ವಿಜಯಪುರ ಜಿಲ್ಲೆಯಲ್ಲಿ ಬರ ಪರಿಸ್ಥಿತಿ, ಬೆಳೆ ಹಾನಿ ಪರಿಶೀಲಿಸಿದ ಜಿಲ್ಲಾ ಉಸ್ತುವಾರಿ ಸಚಿವ
ಸಪ್ತಸಾಗರ ವಾರ್ತೆ,ವಿಜಯಪುರ, ಆ.16 : ತೀವ್ರ ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಎದುರಾಗಿರುವ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರು ಭಾನುವಾರ ಜಿಲ್ಲೆಯ ವಿವಿಧೆಡೆ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಇಂಡಿ ತಾಲೂಕಿನ ಹೊರ್ತಿ ಗ್ರಾಮದ ರೈತ ಮಾಳಪ್ಪ ಸೊನಕನಹಳ್ಳಿ ಅವರ ಆರು ಎಕರೆ ಜಮೀನಿಗೆ ಭೇಟಿ ನೀಡಿದ ಸಚಿವರು, ಒಣಗುತ್ತಿರುವ ತೊಗರಿ ಬೆಳೆಯನ್ನು ವೀಕ್ಷಿಸಿದರು. ರೈತರ ಸಮಸ್ಯೆಗಳನ್ನು ಆಲಿಸಿದ ಅವರು, “ಸಂಕಷ್ಟದಲ್ಲಿರುವ ರೈತರ ಪರವಾಗಿ ನಮ್ಮ ಸರ್ಕಾರ ನಿಲ್ಲಲಿದೆ. ರೈತರ ಕಷ್ಟ-ನಷ್ಟಗಳನ್ನು ಅರಿಯಲು ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡಿದ್ದು, ವೈಜ್ಞಾನಿಕ ಬೆಳೆ ಹಾನಿ ವರದಿ ಸಿದ್ಧಪಡಿಸಲು ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ” ಎಂದರು.
ವೈಜ್ಞಾನಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ರೈತರಿಗೆ ಸೂಕ್ತ ಪರಿಹಾರ ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಇಂಡಿಯಲ್ಲಿ ತೀವ್ರ ಬೆಳೆ ಹಾನಿ
ಇಂಡಿ ತಾಲೂಕಿನಲ್ಲಿ ಬಹುತೇಕ ಬೆಳೆಗಳು ಸಂಪೂರ್ಣ ಹಾನಿಗೀಡಾಗಿವೆ. ಕಳೆದ ವಾರ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದಾಗ ಶೇ.80ರಷ್ಟು ಬೆಳೆ ಹಾನಿಯಾಗಿದ್ದರೆ, ಇದೀಗ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಒಟ್ಟಾರೆ ಬೆಳೆ ಹಾನಿ ಶೇ.100ರಷ್ಟಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.
“ರೈತರ ಸಂಕಷ್ಟವನ್ನು ಖುದ್ದಾಗಿ ನೋಡಿದ್ದೇನೆ. ಅವರೆಲ್ಲ ತೀವ್ರ ಸಂಕಷ್ಟದಲ್ಲಿದ್ದಾರೆ. ಈ ವಾಸ್ತವವನ್ನು ಅರಿತಿರುವ ಸರ್ಕಾರ ರೈತರ ನೆರವಿಗೆ ಬರಲಿದೆ” ಎಂದು ಅವರು ಹೇಳಿದರು.
ಇಂಡಿ ತಾಲೂಕಿನಲ್ಲಿ 42 ಸಾವಿರ ರೈತರು ಬೆಳೆ ವಿಮೆ ನೋಂದಣಿ ಮಾಡಿಕೊಂಡಿದ್ದು, ಜಿಲ್ಲಾದ್ಯಂತ ಒಟ್ಟು 2.50 ಲಕ್ಷ ರೈತರು ಬೆಳೆ ವಿಮೆ ಮಾಡಿಸಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.
ಮಳೆ ಕೊರತೆಯಿಂದ ಬಿತ್ತನೆ ಕುಂಠಿತ
ಜಿಲ್ಲೆಯ ಹಲವು ತಾಲೂಕುಗಳಲ್ಲಿ ಕನಿಷ್ಠ ಪ್ರಮಾಣದಲ್ಲಿ ಮಾತ್ರ ಬಿತ್ತನೆಯಾಗಿದೆ. ಮುಂಗಾರು ಮಳೆ ಸಕಾಲದಲ್ಲಿ ಬಾರದ ಹಿನ್ನೆಲೆಯಲ್ಲಿ ಮಳೆಯಾಶ್ರಿತ ಬೆಳೆಗಳ ಬೆಳವಣಿಗೆ ಸಂಪೂರ್ಣ ಕುಂಠಿತವಾಗಿದೆ. ಜಮೀನುಗಳಿಗೆ ನೇರ ಭೇಟಿ ನೀಡಿ ಬೆಳೆಗಳ ವಾಸ್ತವ ಸ್ಥಿತಿ ಪರಿಶೀಲಿಸುವುದರ ಜೊತೆಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವಿನ ಲಭ್ಯತೆಯ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
“ಜಮೀನುಗಳಲ್ಲಿ ತೇವಾಂಶವೇ ಇಲ್ಲ. ಬೆಳೆಗಳು ಕೇವಲ ಒಂದು ಅಡಿಯಷ್ಟು ಬೆಳೆದಿವೆ. ಅಗತ್ಯ ಪ್ರಮಾಣದಲ್ಲಿ ಮಳೆಯಾಗದ ಕಾರಣ ತೇವಾಂಶದ ಕೊರತೆಯಿಂದ ಬೆಳೆಗಳು ಒಣಗುತ್ತಿವೆ. ನೀರು ಸರಿಯಾಗಿ ಹಿಂಗದೇ ಇರುವುದರಿಂದಲೂ ಬೆಳೆ ಬೆಳವಣಿಗೆ ಕುಂಠಿತವಾಗಿದೆ” ಎಂದು ಅವರು ವಿವರಿಸಿದರು.
ಸಿಎಂ, ಕೇಂದ್ರಕ್ಕೆ ಪರಿಹಾರಕ್ಕಾಗಿ ಮನವಿ
ರೈತರ ಸಂಕಷ್ಟವನ್ನು ಆಲಿಸಿದ ಸಚಿವರು, ಸರ್ಕಾರ ತನ್ನ ಶಕ್ತಿಮೀರಿ ರೈತರ ನೆರವಿಗೆ ನಿಲ್ಲಲಿದೆ ಎಂದು ಭರವಸೆ ನೀಡಿದರು.
“ಜಿಲ್ಲೆಯ ಎಲ್ಲ ಭಾಗಗಳಲ್ಲೂ ಇದೇ ಸಮಸ್ಯೆ ಎದುರಾಗಿದೆ. ನಿಮ್ಮೊಂದಿಗೆ ನಾವಿದ್ದೇವೆ. ಮಳೆಯಾಧಾರಿತ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಈ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಲು ನಾನು ಹಾಗೂ ಈ ಭಾಗದ ಶಾಸಕರು ಒಟ್ಟಾಗಿ ಮನವಿ ಮಾಡುತ್ತೇವೆ” ಎಂದು ಎಂ.ಬಿ. ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ರಾಮ ಬರಗಿಮಠ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.


