ಕೃಷ್ಣ-ವಾದಿರಾಜ ಮಠದಲ್ಲಿ ಸೆ. 4-5ರಂದು ಕೃಷ್ಣ ಜನ್ಮಾಷ್ಟಮಿ, ಲೀಲೋತ್ಸವ

ಸಪ್ತಸಾಗರ ವಾರ್ತೆ,ವಿಜಯಪುರ, ಆ. 18:
ನಗರದ ಕೃಷ್ಣ-ವಾದಿರಾಜ ಮಠದಲ್ಲಿ ಸೆ. 4 ಮತ್ತು 5ರಂದು ಕೃಷ್ಣ ಜನ್ಮಾಷ್ಟಮಿ ಹಾಗೂ ಲೀಲೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಗುವುದು ಎಂದು ಶ್ರೀಮಠದ ವಿಜಯಪುರ ಶಾಖೆಯ ಗೌರವಾಧ್ಯಕ್ಷ ಗೋಪಾಲ ನಾಯಕ ತಿಳಿಸಿದರು.
ಭಕ್ತರ ಸಡಗರದ ನಡುವೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಸೆ. 4ರಂದು ಶ್ರೀಕೃಷ್ಣ ದೇವರಿಗೆ ಲಕ್ಷ ತುಳಸಿ ಅರ್ಪಣೆ ಹಾಗೂ ಮಹಿಳಾ ಮಂಡಳಿಗಳಿಂದ ಅಖಂಡ ಭಜನೆ ನಡೆಯಲಿದೆ. ಸೆ. 5ರಂದು ಪಂಚಾಮೃತ ಅಭಿಷೇಕ, ವಿಶೇಷ ಪೂಜೆ, ನೈವೇದ್ಯ ಹಾಗೂ ಪ್ರಸಾದ ವಿತರಣೆ ಆಯೋಜಿಸಲಾಗಿದೆ ಎಂದು ಹೇಳಿದರು.
ಶ್ರೀಗಳ ಆದೇಶದಂತೆ ಮಠದ ಆವರಣದಲ್ಲಿದ್ದ ವಿದ್ಯಾರ್ಥಿ ನಿಲಯದ ಹಳೆಯ ಕಟ್ಟಡವನ್ನು ತೆರವುಗೊಳಿಸಿ, ಆಧುನಿಕ ಸೌಲಭ್ಯಗಳೊಂದಿಗೆ ನೂತನ ಕಟ್ಟಡ ನಿರ್ಮಾಣ ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಅಂದಾಜು ₹7 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಕ್ಕೆ ಭಕ್ತರು ದೇಣಿಗೆ ನೀಡುತ್ತಿದ್ದು, ಇನ್ನಷ್ಟು ಭಕ್ತರು ಸಹಕರಿಸುವಂತೆ ಅವರು ಮನವಿ ಮಾಡಿದರು.
ಪ್ರಕಾಶ ಅಕ್ಕಲಕೋಟ ಮಾತನಾಡಿ, ಹಿರಿಯರ ಸ್ಮರಣಾರ್ಥ ಒಂದು ಕೊಠಡಿ ನಿರ್ಮಾಣಕ್ಕೆ ₹5 ಲಕ್ಷ ದೇಣಿಗೆ ನೀಡಿದವರ ಹೆಸರು ಹಾಗೂ ಭಾವಚಿತ್ರವನ್ನು ಕೊಠಡಿಯಲ್ಲಿ ಅಳವಡಿಸಲಾಗುವುದು. ₹25 ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ನೀಡುವವರ ಹೆಸರನ್ನು ನಾಮಫಲಕದಲ್ಲಿ ದಾಖಲಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯ ವಿ.ಬಿ. ಕುಲಕರ್ಣಿ ಅವರು ತಮ್ಮ ತಂದೆ ಭಗವಂತರಾವ್ ಅವರ ಸ್ಮರಣಾರ್ಥ ₹5 ಲಕ್ಷ ದೇಣಿಗೆ ಘೋಷಿಸಿದರು. ಸಮಿತಿ ಅಧ್ಯಕ್ಷ ಕಿರಣ ಚುಳಕಿ ಅವರು ತಮ್ಮ ತಂದೆಯ ಸ್ಮರಣಾರ್ಥ ಕೊಠಡಿ ನಿರ್ಮಾಣಕ್ಕೆ ₹5 ಲಕ್ಷ ನೀಡುವುದಾಗಿ ಪ್ರಕಟಿಸಿದರು.
ಸಮಿತಿ ಸದಸ್ಯರಾದ ಡಾ. ಮಲಘಾಣ, ಅಶೋಕರಾವ್, ವಿಕಾಸ ಪದಕಿ, ವಿ.ಸಿ. ಕುಲಕರ್ಣಿ, ಮೋಹನ ಕೌತಾಳ, ಗೋವಿಂದ ಜೋಶಿ, ವ್ಯವಸ್ಥಾಪಕ ಪಂಡಿತ ವಾಸುದೇವ ಆಚಾರ್ಯ, ಪಂಡಿತ ಸಮೀರಾಚಾರ್ಯ, ಭಜನಾ ಮಂಡಳಿ ಪ್ರತಿನಿಧಿಗಳಾದ ಅನಿತಾ ಪದಕಿ, ಲಕ್ಷ್ಮಿ ಕುಲಕರ್ಣಿ, ಗುತ್ತಿಗೆದಾರ ಮೋಹನ ಕುಲಕರ್ಣಿ, ಶ್ರೀವತ್ಸ ಕುಲಕರ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this