ನಿವೃತ್ತ ಶಿಕ್ಷಕನ ಬರ್ಬರ ಹತ್ಯೆ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 16: ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿದ್ದ ನಿವೃತ್ತ ಶಿಕ್ಷಕರೊಬ್ಬರನ್ನು ತಲೆಗೆ ಹಾಗೂ ಎದೆಗೆ ಮಾರಣಾಂತಿಕವಾಗಿ ಹೊಡೆದು ಕೊಲೆ ಮಾಡಿದ ಬರ್ಬರ ಘಟನೆ ಇಂಡಿಯಲ್ಲಿ ನಡೆದಿದ್ದು, ಮೃತದೇಹ ರಸ್ತೆ ಪಕ್ಕದಲ್ಲಿ ಪತ್ತೆಯಾಗಿದೆ.
ಮೃತರನ್ನು ಸಿದ್ದಪ್ಪ ಬಸಪ್ಪ ಅಂಜುಟಗಿ (62) ಎಂದು ಗುರುತಿಸಲಾಗಿದೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಸುಮಾರು ಎರಡು ವರ್ಷಗಳ ಹಿಂದೆ ನಿವೃತ್ತರಾಗಿದ್ದ ಸಿದ್ದಪ್ಪ ಅವರ ಹತ್ಯೆ ಪ್ರಕರಣ ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಪುತ್ರಿಯ ಸಂಬಂಧಕ್ಕೆ ತಂದೆಯ ವಿರೋಧ

ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಸಿದ್ದಪ್ಪ ಅವರ ಪುತ್ರಿ ಪ್ರಿಯಾಂಕಾ (30) ಅವರ ಪತಿ ಸುರೇಶ ಮಸಳಿ ಅವರು ಕೊರೋನಾ ಅವಧಿಯಲ್ಲಿ ಮೃತಪಟ್ಟಿದ್ದರು. ಬಳಿಕ ಪ್ರಿಯಾಂಕಾ ಅವರು ವಿಜಯಪುರದ ಭೀಮಾಜಿ ಅಲಿಯಾಸ್ ಸಂತೋಷ ಗಣಪತಿ ಸಿಂಧೆ ಎಂಬಾತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ.
ಈ ಸಂಬಂಧಕ್ಕೆ ಸಿದ್ದಪ್ಪ ವಿರೋಧ ವ್ಯಕ್ತಪಡಿಸಿ ಪುತ್ರಿಗೆ ಬುದ್ಧಿವಾದ ಹೇಳುತ್ತಿದ್ದರು. ತಮ್ಮ ಸಂಬಂಧಕ್ಕೆ ತಂದೆಯೇ ಅಡ್ಡಿಯಾಗಿದ್ದಾರೆ ಎಂದು ಪ್ರಿಯಾಂಕಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು ಎನ್ನಲಾಗಿದೆ.
ಅಲ್ಲದೆ, ತಂದೆ ನಿವೃತ್ತಿ ಹಣವನ್ನು ಬೇರೆಯವರಿಗೆ ನೀಡುತ್ತಾರೆ, ನಮಗೆ ಏನೂ ಕೊಡುವುದಿಲ್ಲ ಎಂಬ ವಿಚಾರವಾಗಿಯೂ ತಂದೆ-ಮಗಳ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ರಸ್ತೆಬದಿಯಲ್ಲಿ ಪತ್ತೆಯಾದ ಮೃತದೇಹ

ಆಗಸ್ಟ್ 16ರಂದು ಪರಿಚಯಸ್ಥರೊಬ್ಬರು ಸಿದ್ದಪ್ಪ ಅವರ ಮೊಬೈಲ್‌ನಿಂದ ಪುತ್ರಿ ನಿಖಿತಾಗೆ ಕರೆ ಮಾಡಿ, ಇಂಡಿ–ಚವಡಿಹಾಳ ರಸ್ತೆಯ ಪೂಜಾರಿ ವಸ್ತಿ ಸಮೀಪದ ಜಮೀನಿನ ಬಳಿ ರಸ್ತೆಬದಿಯಲ್ಲಿ ಸಿದ್ದಪ್ಪ ಅವರ ಮೃತದೇಹ ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ತೆರಳಿ ನೋಡಿದಾಗ ಸಿದ್ದಪ್ಪ ಅವರ ತಲೆ ಹಾಗೂ ಎದೆ ಭಾಗದಲ್ಲಿ ಗಂಭೀರ ರಕ್ತಗಾಯಗಳು ಕಂಡುಬಂದಿವೆ. ಮೃತದೇಹದ ಸಮೀಪ ಮನೆಯ ಬೆಡ್‌ಶೀಟ್ ಹಾಗೂ ತಲೆದಿಂಬಿನ ಕವರ್ ಪತ್ತೆಯಾಗಿವೆ.

ಮಧ್ಯರಾತ್ರಿಯಲ್ಲಿ ಕೃತ್ಯ?

ಆಗಸ್ಟ್ 15ರ ರಾತ್ರಿ 11ರಿಂದ ಆಗಸ್ಟ್ 16ರ ಬೆಳಗ್ಗೆ 6 ಗಂಟೆಯ ನಡುವಿನ ಅವಧಿಯಲ್ಲಿ ಕೊಲೆ ನಡೆದಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪ್ರಿಯಾಂಕಾ, ಭೀಮಾಜಿ ಅಲಿಯಾಸ್ ಸಂತೋಷ ಹಾಗೂ ಇತರರು ಸೇರಿಕೊಂಡು ಸಂಚು ರೂಪಿಸಿ ಸಿದ್ದಪ್ಪ ಅವರನ್ನು ಹತ್ಯೆ ಮಾಡಿದ್ದಾರೆ. ಬಳಿಕ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ವಾಹನದಲ್ಲಿ ಸಾಗಿಸಿ ರಸ್ತೆಬದಿಯಲ್ಲಿ ಎಸೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ಇನ್ನೋರ್ವ ಪುತ್ರಿ ನಿಖಿತಾ ನೀಡಿದ ದೂರಿನ ಮೇರೆಗೆ ಇಂಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಆರೋಪಗಳ ಸತ್ಯಾಸತ್ಯತೆ, ಕೊಲೆಯ ಹಿಂದಿನ ನೈಜ ಕಾರಣ ಹಾಗೂ ಕೃತ್ಯದಲ್ಲಿ ಇತರರ ಪಾತ್ರದ ಕುರಿತು ತನಿಖೆ ಮುಂದುವರಿದಿದೆ.

Share this