ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ.ಆನಂದ ಕೆ. ಅವರಿಂದ ರಾಷ್ಟ್ರಧ್ವಜಾರೋಹಣ

ಸಪ್ತಸಾಗರ ವಾರ್ತೆ,ವಿಜಯಪುರ, ಆ.15:
ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಜಯಪುರ ನಗರದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿರುವ ಗಾಂಧಿ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು.
ನಂತರ ಮಾತನಾಡಿದ ಅವರು, ದೇಶ ಇಂದು ಅನುಭವಿಸುತ್ತಿರುವ ಸ್ವಾತಂತ್ರ್ಯವು ಸುಲಭವಾಗಿ ದೊರೆತದ್ದಲ್ಲ. ಅಸಂಖ್ಯಾತ ವೀರ ಧೀರರ ತ್ಯಾಗ, ಬಲಿದಾನ ಹಾಗೂ ಹೋರಾಟದ ಫಲವಾಗಿ ಸ್ವಾತಂತ್ರ್ಯ ಲಭಿಸಿದೆ. ಇಂತಹ ಮಹನೀಯರ ತ್ಯಾಗವನ್ನು ಸ್ಮರಿಸಿ, ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.
ವಿಜಯಪುರ ಜಿಲ್ಲೆಯ ಗಾಂಧಿ ಭವನವು ಮಾದರಿಯ ತಾಣವಾಗಿದ್ದು, ಪ್ರಶಾಂತ ವಾತಾವರಣದಲ್ಲಿ ನಿರ್ಮಾಣಗೊಂಡಿರುವ ಈ ಭವನ ಪ್ರತಿಯೊಬ್ಬರಿಗೂ ಸ್ಫೂರ್ತಿ ನೀಡುತ್ತದೆ. ಮಹಾತ್ಮ ಗಾಂಧೀಜಿಯವರು ತಮ್ಮ ಜೀವನದುದ್ದಕ್ಕೂ ಪ್ರತಿಪಾದಿಸಿದ ಅಹಿಂಸೆ, ಸತ್ಯ, ಶಾಂತಿ ಮತ್ತು ಸರಳತೆಯಂತಹ ಉನ್ನತ ಮೌಲ್ಯಗಳು ಪ್ರತಿಯೊಬ್ಬರ ಬದುಕಿಗೂ ದಾರಿದೀಪವಾಗಿವೆ ಎಂದರು.
ಗಾಂಧೀಜಿಯವರ ಹೋರಾಟದ ಹಾದಿ, ವಿಚಾರಧಾರೆ ಹಾಗೂ ಬದುಕಿನ ಮೌಲ್ಯಗಳ ಸಮಗ್ರ ಮಾಹಿತಿಯನ್ನು ಗಾಂಧಿ ಭವನ ಒಳಗೊಂಡಿದೆ. ಇಂದಿನ ಯುವ ಪೀಳಿಗೆ ಗಾಂಧಿ ಭವನಕ್ಕೆ ಭೇಟಿ ನೀಡಿ, ಗಾಂಧೀಜಿಯವರ ಜೀವನದ ಪ್ರಮುಖ ಘಟನೆಗಳು ಹಾಗೂ ಆದರ್ಶಗಳನ್ನು ತಿಳಿದುಕೊಂಡು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಗಾಂಧಿ ಭವನದ ಆವರಣವನ್ನು ವೀಕ್ಷಿಸಿ, ಉತ್ತಮ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಡಾ. ಸಂತೋಷಕುಮಾರ, ಮಹಿಳಾ ಅಧಿಕಾರಿಗಳಾದ ದೀಪಾಕ್ಷಿ, ಜಾನಕಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಅಮರೇಶ ದೊಡಮನಿ, ವಿಜಯಕೃಷ್ಣ, ವೈ. ಭವ್ಯ, ವೈಷ್ಣವಿ ಭಗವತಿ, ಮಿಥುನ, ನಾಗೇಶ, ರತ್ನಾಂಜಲಿ, ಗಾಂಧಿ ಭವನ ನಿರ್ವಹಣಾ ಸಮಿತಿ ಸದಸ್ಯರಾದ ಫಿರೋಜ್ ರೋಜಿಂದಾರ, ಪೀಟರ್ ಅಲೆಕ್ಸಾಂಡರ್, ನೇತಾಜಿ ಗಾಂಧಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this