ಸಪ್ತಸಾಗರ ವಾರ್ತೆ,ಆಲಮೇಲ, ಆ. 21: ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ವತಿಯಿಂದ ಆಲಮೇಲ ತಹಶೀಲ್ದಾರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡ ವಿನೋದ ಖೇಡ ಮಾತನಾಡಿ, 371(ಜೆ) ಮೀಸಲಾತಿಯಿಂದ ವಿಜಯಪುರ ಜಿಲ್ಲೆಯನ್ನು ಹೊರಗಿಟ್ಟಿರುವ ಪರಿಣಾಮ ಜಿಲ್ಲೆಯ ಮಕ್ಕಳಿಗೆ ಶಿಕ್ಷಣದಲ್ಲಿ ಹಾಗೂ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಈ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರಾದ ಮಲ್ಲನಗೌಡ ಪಾಟೀಲ (ಬರಟಗಿ) ಹಾಗೂ ಅನಿಲ ಇಕ್ಕಡೆ ಮಾತನಾಡಿ, 371(ಜೆ) ಮೀಸಲಾತಿಯಿಂದ ವಿಜಯಪುರ ಜಿಲ್ಲೆಯನ್ನು ಹೊರಗಿಟ್ಟಿರುವುದರಿಂದ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯದೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳತ್ತ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಜಿಲ್ಲೆಗೆ 371(ಜೆ) ಮೀಸಲಾತಿ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ಹೈದರಾಬಾದ್ ವಿಮೋಚನಾ ಚಳವಳಿಗೆ ನೇತೃತ್ವ ವಹಿಸಿದ್ದ ಸಿಂದಗಿಯ ಸ್ವಾಮಿ ರಾಮಾನಂದ ತೀರ್ಥರ ತವರು ಜಿಲ್ಲೆ ವಿಜಯಪುರವನ್ನು 371(ಜೆ) ವ್ಯಾಪ್ತಿಯಿಂದ ಹೊರಗಿಟ್ಟಿರುವುದಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಹೈಕೋರ್ಟ್, ಸಾರಿಗೆ, ಪುರಾತತ್ವ ಇಲಾಖೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಕೃಷ್ಣಾ ಕಾಡಾ ಸೇರಿದಂತೆ ಹಲವು ಪ್ರಮುಖ ವ್ಯವಸ್ಥೆಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳೊಂದಿಗೆ ಹೊಂದಿಕೊಂಡಿವೆ. ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ವಿಜಯಪುರ ಜಿಲ್ಲೆಗೂ 371(ಜೆ) ಮೀಸಲಾತಿ ಕಲ್ಪಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡ ಅಶೋಕ ವಾಲಿಕಾರ ಹಾಗೂ ತಾಲೂಕು ಅಧ್ಯಕ್ಷ ಸಿದ್ದರಾಮ ಕಲ್ಲೂರ ಮಾತನಾಡಿ, ವಿಜಯಪುರ ಜಿಲ್ಲೆಯ ಮಕ್ಕಳಿಗೆ ಶಿಕ್ಷಣದಲ್ಲಿ ಮತ್ತು ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ಜಿಲ್ಲೆಯ ಸಚಿವರು ಹಾಗೂ ಶಾಸಕರು ಪಕ್ಷಾತೀತವಾಗಿ ಮುಂದಾಗಬೇಕು. ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಶೀಘ್ರ 371(ಜೆ) ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯ ಎನ್. ಸುರೇಶಕುಮಾರ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಿಂಗರಾಜ ಬಿಸನಾಳ, ಬಂದೇನವಾಜ ಕಲ್ಲೂರ, ಸಾಯಬಣ್ಣ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯಪುರ ಜಿಲ್ಲೆಗೆ 371(ಜೆ) ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಹೋರಾಟ


