ಸಾಮಾಜಿಕ ಬದಲಾವಣೆಗೆ ಅರಸು ಕೊಡುಗೆ ಸದಾ ಸ್ಮರಣೀಯ

ಶೋಷಿತ, ಹಿಂದುಳಿದ ವರ್ಗಗಳ ಏಳಿಗೆಗೆ ಕ್ರಾಂತಿಕಾರಿ ಕೊಡುಗೆ: ಡಾ. ಆನಂದ ಕೆ.

ಸಪ್ತಸಾಗರ ವಾರ್ತೆ,ವಿಜಯಪುರ, ಆ.20:
ಶೋಷಿತ, ದಮನಿತ ಹಾಗೂ ದೀನ-ದಲಿತ ಸಮುದಾಯಗಳ ಸಮಗ್ರ ಏಳಿಗೆಗಾಗಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ರೂಪಿಸಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಗುರುವಾರ ಆಯೋಜಿಸಿದ್ದ ಸಾಮಾಜಿಕ ಪರಿವರ್ತನೆಯ ಹರಿಕಾರ, ಹಿಂದುಳಿದ ವರ್ಗಗಳ ಧೀಮಂತ ನಾಯಕ ಡಿ. ದೇವರಾಜ ಅರಸು ಅವರ 111ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ಅವರು ಕರ್ನಾಟಕ ಕಂಡ ದೂರದೃಷ್ಟಿಯ ರಾಜಕಾರಣಿ ಮಾತ್ರವಲ್ಲದೆ, ಸಾಮಾಜಿಕ ಬದಲಾವಣೆಯ ಹರಿಕಾರರಾಗಿದ್ದರು. ‘ಉಳುವವನೇ ಭೂ ಒಡೆಯ’ ಎಂಬ ಐತಿಹಾಸಿಕ ಭೂಸುಧಾರಣಾ ಕಾಯ್ದೆ ಜಾರಿಗೆ ತರುವ ಮೂಲಕ ಅನೇಕ ಭೂರಹಿತ ಗೇಣಿದಾರರಿಗೆ ಜಮೀನಿನ ಹಕ್ಕು ದೊರಕಿಸಿಕೊಟ್ಟರು. ಇದರ ಮೂಲಕ ಸಮಾಜದಲ್ಲಿದ್ದ ಅಸಮಾನತೆ ನಿವಾರಿಸಿ ಆರ್ಥಿಕ ಸಮಾನತೆ ಸಾಧಿಸಲು ಮಹತ್ವದ ಹೆಜ್ಜೆ ಇಟ್ಟರು ಎಂದು ಹೇಳಿದರು.
ಅರಸು ಅವರು ಅಂದಿನ ಕಾಲದಲ್ಲೇ ಜಾರಿಗೆ ತಂದ ಸ್ಟೈಪಂಡರಿ, ಶೈಕ್ಷಣಿಕ ನೆರವು ಹಾಗೂ ವಿದ್ಯಾರ್ಥಿವೇತನದಂತಹ ಯೋಜನೆಗಳು ಇಂದಿನ ಶಿಕ್ಷಣ ಪ್ರೋತ್ಸಾಹ ಕಾರ್ಯಕ್ರಮಗಳಿಗೆ ಭದ್ರ ಬುನಾದಿಯಾಗಿವೆ. ಯುವಜನರಲ್ಲಿ ಶೈಕ್ಷಣಿಕ ಅರಿವು ಮೂಡಿಸುವುದು ಹಾಗೂ ಸ್ವಯಂ ಉದ್ಯೋಗಕ್ಕೆ ಅವಕಾಶ ಕಲ್ಪಿಸುವಲ್ಲಿ ಅವರ ಸಾಮಾಜಿಕ ಬದ್ಧತೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರು.
ಮಹಾನ್ ಚಿಂತಕ ದೇವರಾಜ ಅರಸು ಅವರ ತತ್ವಾದರ್ಶ, ಸಾಮಾಜಿಕ ಕಾಳಜಿ ಹಾಗೂ ಜನಪರ ಚಿಂತನೆಯನ್ನು ಇಂದಿನ ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ಆನಂದ ಕೆ. ಕರೆ ನೀಡಿದರು.

ಸಾಮಾಜಿಕ ನ್ಯಾಯಕ್ಕೆ ಅರಸು ಕೊಡುಗೆ ಅಪಾರ: ರಿಷಿ ಆನಂದ

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಮಾತನಾಡಿ, ಸಮಾಜದ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ದೇವರಾಜ ಅರಸು ಅವರು ಹಲವು ಅಭೂತಪೂರ್ವ ಸುಧಾರಣೆಗಳನ್ನು ಜಾರಿಗೆ ತಂದರು. ಜೀತಪದ್ಧತಿಯಂತಹ ಅಮಾನವೀಯ ಆಚರಣೆಗಳನ್ನು ಕಾನೂನುಬದ್ಧವಾಗಿ ತೊಡೆದುಹಾಕಿದರು. ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಸತಿ ನಿಲಯಗಳನ್ನು ಸ್ಥಾಪಿಸಿದರು ಎಂದು ಹೇಳಿದರು.
ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸಮರ್ಥವಾಗಿ ಸದುಪಯೋಗಪಡಿಸಿಕೊಂಡು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಅರಸು ಅವರ ತತ್ವ, ಮೌಲ್ಯ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಯನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಭೂಸುಧಾರಣೆಯಿಂದ ಸಾಮಾಜಿಕ ಪರಿವರ್ತನೆ

ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಣಮಂತ ಬಿ. ಪೂಜಾರಿ ಉಪನ್ಯಾಸ ನೀಡಿ, ಉಳ್ಳವರಿಂದ ಭೂಮಿಯನ್ನು ಪಡೆದು ಭೂರಹಿತ ಬಡವರಿಗೆ ಹಂಚುವಲ್ಲಿ ದೇವರಾಜ ಅರಸು ಅವರು ತೋರಿದ ಧೈರ್ಯ ಮತ್ತು ಸಾಮಾಜಿಕ ಬದ್ಧತೆ ಅವರ ಚಿಂತನೆಗಳನ್ನು ಸಾರ್ವಕಾಲಿಕವಾಗಿಸಿದೆ ಎಂದರು.
ತಮ್ಮ ರಾಜಕೀಯ ಜೀವನದುದ್ದಕ್ಕೂ ಹಿಂದುಳಿದ ವರ್ಗಗಳು, ಬಡವರು ಹಾಗೂ ಶೋಷಿತ ಸಮುದಾಯಗಳ ಏಳಿಗೆಗಾಗಿ ಶ್ರಮಿಸಿದ ಅರಸು ಅವರು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ತತ್ವಗಳನ್ನು ಆಡಳಿತದಲ್ಲಿ ಅಳವಡಿಸಿಕೊಂಡಿದ್ದರು. ಭೂಸುಧಾರಣೆ, ಹಿಂದುಳಿದ ವರ್ಗಗಳ ಕಲ್ಯಾಣ, ಶಿಕ್ಷಣ ಹಾಗೂ ಸಾಮಾಜಿಕ ಸಮಾನತೆ ಕ್ಷೇತ್ರದಲ್ಲಿ ಅವರು ಕೈಗೊಂಡ ಕ್ರಮಗಳು ಕರ್ನಾಟಕದ ಸಾಮಾಜಿಕ ಪರಿವರ್ತನೆಗೆ ಮಹತ್ವದ ಕೊಡುಗೆ ನೀಡಿವೆ ಎಂದು ಹೇಳಿದರು.
ಅರಸು ಅವರ ಸರಳ ಜೀವನ, ಜನಪರ ಆಡಳಿತ ಹಾಗೂ ಸಾಮಾಜಿಕ ನ್ಯಾಯದ ಬದ್ಧತೆ ಇಂದಿನ ಪೀಳಿಗೆಗೆ ಆದರ್ಶವಾಗಿದ್ದು, ಅವರ ಚಿಂತನೆ ಮತ್ತು ಸಾಧನೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದರು.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.

ಅದ್ಧೂರಿ ಭಾವಚಿತ್ರ ಮೆರವಣಿಗೆ

ಸಮಾರಂಭಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಡಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಜಾನಪದ ಕಲಾತಂಡಗಳ ಕಲಾ ವೈಭವದೊಂದಿಗೆ ನಗರದ ಪ್ರಮುಖ ರಸ್ತೆ ಹಾಗೂ ವೃತ್ತಗಳ ಮೂಲಕ ಸಾಗಿದ ಮೆರವಣಿಗೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.
ಕಾರ್ಯಕ್ರಮದಲ್ಲಿ ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಿವಾನಂದ ಮಾಸ್ತಿಹೊಳಿ, ಡಿಎಸ್‌ಪಿ ಎಂ.ಎ. ಉಪಾಸೆ, ಜಿಲ್ಲಾ ಖಜಾನಾಧಿಕಾರಿ ಆನಂದ ಮುಚ್ಚಂಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಹಣಮಂತ ಕಾಲತಿಪ್ಪಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದೇವರಾಜ ಅರಸು ಅಭಿಮಾನಿಗಳ ಬಳಗದ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share this