ಜಿಲ್ಲೆಯಲ್ಲಿ ಬರ ಎದುರಿಸಲು ಸನ್ನದ್ಧ: ಸಚಿವ ಎಂ.ಬಿ. ಪಾಟೀಲಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿ; ವಿಜಯಪುರ ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ

ವಿಜಯಪುರ, ಆ.15: ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಎದುರಾಗಬಹುದಾದ ಬರ ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ಹಿಂದಿನ ಯೋಜನೆಗಳ ಜೊತೆಗೆ ಹೊಸದಾಗಿ ರೈತ ಮಿತ್ರ, ಗ್ರಾಮಾನುಭವ, ಯುವ ಯುಗ, ಯುವ ಉದ್ಯೋಗ ಸೇತು, ಪ್ರಜಾಸೇವೆ ಇಲಾಖೆ, ಭೂ ಗ್ಯಾರಂಟಿ, ಕರ್ನಾಟಕ ಮೊಬಿಲಿಟಿ ಗ್ರೀಡ್ ಮಿಷನ್ ಹಾಗೂ ತೇಗದ ಸಿರಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸರ್ಕಾರ ಮುಂದಾಗಿದೆ ಎಂದರು.

ವಿಜಯಪುರ ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ 21.50 ಲಕ್ಷ, ಗೃಹಲಕ್ಷ್ಮಿ ಯೋಜನೆಯಡಿ 5.3 ಲಕ್ಷ, ಗೃಹಜ್ಯೋತಿ ಯೋಜನೆಯಡಿ 4.65 ಲಕ್ಷ ಹಾಗೂ ಯುವನಿಧಿಯಡಿ 2.26 ಲಕ್ಷ ಫಲಾನುಭವಿಗಳಿದ್ದು, ವಿವಿಧ ಯೋಜನೆಗಳಡಿ ಸಾವಿರಾರು ಕೋಟಿ ರೂ.ಗಳ ನೆರವು ನೀಡಲಾಗಿದೆ ಎಂದು ವಿವರಿಸಿದರು.

ವಿಮಾನ ನಿಲ್ದಾಣ ಶೀಘ್ರ ಕಾರ್ಯಾರಂಭ: ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಪ್ರಕರಣದಲ್ಲಿ ಜುಲೈ 29ರಂದು ಅನುಕೂಲಕರ ತೀರ್ಪು ಬಂದಿದ್ದು, ಉಳಿದ ಪರಿಸರ ಅನುಮತಿಗಳನ್ನು ತ್ವರಿತವಾಗಿ ಪಡೆಯಲು ಕ್ರಮ ಕೈಗೊಳ್ಳಲಾಗಿದೆ. ₹618 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದ್ದು, ಡಿಜಿಸಿಎ ಪರಿಶೀಲನೆ ಬಳಿಕ ಕೆಲವೇ ತಿಂಗಳಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭಿಸುವ ನಿರೀಕ್ಷೆಯಿದೆ ಎಂದರು.

ಕೈಗಾರಿಕೆ–ಉದ್ಯೋಗಕ್ಕೆ ಒತ್ತು: 2025ರ ಆಗಸ್ಟ್‌ನಿಂದ 2026ರ ಜುಲೈವರೆಗೆ ಜಿಲ್ಲೆಯಲ್ಲಿ 16,440 ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನೋಂದಣಿಯಾಗಿದ್ದು, ₹42.92 ಕೋಟಿ ಬಂಡವಾಳ ಹೂಡಿಕೆ ಹಾಗೂ 1.69 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಿದೆ. ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ರಿಲಯನ್ಸ್, ಚತುರ್ಮುಖ ಡೇರಿ ಹಾಗೂ ಟೆರ್ರಾ ಸರ್ಕೂಟ್ಸ್ ಸಂಸ್ಥೆಗಳ ಘಟಕಗಳಿಂದ ಮತ್ತಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.

ಬರದ ಪರಿಸ್ಥಿತಿ: ಜಿಲ್ಲೆಯಲ್ಲಿ ವಾಡಿಕೆ ಮಳೆ 196.7 ಮಿ.ಮೀ. ಇದ್ದು, ಇದುವರೆಗೆ 163.5 ಮಿ.ಮೀ. ಮಳೆಯಾಗಿದೆ. ಆಗಸ್ಟ್‌ನಲ್ಲಿ ಶೇ.46ರಷ್ಟು ಮಳೆ ಕೊರತೆಯಾಗಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು 175 ಕೆರೆ ಹಾಗೂ ಬಾಂದಾರಗಳನ್ನು ತುಂಬಿಸಲು ಕಾಲುವೆ ಜಾಲದ ಮೂಲಕ ನೀರು ಹರಿಸಲಾಗಿದೆ. ಫಸಲ್ ಬಿಮಾ ಯೋಜನೆಯಡಿ 89 ಸಾವಿರ ರೈತರಿಗೆ ₹235 ಕೋಟಿ ಪರಿಹಾರ ಜಮೆಯಾಗಿದೆ ಎಂದರು.

ನೀರು–ನಗರಾಭಿವೃದ್ಧಿ: ಶಾಶ್ವತ ಕುಡಿಯುವ ನೀರಿನ ಯೋಜನೆಗೆ ₹3,059 ಕೋಟಿ ನಿಗದಿಪಡಿಸಿದ್ದು, ₹1,994 ಕೋಟಿ ವೆಚ್ಚವಾಗಿದೆ. ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಂತ-2ರಡಿ ವಿಜಯಪುರ ಮಹಾನಗರ ಪಾಲಿಕೆಗೆ ₹150 ಕೋಟಿ ಹಂಚಿಕೆಯಾಗಿದ್ದು, ರಸ್ತೆ ಮತ್ತು ಮಳೆನೀರು ಚರಂಡಿ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು.

ಶಿಕ್ಷಣ–ಆರೋಗ್ಯ: ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಶೇ.94 ಹಾಗೂ ಪಿಯುಸಿಯಲ್ಲಿ ಶೇ.90.29 ಸಾಧನೆ ಮಾಡಿದ್ದು, ಪಿಯುಸಿಯಲ್ಲಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದಿದೆ. ಮೂವರು ವಿದ್ಯಾರ್ಥಿನಿಯರು ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಜಿಲ್ಲಾ ಆಸ್ಪತ್ರೆಯಲ್ಲಿ ಟ್ರಾಮಾ ಕೇರ್, ತಾಯಿ-ಮಕ್ಕಳ ಆಸ್ಪತ್ರೆಯ ಹಾಲು ಸಂಗ್ರಹಣಾ ಕೇಂದ್ರ, ಕೀಮೋಥೆರಪಿ ಹಾಗೂ ಕಣ್ಣಿನ ಶಸ್ತ್ರಚಿಕಿತ್ಸಾ ಘಟಕಗಳು ಆರಂಭಗೊಂಡಿವೆ ಎಂದರು.

ಮಾದಕ ವಸ್ತುಗಳ ವಿರುದ್ಧ ‘ಆಪರೇಷನ್ ರೈಜ್’ ಹಾಗೂ ‘ಬೇಡಾ ಬ್ರೊ’ ಅಭಿಯಾನ, ನಗರದಲ್ಲಿ ₹5 ಕೋಟಿ ವೆಚ್ಚದ ಐಟಿಎಂಎಸ್ ಹಾಗೂ ₹2.31 ಕೋಟಿ ವೆಚ್ಚದ ಸಂಚಾರ ಸುಧಾರಣಾ ಯೋಜನೆ ಜಾರಿಯಲ್ಲಿವೆ. 47 ಪ್ರಮುಖ ಸ್ಥಳಗಳಲ್ಲಿ 147 ಸಿಸಿಟಿವಿ ಕ್ಯಾಮೆರಾ, 25 ಪಿಎ ವ್ಯವಸ್ಥೆ ಹಾಗೂ ಅತ್ಯಾಧುನಿಕ ಸಂಚಾರ ಸಿಗ್ನಲ್ ಅಳವಡಿಸಲಾಗುತ್ತಿದೆ ಎಂದರು.

ವೃಕ್ಷಾಭಿಯಾನದಡಿ 1.50 ಕೋಟಿ ಸಸಿಗಳನ್ನು ಬೆಳೆಸಿ ವಿತರಿಸಲಾಗಿದ್ದು, 17 ಸಾವಿರ ಎಕರೆ ಪ್ರದೇಶದಲ್ಲಿ ನೆಡುತೋಪು ನಿರ್ಮಿಸಲಾಗಿದೆ. ವೃಕ್ಷಾಭಿಯಾನ-2ರಲ್ಲಿ ಐದು ಕೋಟಿ ಸಸಿಗಳನ್ನು ಬೆಳೆಸುವ ಗುರಿ ಹೊಂದಲಾಗಿದೆ. ವಿಜಯಪುರದ ಏರ್ ಕ್ವಾಲಿಟಿ ಇಂಡೆಕ್ಸ್ 34ಕ್ಕೆ ತಲುಪಿ ದೇಶದ ಸ್ವಚ್ಛ ಗಾಳಿ ಹೊಂದಿದ ನಗರಗಳ ಪೈಕಿ ಮೂರನೇ ಸ್ಥಾನ ಪಡೆದಿದೆ ಎಂದರು.

ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರರನ್ನು ಸ್ಮರಿಸಿದ ಸಚಿವರು, ಜಾತಿ, ಧರ್ಮ ಹಾಗೂ ಸಿದ್ಧಾಂತಗಳನ್ನು ಮೀರಿ ಏಕತೆಯಿಂದ ದೇಶದ ಅಭಿವೃದ್ಧಿಗೆ ಶ್ರಮಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಅಂಗಾಂಗ ದಾನಿಗಳ ಸನ್ಮಾನ, ದೃಷ್ಟಿದೋಷವುಳ್ಳ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್‌ಟಾಪ್, ಕ್ರೀಡಾ ವೀಲ್‌ಚೇರ್ ಹಾಗೂ 13 ಸೈಕಲ್‌ಗಳ ವಿತರಣೆ ನೆರವೇರಿಸಲಾಯಿತು. ವೃಕ್ಷೋಥಾನ್ ಓಟದ ನೋಂದಣಿಗೂ ಚಾಲನೆ ನೀಡಲಾಯಿತು.

ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ, ಮೇಯರ್ ಎಂ.ಎಸ್. ಕರಡಿ, ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಪಂ ಸಿಇಒ ರಿಷಿ ಆನಂದ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

Share this