‘ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು’ ಜಾರಿಗೆ ವೈಜ್ಞಾನಿಕ ಚಿಂತನೆಗೆ ಕರೆ

ಸಪ್ತಸಾಗರ ವಾರ್ತೆ,ಬಸವನಬಾಗೇವಾಡಿ, ಆ. 18: ಬಯಲುಸೀಮೆಯ ಜನರ ಬದುಕು ಹಾಗೂ ಮಣ್ಣಿನ ಆರೋಗ್ಯ ನಂದಿ ಕೃಷಿಯೊಂದಿಗೆ ನಿಕಟ ಸಂಬಂಧ ಹೊಂದಿದ್ದು, ನಂದಿ ಕೃಷಿ ಸಂಸ್ಕೃತಿಯ ಪುನಶ್ಚೇತನಕ್ಕಾಗಿ ‘ಶ್ರೀ ಸಿದ್ಧೇಶ್ವರ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು’ ಜಾರಿಗೆ ತರಲು ಜನಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ನಿವೃತ್ತ ಸಹಾಯಕ ನಿರ್ದೇಶಕ ಎಸ್.ಜಿ. ನಾಡಗೌಡ ಹೇಳಿದರು.
ತಾಲೂಕಿನ ನಂದಿಹಾಳ ಪಿ.ಯು. ಗ್ರಾಮದ ಶ್ರೀ ಕೊಡೇಕಲ್ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ನಂದಿ ಭಕ್ತರ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಆರಂಭವಾದ ‘ನಂದಿ ಕೂಗು’ ಅಭಿಯಾನದ ಮೂಲಕ ರಾಜ್ಯಾದ್ಯಂತ ನಂದಿ ಕೃಷಿಯ ಮಹತ್ವದ ಕುರಿತು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ ಎಂದರು.
ಶ್ರೀ ಸಿದ್ಧೇಶ್ವರ ಶ್ರೀಗಳ ಹೆಸರಿನಲ್ಲಿ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು ಜಾರಿಗೆ ತರಲು ಪ್ರತಿ ಗ್ರಾಮದಲ್ಲೂ ಜನಜಾಗೃತಿ ಮೂಡಿಸುವ ಕಾರ್ಯವನ್ನು ಶ್ರೀಗಳ ತಾಯಿಯವರ ತವರೂರಾದ ನಂದಿಹಾಳ ಪಿ.ಯು. ಗ್ರಾಮದಿಂದ ಆರಂಭಿಸಲಾಗುತ್ತಿದೆ. ರಾಜ್ಯ ಬಜೆಟ್‌ನ ಶೇ.10ರಷ್ಟು ಅನುದಾನವನ್ನು ನಂದಿ ಕೃಷಿ ಪುನಶ್ಚೇತನಕ್ಕೆ ಮೀಸಲಿಡಬೇಕು. ಜೋಡೆತ್ತಿನ ಕೃಷಿಕರಿಗೆ ಪ್ರತಿ ತಿಂಗಳು ₹11 ಸಾವಿರ ಪ್ರೋತ್ಸಾಹಧನ ನೀಡುವ ಯೋಜನೆ ಜಾರಿಯಾಗಬೇಕು. ನಂದಿ ಆಧಾರಿತ ವಿದ್ಯುತ್, ಗ್ಯಾಸ್, ಅಡುಗೆ ಎಣ್ಣೆ, ಗೊಬ್ಬರ, ಔಷಧಿ ಹಾಗೂ ಉತ್ತಮ ಆಹಾರ ಉತ್ಪಾದನೆಗೆ ಉತ್ತೇಜನ ನೀಡುವುದು ಕಾನೂನಿನ ಪ್ರಮುಖ ಉದ್ದೇಶಗಳಾಗಬೇಕು ಎಂದು ಅವರು ಹೇಳಿದರು.
ಶ್ರೀ ಕೊಡೇಕಲ್ ಬಸವೇಶ್ವರ ದೇವಸ್ಥಾನದ ಪೂಜ್ಯ ಸಂಗಯ್ಯ ಸ್ವಾಮೀಜಿ ಮಾತನಾಡಿ, ಕಾನೂನು ಜಾರಿಗೆ ಸಂಬಂಧಿಸಿದಂತೆ ಜನಜಾಗೃತಿ ಮೂಡಿಸಲು ನಂದಿಹಾಳ ಪಿ.ಯು. ನಂದಿ ಸೇನೆಯ ವತಿಯಿಂದ 10 ಸಾವಿರ ಕರಪತ್ರಗಳನ್ನು ಮುದ್ರಿಸಿ ಹಂಚುತ್ತಿರುವುದು ಶ್ಲಾಘನೀಯ. ಇದೇ ರೀತಿ ರಾಜ್ಯದ ಎಲ್ಲ ಗ್ರಾಮಗಳ ನಂದಿ ಸೇನೆ ಸಂಘಟಕರು ಕರಪತ್ರಗಳ ಮೂಲಕ ಜಾಗೃತಿ ಮೂಡಿಸಿದರೆ ಹೆಚ್ಚಿನ ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದರು.
‘ನಂದಿ ಕೂಗು’ ಅಭಿಯಾನದ ರೂವಾರಿ ಬಸವರಾಜ ಬಿರಾದಾರ ಮಾತನಾಡಿ, ಮುಂಬರುವ ಚುನಾವಣೆಗಳಲ್ಲಿ ‘ಶ್ರೀ ಸಿದ್ಧೇಶ್ವರ ನಂದಿ ಕೃಷಿ ಸಂಸ್ಕೃತಿ ಪುನಶ್ಚೇತನ ಕಾನೂನು’ ಜಾರಿಗೆ ತರುವ ಬದ್ಧತೆ ತೋರುವ ಅಭ್ಯರ್ಥಿಗಳಿಗೆ ನಂದಿ ಸಾಕ್ಷಿಯಾಗಿ ಮತ ನೀಡುವ ಸಂಕಲ್ಪವನ್ನು ಜನರು ಮಾಡಬೇಕು. ಗ್ರಾಮಗಳ ಭವಿಷ್ಯದ ದೃಷ್ಟಿಯಿಂದ ಗುರು-ಹಿರಿಯರು ಈ ಕುರಿತು ವೈಜ್ಞಾನಿಕವಾಗಿ ಚಿಂತಿಸಿ ಸೂಕ್ತ ಹೆಜ್ಜೆ ಇಡಬೇಕಿದೆ ಎಂದರು.
ಕರ್ನಾಟಕ ರಾಜ್ಯ ಕೃಷಿ ತಂತ್ರಜ್ಞರ ಸಂಸ್ಥೆಯ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ಮಣ್ಣು ಮತ್ತು ಜನರ ಆರೋಗ್ಯ ನಂದಿ ಕೃಷಿಕರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ನಂದಿ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ನಂದಿಹಾಳ ಗ್ರಾಮದ ಹಿರಿಯ ಬಸವರಾಜ ಮನಗೂಳಿ ಕಾರ್ಯಕ್ರಮ ನಿರೂಪಿಸಿದರು. ಅರವಿಂದ ಕವಲಗಿ, ಅಭಿಷೇಕ ಬಿರಾದಾರ, ವಿಶ್ವನಾಥ ಮನಗೂಳಿ, ನಿಂಗೊಂಡ ಸನಬೆಕ್ಕೆ, ದಯಪ್ಪ ಅವರಸಂಗ, ಭೋದು ಹಾದಿಮನಿ, ಬಸು ಜೋಗಿ, ಸಂತೋಷ ಕುಮಚಿ, ಶರಣು ಮುರಾಳ, ವಿರೇಶ ಉಣ್ಣಿಬಾವಿ, ಶರಣು ಕಾಟಕರ, ಬವಣ್ಣ ಹಾದಿಮನಿ, ರವಿ ಕರಡಿ, ಬಸು ಕರಡಿ ಸೇರಿದಂತೆ ಹಲವರು ಭಾಗವಹಿಸಿದ್ದರು.

Share this