್, ಸೃಷ್ಟಿ ಚವಾಣ್, ಐಶ್ವರ್ಯ ಸಸಂಗಿ, ಸುನೀಲ ರಾಠೋಡ, ದುಂಡಪ್ಪ ನೆಲೋಗಿ, ಗಂಗಾಧರ ಯಾದವಾಡ, ಕಾರ್ತಿಕ ಬಿರಾದಾರ, ಪ್ರವೀಣ ಮಾದರ ಸೇರಿದಂತೆ ಎಬಿವಿಪಿ ಪದಾಧಿಕಾರಿಗಳು, ಕಾರ್ಯಕರ್ತರು, ವಿದ್ಯಾರ್ಥಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಯಾತ್ರೆಗೆ ಎಬಿವಿಪಿ ಕೇಂದ್ರ ಕಾರ್ಯಸಮಿತಿ ಸದಸ್ಯ ಸಚಿನ್ ಕುಳಗೇರಿ, ಡಿವೈಎಸ್ಪಿ ನಾಗರಾಜ, ಪೊಲೀಸ್ ಅಧಿಕಾರಿಗಳಾದ ಪ್ರದೀಪ ತಳ್ಳಿಕೇರಿ, ಸಂಜು ಬಳಿಗಾರ ಹಾಗೂ ವಕೀಲ ಬಸವರಾಜ ಯಾದವಾಡ ಚಾಲನೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಸಾಮಾಜಿಕ ಜವಾಬ್ದಾರಿ, ರಾಷ್ಟ್ರ ನಿರ್ಮಾಣದ ಚಿಂತನೆ ಹಾಗೂ ದೇಶಭಕ್ತಿಯ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಎಬಿವಿಪಿ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಲಾಯಿತು.
ವಂದೇ ಮಾತರಂಗೆ 150 ವರ್ಷಗಳ ಹಿನ್ನೆಲೆ: ದೇಶದ ಪ್ರತಿಯೊಬ್ಬರಿಗೂ ‘ವಂದೇ ಮಾತರಂ’ನ ಮಹತ್ವ ಹಾಗೂ ಅರ್ಥವನ್ನು ತಿಳಿಸುವ ಉದ್ದೇಶದಿಂದ ಎಬಿವಿಪಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಸಚಿನ್ ಕುಳಗೇರಿ ತಿಳಿಸಿದರು.
ದೇಶದ ಏಕತೆ, ಅಖಂಡತೆ ಹಾಗೂ ರಾಷ್ಟ್ರಭಕ್ತಿಯ ಸಂದೇಶ ಸಾರಿದ 300 ಮೀಟರ್ ಉದ್ದದ ತಿರಂಗಾ ಯಾತ್ರೆ


