ಪ್ರೀತಿ, ವಿಶ್ವಾಸ, ಸಹೋದರತೆಯ ಸಂಕೇತ ರಾಖಿ: ಹಾಸಿಂಪೀರ ವಾಲೀಕಾರ

ಸಪ್ತಸಾಗರ ವಾರ್ತೆ,ವಿಜಯಪುರ, ಆ.28:
ಅಣ್ಣ–ತಂಗಿಯರ ನಡುವಿನ ಪ್ರೀತಿ, ವಿಶ್ವಾಸ ಹಾಗೂ ಬಾಂಧವ್ಯವನ್ನು ಗಟ್ಟಿಗೊಳಿಸುವ ಪವಿತ್ರ ಹಬ್ಬವೇ ರಕ್ಷಾ ಬಂಧನ. ಸಹೋದರಿಯರು ಸಹೋದರರ ಮಣಿಕಟ್ಟಿಗೆ ರಾಖಿ ಕಟ್ಟುವ ಮೂಲಕ ರಕ್ಷಣೆಯ ಸಂಕೇತ ನೀಡಿದರೆ, ಸಹೋದರರು ಸಹೋದರಿಯರ ರಕ್ಷಣೆ ಹಾಗೂ ಬೆಂಬಲಕ್ಕೆ ಸದಾ ನಿಲ್ಲುವ ಭರವಸೆ ನೀಡುತ್ತಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಹೇಳಿದರು.
ನಗರದ ದರ್ಗಾ ಆವರಣದಲ್ಲಿರುವ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಕ್ಷಾ ಬಂಧನ ಕೇವಲ ರಾಖಿ ಕಟ್ಟುವ ಹಬ್ಬವಲ್ಲ. ಕುಟುಂಬದ ಸದಸ್ಯರ ನಡುವೆ ಪ್ರೀತಿ, ವಿಶ್ವಾಸ, ಸಹೋದರತೆ ಮತ್ತು ಭಾವೈಕ್ಯತೆಯನ್ನು ಬೆಸೆಯುವ ಮಹತ್ವದ ಆಚರಣೆಯಾಗಿದೆ. ಪರಸ್ಪರ ಗೌರವ, ಸಹಕಾರ ಹಾಗೂ ರಕ್ಷಣೆಯ ಮನೋಭಾವವನ್ನು ಬೆಳೆಸುವಲ್ಲಿ ಈ ಹಬ್ಬದ ಸಂದೇಶ ಮಹತ್ವದ್ದಾಗಿದೆ ಎಂದರು.
ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮೀ, ರಕ್ಷಾ ಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿಯಂತಹ ಪ್ರಮುಖ ಹಬ್ಬಗಳು ಬರುವುದರಿಂದ ಈ ಮಾಸಕ್ಕೆ ವಿಶೇಷ ಮಹತ್ವವಿದೆ. ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸುವುದರ ಜೊತೆಗೆ ಸಮಾಜವನ್ನು ವ್ಯಸನಮುಕ್ತಗೊಳಿಸುವ ನಿಟ್ಟಿನಲ್ಲಿ ಬ್ರಹ್ಮಕುಮಾರಿ ಸಂಸ್ಥೆಗಳು, ಮಠಾಧೀಶರು ಹಾಗೂ ಮೌಲ್ವಿಗಳು ನಡೆಸುತ್ತಿರುವ ಜಾಗೃತಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಕರೆ

ಬಿ.ಕೆ. ಸರೋಜಾ ಅಕ್ಕನವರು ಮಾತನಾಡಿ, ಭಕ್ತಿ ಮತ್ತು ಶ್ರದ್ಧೆಯಿಂದ ಪರಮಾತ್ಮನನ್ನು ಸ್ಮರಿಸುವುದರೊಂದಿಗೆ ನಮ್ಮ ಸಂಸ್ಕೃತಿ–ಪರಂಪರೆಯನ್ನು ಸಂರಕ್ಷಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ಕುಟುಂಬ ಹಾಗೂ ಸಮಾಜದಲ್ಲಿರುವ ಅನಿಷ್ಟ ಪದ್ಧತಿಗಳನ್ನು ದೂರ ಮಾಡಿ, ಸಾರ್ಥಕ ಹಾಗೂ ಮೌಲ್ಯಯುತ ಜೀವನ ನಡೆಸಬೇಕು. ವ್ಯಸನಗಳಿಂದಾಗಿ ಅನೇಕ ಕುಟುಂಬಗಳ ಸ್ಥಿತಿ ಗಂಭೀರವಾಗುತ್ತಿದ್ದು, ಯುವಜನರು ದುಶ್ಚಟಗಳಿಂದ ದೂರವಿದ್ದು ಆಧ್ಯಾತ್ಮಿಕ ಹಾಗೂ ಸಾತ್ವಿಕ ಜೀವನದತ್ತ ಸಾಗಬೇಕು ಎಂದು ಕರೆ ನೀಡಿದರು.
ಸತ್ಯ, ತಾಳ್ಮೆ, ಸಹನೆ, ಪ್ರೀತಿ ಮತ್ತು ನಂಬಿಕೆಯನ್ನು ಜೀವನದಲ್ಲಿ ಅಳವಡಿಸಿಕೊಂಡು, ಸಹೋದರತೆ ಹಾಗೂ ಭಾವೈಕ್ಯತೆಯ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿಶ್ವನಾಥ ದಾಬಡೆ, ಬಿ.ಬಿ. ಚಿತ್ತವಾಡಗಿ, ಬಿ.ಕೆ. ಗಂಗಾಧರ, ಬಿ.ಕೆ. ಪ್ರಭು, ಬಿ.ಕೆ. ಶ್ರೀಮಂತ, ತನುಜಾ ನಿಂಗನೂರ, ಪ್ರೀತಿ ಕಟ್ಟಿಮನಿ, ಅಶ್ವಿನಿ ಪಾಟೀಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this