ಖರ್ಗೆ ಭಾಗವಹಿಸಿದ ಸ್ಥಳ ‘ಶುದ್ಧೀಕರಣ’ಕ್ಕೆ ಖಂಡನೆ: ಬಿಜೆಪಿ ನಾಯಕರ ಮನಸ್ಥಿತಿಗೆ ಶುದ್ಧೀಕರಣ ಅಗತ್ಯ- ಶ್ರೀಶೈಲ ಛಲವಾದಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ.15:
ಉತ್ತರಾಖಂಡದ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಹಾಗೂ ಹಿರಿಯ ರಾಜಕೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ್ದ ಕಾರ್ಯಕ್ರಮದ ಬಳಿಕ ಬಿಜೆಪಿ ಹಾಗೂ ಸಂಘ ಪರಿವಾರದವರು ಸ್ಥಳವನ್ನು ಶುದ್ಧೀಕರಣ ಮಾಡಿರುವುದು ಜಾತಿ ಪೂರ್ವಗ್ರಹ, ಅಸ್ಪೃಶ್ಯತೆ ಹಾಗೂ ಸಂವಿಧಾನ ವಿರೋಧಿ ಮನಸ್ಥಿತಿಯ ಪ್ರತೀಕವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಶ್ರೀಶೈಲ ಛಲವಾದಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ಹಿರಿಯ ನಾಯಕ, ಹಲವು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಿದ ಸ್ಥಳವನ್ನೇ ‘ಅಶುದ್ಧ’ ಎಂದು ಪರಿಗಣಿಸಿ ಶುದ್ಧೀಕರಣ ನಡೆಸಿರುವುದು ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯವಾಗಿದೆ ಎಂದು ಹೇಳಿದ್ದಾರೆ.
“ಇದು ಖರ್ಗೆ ಅವರಿಗೆ ಮಾಡಿದ ಅವಮಾನ ಮಾತ್ರವಲ್ಲ; ದೇಶದ ಸಂವಿಧಾನಕ್ಕೆ, ಸಮಾನತೆಗೆ ಮತ್ತು ಸಾಮಾಜಿಕ ನ್ಯಾಯದ ಆಶಯಗಳಿಗೆ ಮಾಡಿದ ಅಪಮಾನ” ಎಂದು ಛಲವಾದಿ ಕಿಡಿಕಾರಿದ್ದಾರೆ.
ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಹಾಗೂ ಮಾನವ ಘನತೆಯ ಹಕ್ಕು ನೀಡಿದೆ. ಆದರೆ ಇಂತಹ ಘಟನೆಗಳು ಸಮಾಜದಲ್ಲಿ ಇನ್ನೂ ಜಾತಿ ಆಧಾರಿತ ಪೂರ್ವಗ್ರಹ ಮತ್ತು ಅಸ್ಪೃಶ್ಯತೆಯ ಮನೋಭಾವ ಜೀವಂತವಾಗಿರುವುದನ್ನು ತೋರಿಸುತ್ತವೆ. ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಬೇಕಾದ ಸಂದರ್ಭದಲ್ಲಿ ಇಂತಹ ಕೃತ್ಯಗಳು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತವೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಶುದ್ಧೀಕರಣಕ್ಕೆ ಒಳಗಾಗಬೇಕಿರುವುದು ರಾಮಲೀಲಾ ಮೈದಾನವಲ್ಲ; ಜಾತಿ ಪೂರ್ವಗ್ರಹದಿಂದ ಕೂಡಿರುವ ಬಿಜೆಪಿ ನಾಯಕರ ಮನಸ್ಥಿತಿ” ಎಂದು ಶ್ರೀಶೈಲ ಛಲವಾದಿ ವ್ಯಂಗ್ಯವಾಡಿದ್ದಾರೆ.
ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯದ ವಿರುದ್ಧ ದೇಶದಾದ್ಯಂತ ಜನಜಾಗೃತಿ ಮೂಡಬೇಕಿದೆ. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಎಲ್ಲರೂ ಇಂತಹ ಕೃತ್ಯಗಳನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರಾಜ್ಯ ಸಂಘಟನಾ ಸಂಚಾಲಕ ಹೆಚ್. ಮಾಂತೇಶ, ಬೆಳಗಾವಿ ವಿಭಾಗೀಯ ಸಂಚಾಲಕ ಹೆಚ್.ಎನ್. ನೀಲನಾಯಕ, ಬಿ. ಸುರೇಶ, ಎನ್. ಶಂಕರ, ಬೆಂಗಳೂರು ವಿಭಾಗೀಯ ಸಂಚಾಲಕ ಭುವನೇಶ, ಬಾಗಲಕೋಟೆ ಜಿಲ್ಲಾ ಸಂಚಾಲಕ ಬಿ.ಎಲ್. ಭಜಂತ್ರಿ ಸೇರಿದಂತೆ ರಾಜ್ಯ ಸಮಿತಿಯ ಪದಾಧಿಕಾರಿಗಳು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Share this