ಸರಣಿ ದೌರ್ಜನ್ಯ ಖಂಡಿಸಿ ಬೃಹತ್ ಹೋರಾಟದ ಎಚ್ಚರಿಕೆ

ಸಪ್ತಸಾಗರ ವಾರ್ತೆ ವಿಜಯಪುರ, ಆ.23:
ರಾಜ್ಯಾದ್ಯಂತ ದಲಿತರು, ಹಿಂದುಳಿದವರು ಹಾಗೂ ಶೋಷಿತ ಸಮುದಾಯಗಳ ಮೇಲೆ ಹಲ್ಲೆ, ಕೊಲೆ, ಅತ್ಯಾಚಾರ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಘಟನೆಗಳು ಸರಣಿಯಾಗಿ ನಡೆಯುತ್ತಿದ್ದರೂ ಸರ್ಕಾರ ಮೌನ ವಹಿಸಿರುವುದು ಖಂಡನೀಯ ಎಂದು ಮುಖಂಡ ಗೌಡಪ್ಪ ಬಡಿಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಉಗಲವಾಟದಲ್ಲಿ ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತ ಯುವಕನ ಮೇಲೆ ಹಲ್ಲೆ, ಕೊಪ್ಪಳ ಹಾಗೂ ಚಿಕ್ಕಬಳ್ಳಾಪುರದಲ್ಲಿ ಕಳವು ಶಂಕೆಯಿಂದ ಬಾಲಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆಗಳು ನಡೆದಿವೆ. ರಾಯಚೂರಿನಲ್ಲಿ ಬಿಎಸ್‌ಪಿ ಮುಖಂಡ ಭೂಮಾನಂದ ಅವರ ಹತ್ಯೆ ಹಾಗೂ ಅಪ್ರಾಪ್ತೆ ಅಶ್ವಿನಿ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಗಳು ನಡೆದಿವೆ.
ವಿಜಯಪುರ ಜಿಲ್ಲೆಯ ಚಬನೂರು ಹಾಗೂ ಗುಂಡಕನಾಳದಲ್ಲಿಯೂ ಯುವಕರ ಮೇಲೆ ಭೀಕರ ದಾಳಿ ನಡೆದಿದ್ದು, ಹಲವರು ಗಾಯಗೊಂಡಿದ್ದಾರೆ. ಧಾರವಾಡದ ಕುಂಬಾರಕೊಪ್ಪದಲ್ಲಿ ಏಳು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ. ಯಾದಗಿರಿಯ ಕಿಲ್ಲನಕೇರಾದಲ್ಲಿ ಭಜಂತ್ರಿ ಸಮುದಾಯದವರಿಗೆ ಊರು ಬಿಡುವಂತೆ ಬೆದರಿಕೆ ಹಾಕಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಸರಣಿ ದೌರ್ಜನ್ಯಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಎಲ್ಲಾ ಪ್ರಕರಣಗಳ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಂಡು, ಸಂತ್ರಸ್ತರಿಗೆ ಸೂಕ್ತ ಭದ್ರತೆ, ತಕ್ಷಣದ ಪರಿಹಾರ ಹಾಗೂ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ವಿಫಲವಾದರೆ ಮುಂಬರುವ ದಿನಗಳಲ್ಲಿ ರಾಜ್ಯಮಟ್ಟದ ಬೃಹತ್ ಹೋರಾಟ ಹಾಗೂ ರಾಷ್ಟ್ರೀಯ ಹೆದ್ದಾರಿ ತಡೆ ಚಳವಳಿ ನಡೆಸಲಾಗುವುದು ಎಂದು ಗೌಡಪ್ಪ ಬಡಿಗೇರ ಪತ್ರಿಕಾ ಪ್ರಕಟಣೆಯಲ್ಲಿ ಎಚ್ಚರಿಸಿದ್ದಾರೆ.

Share this