ಸಪ್ತಸಾಗರ ವಾರ್ತೆ,ವಿಜಯಪುರ, ಆ. 27: ವಿಜಯಪುರ ಜಿಲ್ಲೆಯ ೧೩ ತಾಲೂಕುಗಳಲ್ಲಿಯೂ ಬರದ ಪರಿಸ್ಥಿತಿ ತಾಂಡವವಾಡುತ್ತಿದ್ದರೂ, ಸರ್ಕಾರ ಕೇವಲ ಮೂರು ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಿರುವುದು ಖಂಡನೀಯ. ಜಿಲ್ಲೆಯ ಉಳಿದ ತಾಲೂಕುಗಳನ್ನೂ ಬರಪೀಡಿತ ಎಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಜಯಪುರ, ನಿಡಗುಂದಿ ಹಾಗೂ ಕೊಲ್ಹಾರ ತಾಲೂಕುಗಳನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಆದರೆ ಇಂಡಿ, ಚಡಚಣ, ತಾಳಿಕೋಟೆ ಸೇರಿದಂತೆ ಜಿಲ್ಲೆಯ ಬಹುತೇಕ ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. ಬೆಳೆ ಕೈಗೆ ಬಾರದ ಸ್ಥಿತಿಯಲ್ಲಿ ರೈತರು ತೀವ್ರ ಚಿಂತೆಯಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದ ಬಳಿ ಹಣದ ಕೊರತೆಯಿಲ್ಲ ಎಂದು ವಿಧಾನಸೌಧದಲ್ಲಿ ಹೇಳಿದ್ದರು. ಆದರೆ ಇದೀಗ ಕೇವಲ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವುದು ಸರ್ಕಾರದ ನಿಲುವಿನ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಕಾರಜೋಳ ಟೀಕಿಸಿದ್ದಾರೆ.
ರಾಜಸ್ಥಾನದ ಜೈಸಲ್ಮೇರ್ ಬಳಿಕ ದೇಶದಲ್ಲೇ ಅತ್ಯಂತ ಬರಪೀಡಿತ ಪ್ರದೇಶಗಳಲ್ಲಿ ಒಂದಾಗಿರುವ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಮೂಲಕ ಉಳಿದ ತಾಲೂಕುಗಳ ರೈತರಿಗೆ ಅನ್ಯಾಯ ಮಾಡಲಾಗಿದೆ. ಸಂಕಷ್ಟದಲ್ಲಿರುವ ರೈತರ ನೆರವಿಗೆ ಸರ್ಕಾರ ಬಾರದಿದ್ದರೆ ಸರ್ಕಾರದ ಅಸ್ತಿತ್ವದ ಪ್ರಯೋಜನವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಅವೈಜ್ಞಾನಿಕ ಆರ್ಥಿಕ ನೀತಿಗಳ ಪರಿಣಾಮ ಸರ್ಕಾರದ ಖಜಾನೆ ಖಾಲಿಯಾಗಿದ್ದು, ಬರ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲೂ ಹಣದ ಕೊರತೆ ಎದುರಾಗಿರುವುದು ಇದೀಗ ಸ್ಪಷ್ಟವಾಗುತ್ತಿದೆ ಎಂದು ಕಾರಜೋಳ ಆರೋಪಿಸಿದ್ದಾರೆ.
ರಾಜ್ಯ ಸರ್ಕಾರ ರೈತರ ವಿಚಾರದಲ್ಲಿ ಚೆಲ್ಲಾಟವಾಡಬಾರದು. ವಿಜಯಪುರ ಜಿಲ್ಲೆಯ ಎಲ್ಲ ೧೩ ತಾಲೂಕುಗಳನ್ನೂ ಬರಪೀಡಿತ ತಾಲೂಕುಗಳೆಂದು ಘೋಷಿಸಿ, ಅಗತ್ಯ ಪರಿಹಾರ ಕಾಮಗಾರಿಗಳನ್ನು ತಕ್ಷಣ ಕೈಗೊಳ್ಳಬೇಕು. ರಾಜ್ಯದ ಇತರ ಬರಪೀಡಿತ ಪ್ರದೇಶಗಳನ್ನೂ ಗುರುತಿಸಿ ಪರಿಹಾರ ಒದಗಿಸುವ ಮೂಲಕ ರೈತ ಸಮುದಾಯದ ಹಿತ ಕಾಪಾಡಬೇಕು. ಈ ವಿಚಾರದಲ್ಲಿ ಸರ್ಕಾರ ಮಾನವೀಯತೆ ಹಾಗೂ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಜಿಲ್ಲೆಯ ಎಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ: ಉಮೇಶ ಕಾರಜೋಳ


