ಮುಂದಿನ ವರ್ಷವೇ ಪ್ರವೇಶ ಆರಂಭಿಸಲು ಹೋರಾಟ ಸಮಿತಿ ಆಗ್ರಹ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 19:
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗಬೇಕೆಂಬ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯ ಜನರ ಕನಸು ನನಸಾಗುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತಿದೆ. ಕಾಲೇಜಿನ ಅಧಿಕೃತ ನೋಂದಣಿ ಪ್ರಕ್ರಿಯೆಯೂ ಪೂರ್ಣಗೊಂಡಿದೆ ಎಂದು ವಿಶೇಷ ಅಧಿಕಾರಿಗಳಾದ ಡಾ. ಜಾನಕಿ ತೊರವಿ ತಿಳಿಸಿದ್ದಾರೆ.
ಸರ್ಕಾರಿ ವೈದ್ಯಕೀಯ ಕಾಲೇಜಿಗಾಗಿ ವಿಜಯಪುರದಲ್ಲಿ ನಡೆದ 116 ದಿನಗಳ ಐತಿಹಾಸಿಕ ಹೋರಾಟ ಪಕ್ಷಾತೀತ ಹಾಗೂ ಜಾತ್ಯತೀತ ಜನಾಂದೋಲನವಾಗಿ ರೂಪುಗೊಂಡಿತ್ತು. ಜಿಲ್ಲೆಯ ಸಮಸ್ತ ಜನತೆ, ಪ್ರಗತಿಪರ ಸಂಘಟನೆಗಳು, ಮಹಿಳಾ ಸಂಘಟನೆಗಳು, ವಿಕಲಚೇತನರ ಸಂಘಟನೆಗಳು ಹಾಗೂ ಬಹುತೇಕ ಜನಪ್ರತಿನಿಧಿಗಳು ಹೋರಾಟಕ್ಕೆ ಬೆಂಬಲ ನೀಡಿದ್ದರು.
ಜನವರಿ 1ರಂದು ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ 27 ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿ, ಆರು ಮಂದಿಯನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿತ್ತು. ಇದರಿಂದ ಹೋರಾಟ ಮತ್ತಷ್ಟು ತೀವ್ರಗೊಂಡ ಹಿನ್ನೆಲೆಯಲ್ಲಿ ಜನವರಿ 9ರಂದು ವಿಜಯಪುರಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಘೋಷಿಸಿದ್ದರು.
ಬಳಿಕ 2026-27ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಹಾಗೂ ಅಂದಿನ ಹಣಕಾಸು ಸಚಿವ ಸಿದ್ದರಾಮಯ್ಯ ಅವರು ವಿಜಯಪುರ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಡಿಪಿಆರ್ ಪಡೆದು ಮುಂದಿನ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರು ಕೂಡ “ಸರ್ಕಾರಿ ವೈದ್ಯಕೀಯ ಕಾಲೇಜು ಮಾಡಿಯೇ ತೀರುತ್ತೇವೆ” ಎಂದು ಭರವಸೆ ನೀಡಿದ್ದರು.
ಹೋರಾಟ ಸಮಿತಿಗೆ ಸಿಕ್ಕಿತು ಮಹತ್ವದ ಮಾಹಿತಿ
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿಯ ಸದಸ್ಯರು ಬುಧವಾರ ನೂತನವಾಗಿ ವಿಶೇಷ ಅಧಿಕಾರಿಯಾಗಿ ನೇಮಕಗೊಂಡಿರುವ ಡಾ. ಜಾನಕಿ ತೊರವಿ ಅವರನ್ನು ಭೇಟಿ ಮಾಡಿ ಕಾಲೇಜು ಸ್ಥಾಪನೆ ಹಾಗೂ ಡಿಪಿಆರ್‌ನ ಪ್ರಸ್ತುತ ಸ್ಥಿತಿಗತಿ ಕುರಿತು ಸಮಗ್ರ ಮಾಹಿತಿ ಪಡೆದರು.
ಈ ವೇಳೆ ಅಧಿಕಾರಿಗಳು ನೀಡಿದ ಮಾಹಿತಿಯಂತೆ, ಡಿಪಿಆರ್ ಸಂಪೂರ್ಣವಾಗಿ ಸಿದ್ಧಗೊಂಡು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಮಂಜೂರಾತಿ ದೊರೆತಿದೆ. ಇದರ ಜೊತೆಗೆ ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜಿನ ಅಧಿಕೃತ ನೋಂದಣಿ ಪ್ರಕ್ರಿಯೆಯೂ ಯಶಸ್ವಿಯಾಗಿ ಪೂರ್ಣಗೊಂಡಿದೆ.
ಈ ಬೆಳವಣಿಗೆ ವಿಜಯಪುರ ಜಿಲ್ಲೆಯ ಜನರು ಹಾಗೂ ಹಲವು ವರ್ಷಗಳಿಂದ ಹೋರಾಟ ನಡೆಸಿದ ಹೋರಾಟಗಾರರಲ್ಲಿ ಹೊಸ ಆಶಾಭಾವನೆ ಮೂಡಿಸಿದೆ.
“ಮುಂದಿನ ಶೈಕ್ಷಣಿಕ ವರ್ಷದಲ್ಲೇ ಪ್ರವೇಶ ಆರಂಭಿಸಿ”
ಸಮಿತಿಯ ಹಿರಿಯ ಸದಸ್ಯ ಡಾ. ಬಿ. ಭಗವಾನ್ ರೆಡ್ಡಿ ಮಾತನಾಡಿ, ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಆದಷ್ಟು ಬೇಗ ನಿರ್ಮಾಣವಾಗಬೇಕು. ಮುಂಬರುವ ಶೈಕ್ಷಣಿಕ ವರ್ಷದಲ್ಲೇ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ಆರಂಭವಾಗುವಂತೆ ವಿಶೇಷ ಅಧಿಕಾರಿಗಳು ತಮ್ಮ ಹಂತದಲ್ಲಿರುವ ಎಲ್ಲ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
“ಡಿಪಿಆರ್ ಮಂಜೂರಾತಿ ಹಾಗೂ ನೋಂದಣಿ ಪೂರ್ಣಗೊಂಡಿರುವುದು ಸಂತಸದ ಸಂಗತಿ. ಇನ್ನು ವಿಳಂಬಕ್ಕೆ ಅವಕಾಶ ನೀಡದೆ ಕಟ್ಟಡ ನಿರ್ಮಾಣ ಸೇರಿದಂತೆ ಮುಂದಿನ ಎಲ್ಲ ಕಾಮಗಾರಿಗಳಿಗೆ ವೇಗ ನೀಡಬೇಕು. ವಿಜಯಪುರದ ಜನರ ದಶಕಗಳ ಕನಸನ್ನು ಶೀಘ್ರ ಸಾಕಾರಗೊಳಿಸಬೇಕು” ಎಂದು ಅವರು ಆಗ್ರಹಿಸಿದರು.
ವಿಜಯಪುರ ಸರ್ಕಾರಿ ವೈದ್ಯಕೀಯ ಕಾಲೇಜು ಕೇವಲ ಒಂದು ಶಿಕ್ಷಣ ಸಂಸ್ಥೆಯಲ್ಲ; ಜಿಲ್ಲೆಯ ಜನರ ಅರ್ಧ ಶತಮಾನಕ್ಕೂ ಹೆಚ್ಚಿನ ಕಾಲದ ಕನಸು ಹಾಗೂ 116 ದಿನಗಳ ಐತಿಹಾಸಿಕ ಜನಹೋರಾಟದ ಫಲವಾಗಿದೆ. ಇದೀಗ ಆಡಳಿತಾತ್ಮಕ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಕಾಮಗಾರಿ ತ್ವರಿತಗೊಳ್ಳಬೇಕು. ಮುಂದಿನ ಶೈಕ್ಷಣಿಕ ವರ್ಷದಿಂದಲೇ ವಿದ್ಯಾರ್ಥಿಗಳ ಪ್ರವೇಶಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಯುದ್ಧೋಪಾದಿಯಲ್ಲಿ ಕೈಗೊಳ್ಳಬೇಕು ಎಂದು ಹೋರಾಟ ಸಮಿತಿ ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಅಕ್ರಂ ಮಾಶಾಳ್ಕರ್, ನೀಲಂಬಿಕಾ ಬಿರಾದಾರ, ಭೋಗೇಶ ಸೋಲಾಪುರ, ಲಕ್ಷ್ಮಣ ಹಂದ್ರಾಳ, ಗಿರೀಶ ಕಲಘಟಗಿ, ಜಗದೇವ ಸೂರ್ಯವಂಶಿ, ಬಾಳು ಜೇವೂರ, ಬಿ.ಎಸ್. ಬೀರಕಬ್ಬಿ, ಮಲ್ಲಿಕಾರ್ಜುನ ಎಚ್.ಟಿ., ಶ್ರೀನಾಥ ಪೂಜಾರಿ, ಡಾ. ಎಂ.ಆರ್. ಗುರಿಕಾರ, ಸಿದ್ದರಾಮ ಹಳ್ಳೂರ, ಸುರೇಶ ಜಿ.ಬಿ., ಸುರೇಶ ಬಿಜಾಪುರ, ಲಲಿತಾ ಬಿಜ್ಜರಗಿ, ಲಕ್ಷ್ಮಣ ಕಂಬಾಗಿ, ಲಿಂಗರಾಜ ಬಿದರಕುಂದಿ, ಸಂತೋಷ್ ನಾಯಕ, ಬಾಬಾಸಾಹೇಬ ಹತ್ತರಕಿಹಾಳ, ಜ್ಯೋತಿ ಮಿಣಜಿಗಿ, ಸುಶೀಲಾ ಮಿಣಜಿಗಿ, ಭಾಗ್ಯ ಗಡದಿನ್ನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


