ಉಜ್ವಲ ಭವಿಷ್ಯಕ್ಕೆ ಶಿಕ್ಷಣದ ಜೊತೆಗೆ ಸಂಸ್ಕಾರವೂ ಅಗತ್ಯ: ಡಾ. ಜಾವೇದ ಜಮಾದಾರ

ಸಪ್ತಸಾಗರ ವಾರ್ತೆ ವಿಜಯಪುರ, ಆ. 23:
ಶಿಕ್ಷಣದ ಜೊತೆಗೆ ವಿದ್ಯಾರ್ಥಿನಿಯರಿಗೆ ಉತ್ತಮ ಸಂಸ್ಕಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಅತ್ಯವಶ್ಯಕ. ಸ್ವಚ್ಛ ಪರಿಸರ, ಗುಣಮಟ್ಟದ ಶಿಕ್ಷಣ ಮತ್ತು ಉತ್ತಮ ಆರೋಗ್ಯ ದೊರೆತಾಗ ಮಾತ್ರ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯ ಎಂದು ಲಾಡ್ಲಿ ಫೌಂಡೇಶನ್‌ನ ಸಲಹೆಗಾರ ಡಾ. ಜಾವೇದ ಜಮಾದಾರ ಹೇಳಿದರು.
ನಗರದ ಜೋರಾಪುರ ಪೇಠದಲ್ಲಿರುವ ನಮ್ಮ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 7ರಲ್ಲಿ ಲಾಡ್ಲಿ ಫೌಂಡೇಶನ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿನಿಯರಿಗೆ ಶೈಕ್ಷಣಿಕ ಕಿಟ್‌ಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಅವರ ಆತ್ಮವಿಶ್ವಾಸ ಹೆಚ್ಚುತ್ತದೆ. ಇದರಿಂದ ಅವರು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಲಾಡ್ಲಿ ಫೌಂಡೇಶನ್ ವತಿಯಿಂದ ವಿಜಯಪುರ ಜಿಲ್ಲೆಯ 21 ಸರ್ಕಾರಿ ಶಾಲೆಗಳಲ್ಲಿ ಅತ್ಯಾಧುನಿಕ ಶೌಚಾಲಯಗಳ ನಿರ್ಮಾಣ, ವಿದ್ಯಾರ್ಥಿನಿಯರಿಗೆ ಒಂದು ವರ್ಷದವರೆಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆ ಹಾಗೂ 5,000 ವಿದ್ಯಾರ್ಥಿಗಳಿಗೆ ಉಚಿತ ಶಾಲಾ ಬ್ಯಾಗ್‌ಗಳ ವಿತರಣೆ ಸೇರಿದಂತೆ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಗೆ ಆಕರ್ಷಕ ಶಾಲಾ ಬ್ಯಾಗ್‌ಗಳೊಂದಿಗೆ ವಿವಿಧ ಶೈಕ್ಷಣಿಕ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು. ಹೊಸ ಬ್ಯಾಗ್ ಹಾಗೂ ಶೈಕ್ಷಣಿಕ ಸಾಮಗ್ರಿಗಳನ್ನು ಪಡೆದ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದರು.
ಸಾಮಾಜಿಕ ಕಾರ್ಯಕರ್ತ ದೀಪಕ ಶಿಂತ್ರೆ ಮಾತನಾಡಿ, ಹೆಣ್ಣುಮಕ್ಕಳಿಗೆ ಶಿಕ್ಷಣ ಪಡೆಯಲು ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದರೆ ಅವರು ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಬಲ್ಲರು. ವಿದ್ಯಾರ್ಥಿನಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಲಾಡ್ಲಿ ಫೌಂಡೇಶನ್ ಕೈಗೊಳ್ಳುತ್ತಿರುವ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿವೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯ ಅಜೀಜ್ ಅರಳಿಮಟ್ಟಿ ಸ್ವಾಗತಿಸಿದರು. ಎಸ್‌ಡಿಎಂಸಿ ಅಧ್ಯಕ್ಷೆ ರೇಖಾ ಎಸ್. ಕುದರಿ, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Share this