ಮೈಸೂರಿನಲ್ಲಿ ಬೃಹತ್ ಗೋದಾಮು ಲೋಕಾರ್ಪಣೆ
ಸಪ್ತಸಾಗರ ವಾರ್ತೆ, ಮೈಸೂರು, ಆ.18:
ಕನಸು, ಪರಿಶ್ರಮ, ನಂಬಿಕೆ ಹಾಗೂ ಸವಾಲುಗಳನ್ನು ಮೆಟ್ಟಿ ನಿಂತು ಐದು ದಶಕಗಳ ಯಶಸ್ವಿ ಸೇವೆ ಪೂರ್ಣಗೊಳಿಸಿರುವ ವಿಆರ್ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್ನ ಸುವರ್ಣ ಮಹೋತ್ಸವ ಸಮಾರಂಭ ಶನಿವಾರ ಮೈಸೂರಿನಲ್ಲಿ ಅದ್ದೂರಿಯಾಗಿ ನಡೆಯಿತು.
ಸುವರ್ಣ ಮಹೋತ್ಸವದ ಸಂಭ್ರಮದ ಜೊತೆಗೆ ನಗರದ ಬನ್ನಿಮಂಟಪ ಬಡಾವಣೆಯ ಜೋಡಿ ತೆಂಗಿನಮರ ರಸ್ತೆ ಬಳಿ ನೂತನವಾಗಿ ನಿರ್ಮಿಸಿರುವ ವಿಆರ್ಎಲ್ ಕಟ್ಟಡ ಹಾಗೂ ಬೃಹತ್ ಗೋದಾಮು ಕಟ್ಟಡವನ್ನು ಲೋಕಾರ್ಪಣೆ ಮಾಡಲಾಯಿತು. ಸಾವಿರಾರು ಮಂದಿ ಸಮಾರಂಭಕ್ಕೆ ಸಾಕ್ಷಿಯಾದರು.
ಈ ಸಂದರ್ಭದಲ್ಲಿ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ, ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ಅವರನ್ನು ಅಭಿನಂದಿಸಲಾಯಿತು. ಸಂಸ್ಥೆಯ ಮುಂದಿನ ಪಯಣವೂ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಗಣ್ಯರು ಶುಭ ಹಾರೈಸಿದರು.
ವಿಭಿನ್ನ ಆಲೋಚನೆಯ ಫಲ
ವಿಆರ್ಎಲ್ ಸಂಸ್ಥೆಯ ಆರಂಭದ ದಿನಗಳನ್ನು ಸ್ಮರಿಸಿದ ಡಾ. ವಿಜಯ ಸಂಕೇಶ್ವರ, ತಮ್ಮ ತಂದೆ ಪ್ರಿಂಟಿಂಗ್ ಮತ್ತು ಪಬ್ಲಿಷಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಕುಟುಂಬದ ಎಲ್ಲರೂ ಒಂದೇ ಕ್ಷೇತ್ರದಲ್ಲಿ ಮುಂದುವರಿಯುವ ಬದಲು ವಿಭಿನ್ನ ಕ್ಷೇತ್ರದಲ್ಲಿ ಹೆಜ್ಜೆ ಇಡಬೇಕು ಎಂಬ ಆಲೋಚನೆಯಿಂದ ವಿಆರ್ಎಲ್ ಸಂಸ್ಥೆ ಆರಂಭಿಸಲಾಯಿತು ಎಂದು ಹೇಳಿದರು.
ಸಂಸ್ಥೆಯ ಆರಂಭದ 10 ವರ್ಷಗಳ ಕಾಲ ನಿರಂತರ ನಷ್ಟ ಹಾಗೂ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕಾಯಿತು. ಆದರೂ ಸೇವೆಯ ಗುಣಮಟ್ಟ ಮತ್ತು ಆರ್ಥಿಕ ಶಿಸ್ತಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲಿಲ್ಲ. ನಮ್ಮ ಕಾರ್ಯವೈಖರಿಯನ್ನು ಜನರು ಗುರುತಿಸಿ ವಿಶ್ವಾಸವಿಟ್ಟು ಬೆಂಬಲಿಸಿದರು. ಅವರ ಆಶೀರ್ವಾದವೇ ಸಂಸ್ಥೆಯನ್ನು ಮುನ್ನಡೆಸುವ ಶಕ್ತಿಯಾಯಿತು ಎಂದು ಹೇಳಿದರು.
ಇಂದು ದೇಶದಲ್ಲೇ ಅತಿಹೆಚ್ಚು ವಾಹನಗಳನ್ನು ಹೊಂದಿರುವ ಲಾಜಿಸ್ಟಿಕ್ಸ್ ಸಂಸ್ಥೆಗಳಲ್ಲಿ ವಿಆರ್ಎಲ್ ಮುಂಚೂಣಿಯಲ್ಲಿದೆ. ಟ್ರಕ್ ಹಾಗೂ ಬಸ್ಗಳು ಸೇರಿದಂತೆ ಸುಮಾರು 7,000 ವಾಹನಗಳು ಸಂಸ್ಥೆಯಲ್ಲಿವೆ. ದೇಶಾದ್ಯಂತ 1,300ಕ್ಕೂ ಹೆಚ್ಚು ಶಾಖೆಗಳಿದ್ದು, ಶ್ರೀನಗರದಿಂದ ತಿರುವನಂತಪುರದವರೆಗೆ ಸೇವೆ ವಿಸ್ತರಿಸಿದೆ. ಸಿಬ್ಬಂದಿಯ ಸಮರ್ಪಣಾ ಮನೋಭಾವ ಹಾಗೂ ಗ್ರಾಹಕರ ವಿಶ್ವಾಸದಿಂದ ಇದು ಸಾಧ್ಯವಾಗಿದೆ ಎಂದರು.
ಆರ್ಥಿಕ ಶಿಸ್ತು ಯಶಸ್ಸಿನ ಮೂಲ
ವಿಆರ್ಎಲ್ ಸಮೂಹ ಸಂಸ್ಥೆ ಬೆಳೆದು ಬಂದ ಕಠಿಣ ಹಾದಿಯನ್ನು ವಿವರಿಸಿದ ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ, ಲಾಜಿಸ್ಟಿಕ್ಸ್ ಕಂಪನಿ ನಡೆಸುವುದು ಅತ್ಯಂತ ಸವಾಲಿನ ಕೆಲಸವಾಗಿದೆ ಎಂದರು.
ಟೆಲಿಫೋನ್ ಸಂಪರ್ಕವೂ ಸರಿಯಾಗಿ ಲಭ್ಯವಿರದ ಕಾಲದಲ್ಲಿ ಪ್ರತಿ ಹೆಜ್ಜೆಯೂ ಕಷ್ಟಕರವಾಗಿತ್ತು. ಗ್ರಾಹಕರನ್ನು ತಲುಪಲು ಮನೆ ಮನೆಗೆ ತೆರಳಿ ಪ್ರಚಾರ ಮಾಡಿದ ದಿನಗಳೂ ಇವೆ. ಇಂದು ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಆದರೆ ಸಂಸ್ಥೆ ಆರಂಭವಾದ ಸಂದರ್ಭದಲ್ಲಿ ಇಂತಹ ಯಾವುದೇ ಸೌಲಭ್ಯಗಳಿಲ್ಲದಿದ್ದರೂ ಡಾ. ವಿಜಯ ಸಂಕೇಶ್ವರ ಅವರು ವಿಆರ್ಎಲ್ನ್ನು ಯಶಸ್ವಿಯಾಗಿ ಕಟ್ಟಿಬೆಳೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಮಾರಂಭದಲ್ಲಿ ಶಾಸಕರಾದ ಜಿ.ಟಿ. ದೇವೇಗೌಡ, ಎ.ಆರ್. ಕೃಷ್ಣಮೂರ್ತಿ, ಟಿ.ಎಸ್. ಶ್ರೀವತ್ಸ, ಕೆ. ರವಿಶಂಕರ್, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಸ್.ಎ. ರಾಮದಾಸ್, ಎಂ.ಕೆ. ಸೋಮಶೇಖರ್, ಎಲ್. ನಾಗೇಂದ್ರ, ನಿರಂಜನ್ ಕುಮಾರ್ ಹಾಗೂ ಎಂಎಲ್ಸಿಗಳಾದ ಗೋ. ಮಧುಸೂದನ್, ತೋಂಟದಾರ್ಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
‘ದೇಶದ ನಂ.1 ಸಂಸ್ಥೆ ಕಟ್ಟಿರುವುದು ಹೆಮ್ಮೆಯ ಸಂಗತಿ’
“ಹಣದ ಕೊರತೆಯ ನಡುವೆಯೂ ಡಾ. ವಿಜಯ ಸಂಕೇಶ್ವರ ಅವರು ಉದ್ಯಮ ಆರಂಭಿಸಿ ದೇಶದ ನಂ.1 ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ವಿಆರ್ಎಲ್ನ್ನು ಕಟ್ಟಿಬೆಳೆಸಿರುವುದು ಸಾಮಾನ್ಯ ಸಾಧನೆಯಲ್ಲ. ವೃತ್ತಿಪರತೆ ಹಾಗೂ ಆರ್ಥಿಕ ಶಿಸ್ತನ್ನು ಮೈಗೂಡಿಸಿಕೊಂಡವರಿಗೆ ಮಾತ್ರ ಇಂತಹ ಸಾಧನೆ ಸಾಧ್ಯ. ಕನ್ನಡಿಗರಾದ ಡಾ. ವಿಜಯ ಸಂಕೇಶ್ವರ ಅವರು ಇಷ್ಟೊಂದು ದೊಡ್ಡ ಸಂಸ್ಥೆ ಕಟ್ಟಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.”
— ಡಾ. ಯತೀಂದ್ರ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ
‘ನವೋದ್ಯಮಿಗಳಿಗೆ ವಿಆರ್ಎಲ್ ಮಾದರಿ’
“ಐವತ್ತು ವರ್ಷ ಎನ್ನುವುದು ಸಣ್ಣ ಮೈಲಿಗಲ್ಲಲ್ಲ. ವಿಆರ್ಎಲ್ ಸಂಸ್ಥೆ 50 ವರ್ಷಗಳನ್ನು ಪೂರ್ಣಗೊಳಿಸಿರುವುದು ಸಂತಸದ ವಿಚಾರ. ವಿಆರ್ಎಲ್ನ ಒಂದು ಟ್ರಕ್ ನೋಡಿದಾಗಲೇ ನಮಗೆ ವಿಶ್ವಾಸ ಮೂಡುತ್ತದೆ. ಸಂಸ್ಥೆಯ ಈ ಸಾಧನೆಗೆ ಅಭಿನಂದನೆಗಳು. ಇಂದು ಅನೇಕರು ನವೋದ್ಯಮಗಳನ್ನು ಆರಂಭಿಸುತ್ತಿದ್ದಾರೆ. ಅಂತಹವರಿಗೆ ವಿಆರ್ಎಲ್ ಒಂದು ಮಾದರಿಯಾಗಿದೆ. ಸಂಸ್ಥೆಯ ಆರ್ಥಿಕ ಶಿಸ್ತನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು.”
— ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಂಸದ


