ಭೂತನಾಳ ಕೆರೆಯಲ್ಲಿ ತಾಯಿ ಸೇರಿ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಸಾವು

ಸಪ್ತಸಾಗರ ವಾರ್ತೆ,ವಿಜಯಪುರ, ಆ. 26: ನಗರದ ಆದರ್ಶನಗರ ಪೊಲೀಸ್ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ ತಾಯಿ ಸೇರಿದಂತೆ ಐವರು ಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ತೊರವಿ ಶಾಂತಿನಗರದ ನಿವಾಸಿ ಶೋಭಾ ಗಂ. ಮಲ್ಲಿಕಾರ್ಜುನ ಜಾಲಗೇರಿ (35) ಹಾಗೂ ಅವರ ಮಕ್ಕಳಾದ ವಿದ್ಯಾ (15), ಸುವರ್ಣಾ (13), ತಿಪ್ಪರಾಯ (12), ಸಾನಿಕಾ (10) ಮತ್ತು ವಿಕಾಶ್ (6) ಎಂದು ಗುರುತಿಸಲಾಗಿದೆ.
ಆರು ಮಂದಿಯ ಮೃತದೇಹಗಳು ಭೂತನಾಳ ಕೆರೆಯಲ್ಲಿ ಪತ್ತೆಯಾಗಿವೆ. ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಪೊಲೀಸ್ ಮಾಹಿತಿಯ ಪ್ರಕಾರ, ಆ.24ರಂದು ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಶೋಭಾ ಹಾಗೂ ಮಕ್ಕಳ ನಾಪತ್ತೆ ಕುರಿತು ಪ್ರಕರಣ ದಾಖಲಾಗಿತ್ತು. ಶೋಭಾ ಅವರ ಪತಿ ಮಲ್ಲಿಕಾರ್ಜುನ ಜಾಲಗೇರಿ ಅವರು ದೂರು ನೀಡಿದ್ದು, ಪ್ರಾಪಂಚಿಕ ವಿಚಾರವಾಗಿ ಬುದ್ಧಿವಾದ ಹೇಳಿದ್ದರಿಂದ ಪತ್ನಿ ಮಕ್ಕಳನ್ನು ಕರೆದುಕೊಂಡು ಮನೆಯಿಂದ ತೆರಳಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.
ನಾಪತ್ತೆ ಪ್ರಕರಣದ ತನಿಖೆ ಮುಂದುವರಿದಿದ್ದ ಸಂದರ್ಭದಲ್ಲಿ ಶೋಭಾ ಹಾಗೂ ಐವರು ಮಕ್ಕಳ ಮೃತದೇಹಗಳು ಆದರ್ಶನಗರ ಠಾಣೆ ವ್ಯಾಪ್ತಿಯ ಭೂತನಾಳ ಕೆರೆಯಲ್ಲಿ ಪತ್ತೆಯಾಗಿವೆ.
ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಕೆರೆಯಿಂದ ಹೊರತೆಗೆದು ಬಿಎಲ್‌ಡಿಇ ಆಸ್ಪತ್ರೆಗೆ ರವಾನಿಸುವ ಕ್ರಮ ಕೈಗೊಂಡಿದ್ದಾರೆ. ಘಟನೆ ಕುರಿತು ಪೊಲೀಸರು ಕೂಲಂಕಷ ತನಿಖೆ ನಡೆಸುತ್ತಿದ್ದು, ಸಾವಿಗೆ ನಿಖರ ಕಾರಣ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.
ಘಟನೆ ಆ.24ರಿಂದ ಆ.26ರ ನಡುವಿನ ಅವಧಿಯಲ್ಲಿ ನಡೆದಿರುವ ಸಾಧ್ಯತೆ ಇದ್ದು, ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Share this