15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ 5 ವರ್ಷ ವಯೋಮಿತಿ ಸಡಿಲಿಕೆಗೆ ಆಗ್ರಹ

ಗಣಿತ, ಹಿಂದಿ, ಉರ್ದು ಸೇರಿದಂತೆ ವಿಷಯ ಶಿಕ್ಷಕರ ನೇಮಕಕ್ಕೆ ಒತ್ತಾಯ

ಸಪ್ತಸಾಗರ ವಾರ್ತೆ, ಬೆಂಗಳೂರು, ಆ. 19:
ರಾಜ್ಯ ಸರ್ಕಾರದ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆ ನೀಡಬೇಕು ಹಾಗೂ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ, ಹಿಂದಿ, ಉರ್ದು ಸೇರಿದಂತೆ ವಿವಿಧ ವಿಷಯಗಳ ಶಿಕ್ಷಕರನ್ನು ಸೇರ್ಪಡೆಗೊಳಿಸಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಹಾಗೂ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿ ವತಿಯಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಮುಖ್ಯಮಂತ್ರಿ ಹಾಗೂ ಶಾಲಾ ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿದರು. ಮನವಿಯನ್ನು ಸಚಿವರ ಪರವಾಗಿ ಡಾ. ಅಜಯ್ ಸಿಂಗ್ ಸ್ವೀಕರಿಸಿದರು.
ರಾಜ್ಯ ಸರ್ಕಾರ ಜ.29ರಂದು ಹೊರಡಿಸಿರುವ ರಾಜ್ಯಪತ್ರದಲ್ಲಿ 31-12-2027ರವರೆಗೆ ರಾಜ್ಯ ಸರ್ಕಾರ ನಡೆಸುವ ಎಲ್ಲ ನೇರ ನೇಮಕಾತಿಗಳಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಿ ಆದೇಶ ಹೊರಡಿಸಿದೆ. ಆದರೆ 15 ಸಾವಿರ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿ ಈ ವಯೋಮಿತಿ ಸಡಿಲಿಕೆಯನ್ನು ಅನ್ವಯಿಸದಿರುವುದು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸರ್ಕಾರದ ಎಲ್ಲ ನೇರ ನೇಮಕಾತಿಗಳಿಗೆ ಅನ್ವಯವಾಗುವಂತೆ ಐದು ವರ್ಷ ವಯೋಮಿತಿ ಸಡಿಲಿಕೆಯನ್ನು ಶಿಕ್ಷಕರ ನೇಮಕಾತಿಗೂ ಅನ್ವಯಿಸಬೇಕು. ಟಿಇಟಿ ಉತ್ತೀರ್ಣರಾಗಿ ಒಂದು ವಾರ, 15 ದಿನ ಅಥವಾ ಒಂದು ತಿಂಗಳ ಅಂತರದಲ್ಲಿ ವಯೋಮಿತಿ ಮೀರುತ್ತಿರುವ ಅನೇಕ ಅಭ್ಯರ್ಥಿಗಳು ನೇಮಕಾತಿಯಿಂದ ವಂಚಿತರಾಗುವ ಆತಂಕದಲ್ಲಿದ್ದಾರೆ. ಸರ್ಕಾರವೇ ಹೊರಡಿಸಿರುವ ಆದೇಶವನ್ನು ಶಿಕ್ಷಣ ಇಲಾಖೆ ಪಾಲಿಸದಿರುವುದು ವಿಷಾದನೀಯ ಎಂದು ಹೋರಾಟಗಾರರು ಆರೋಪಿಸಿದರು.
2022ರಲ್ಲಿ ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಎರಡು ವರ್ಷ ವಯೋಮಿತಿ ಸಡಿಲಿಕೆ ನೀಡಲಾಗಿತ್ತು. ಸಾಮಾನ್ಯ ವರ್ಗಕ್ಕೆ 42 ವರ್ಷ, 2ಎ, 2ಬಿ, 3ಎ, 3ಬಿ ವರ್ಗಗಳಿಗೆ 45 ವರ್ಷ ಹಾಗೂ ಎಸ್‌ಸಿ, ಎಸ್‌ಟಿ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 47 ವರ್ಷ ವಯೋಮಿತಿ ನಿಗದಿಪಡಿಸಲಾಗಿತ್ತು.
ಇದೇ ರೀತಿ ಕ್ರೈಸ್ತ ವಸತಿ ಶಾಲೆಗಳ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಿ ಅಧಿಸೂಚನೆ ಹೊರಡಿಸಲಾಗಿದೆ. ಕೆಪಿಎಸ್‌ಸಿ 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ‘ಬಿ’ ಹುದ್ದೆಗಳಿಗೂ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಿದೆ. ಹೀಗಿರುವಾಗ ಶಿಕ್ಷಕರ ನೇಮಕಾತಿಯಲ್ಲಿ ಮಾತ್ರ ಸಡಿಲಿಕೆ ನೀಡದಿರುವುದು ತಾರತಮ್ಯಕ್ಕೆ ಕಾರಣವಾಗಿದೆ ಎಂದು ಪ್ರತಿಭಟನಾಕಾರರು ಹೇಳಿದರು.
ಕಳೆದ 11 ವರ್ಷಗಳಿಂದ 4,500 ಪ್ರೌಢಶಾಲಾ ಶಿಕ್ಷಕರ ನೇಮಕಾತಿ ನಡೆಯುತ್ತಿದ್ದು, ಗಣಿತ ಸೇರಿದಂತೆ ಹಲವು ವಿಷಯಗಳ ಶಿಕ್ಷಕರ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ನೇಮಕಾತಿಯಲ್ಲಿ ಸೇರಿಸಿಲ್ಲ. ಪದವಿ ಹಾಗೂ ಬಿ.ಎಡ್.ನಲ್ಲಿ ಗಣಿತ, ಹಿಂದಿ, ಉರ್ದು ಮತ್ತಿತರ ವಿಷಯಗಳನ್ನು ಅಭ್ಯಸಿಸಿ ಪ್ರೌಢಶಾಲಾ ಶಿಕ್ಷಕರಾಗಲು ಕಾಯುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಇದರಿಂದ ಅನ್ಯಾಯವಾಗುತ್ತಿದೆ ಎಂದು ಅವರು ತಿಳಿಸಿದರು.
ಜಿಪಿಟಿ ಶಿಕ್ಷಕರನ್ನು ಬಡ್ತಿ ನೀಡಿ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಗಣಿತ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂಬ ಚರ್ಚೆ ನಡೆಯುತ್ತಿದೆ. ಆದರೆ ಸರ್ಕಾರದ ನಿಯಮಗಳ ಪ್ರಕಾರ ಎಲ್ಲ ಖಾಲಿ ಹುದ್ದೆಗಳನ್ನು ಬಡ್ತಿ ಮೂಲಕ ಭರ್ತಿ ಮಾಡುವುದು ಸಾಧ್ಯವಿಲ್ಲ. ಆದ್ದರಿಂದ ನೇರ ನೇಮಕಾತಿ ಮೂಲಕವೂ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಒತ್ತಾಯಿಸಲಾಯಿತು.
ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ್ ಮಾತನಾಡಿ, “ಮಾನವೀಯ ದೃಷ್ಟಿಯಿಂದ ರಾಜ್ಯ ಸರ್ಕಾರದ ಆದೇಶದಂತೆ 15 ಸಾವಿರ ಶಿಕ್ಷಕರ ನೇಮಕಾತಿಯಲ್ಲಿ ಐದು ವರ್ಷ ವಯೋಮಿತಿ ಸಡಿಲಿಕೆ ನೀಡಬೇಕು. ಮಕ್ಕಳ ಸಮಗ್ರ ಬೆಳವಣಿಗೆ ಹಾಗೂ ಗುಣಮಟ್ಟದ ಶಿಕ್ಷಣದ ಹಿತದೃಷ್ಟಿಯಿಂದ ಪ್ರೌಢಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಗಣಿತ, ಹಿಂದಿ, ಉರ್ದು ಸೇರಿದಂತೆ ಅಗತ್ಯ ವಿಷಯ ಶಿಕ್ಷಕರನ್ನು ಸೇರಿಸಬೇಕು” ಎಂದು ಆಗ್ರಹಿಸಿದರು.
ಪ್ರತಿಭಟನೆಗೆ ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ದಲಿಂಗ ಬಾಗೇವಾಡಿ, ರಾಜ್ಯ ಉಪಾಧ್ಯಕ್ಷ ವಿನಯ ಸಾರಥಿ ಹಾಗೂ ಹೋರಾಟ ಸಮಿತಿಯ ರಾಜ್ಯ ಸಹ ಸಂಚಾಲಕ ಭವಾನಿ ಶಂಕರಗೌಡ ನೇತೃತ್ವ ವಹಿಸಿದ್ದರು. ಉದ್ಯೋಗಾಕಾಂಕ್ಷಿಗಳಾದ ಲಕ್ಷ್ಮೀ ರೆಡ್ಡಿ, ವೆಂಕಟಯ್ಯ, ಅಬ್ದುಲ್ ಭಾಷಾ ಪಟೇಲ್, ಸರೋಜಾ, ಎಲ್ಲಪ್ಪ ದೊರೆ, ಪರಶುರಾಮ್, ಜಗದೀಶ್ ನೇಮಕಲ್, ರಣಜಿತ್, ಜಯಣ್ಣ, ಕಲಾವತಿ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Share this