ವಿಜಯಪುರ ಜಿಲ್ಲೆಯಲ್ಲಿ SIR ಅಂಕಿಅಂಶಗಳೇ ಆತಂಕಕಾರಿ

2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗೆ; 1.52 ಲಕ್ಷ ‘ಸ್ಥಳಾಂತರಿತ’ — ವಿಜಯಪುರ ನಗರದಲ್ಲೇ 79,737 ಹೆಸರುಗಳು

ಸಪ್ತಸಾಗರ ವಾರ್ತೆ,ವಿಜಯಪುರ, ಆ.28:
ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ವಿಜಯಪುರ ಜಿಲ್ಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ಭಾರೀ ಬದಲಾವಣೆಗಳಿಗೆ ಕಾರಣವಾಗಿದ್ದು, ಸುಮಾರು 2.97 ಲಕ್ಷ ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ವಿಜಯಪುರ ಜಿಲ್ಲಾ SIR ಹೋರಾಟ ಸಮಿತಿ ಹಾಗೂ ಮತ ಕಾವಲು ಸಮಿತಿ ಆಕ್ಷೇಪ ವ್ಯಕ್ತಪಡಿಸಿವೆ.
ಮತದಾರರ ಪಟ್ಟಿಯನ್ನು ಶುದ್ಧೀಕರಿಸುವುದು ಅಗತ್ಯವಾದರೂ, ಅದರ ಹೆಸರಿನಲ್ಲಿ ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಹೋಗಬಾರದು ಎಂಬುದು ಸಮಿತಿಯ ಸ್ಪಷ್ಟ ನಿಲುವಾಗಿದೆ.
ಜಿಲ್ಲೆಯಲ್ಲಿ SIR ಪ್ರಕ್ರಿಯೆಯ ಮೊದಲ ಹಂತದಲ್ಲಿ ಒಟ್ಟು 19,82,114 ಮತದಾರರಿಗೆ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಲಾಗಿತ್ತು. ಈ ಪೈಕಿ 16,84,968 ಫಾರಂಗಳು ಡಿಜಿಟಲೀಕರಣಗೊಂಡಿದ್ದು, 2,97,147 ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ ಎಂದು ಸಮಿತಿ ತಿಳಿಸಿದೆ.
ಇವರಲ್ಲಿ 1,52,169 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 59,093 ಮಂದಿ ಗೈರು ಹಾಗೂ 30,692 ಮಂದಿ ಡುಪ್ಲಿಕೇಟ್ ಮತದಾರರು ಎಂದು ಗುರುತಿಸಲಾಗಿದೆ.

ವಿಜಯಪುರ ನಗರದಲ್ಲೇ 79,737 ಮಂದಿ ಹೊರಗೆ

ಕ್ಷೇತ್ರವಾರು ಅಂಕಿಅಂಶಗಳಲ್ಲಿ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು 79,737 ಮತದಾರರು ವಿವಿಧ ಕಾರಣಗಳಿಂದ ಕರಡು ಪಟ್ಟಿಯಿಂದ ಹೊರಗುಳಿದಿದ್ದಾರೆ. ನಂತರದ ಸ್ಥಾನದಲ್ಲಿ ನಾಗಠಾಣ ಕ್ಷೇತ್ರದಲ್ಲಿ 40,526 ಹಾಗೂ ಮುದ್ದೇಬಿಹಾಳದಲ್ಲಿ 35,990 ಮತದಾರರಿದ್ದಾರೆ.
ವಿಜಯಪುರ ನಗರ ಕ್ಷೇತ್ರದಲ್ಲೇ 24,693 ಮಂದಿ ‘Shifted’ ಹಾಗೂ 38,520 ಮಂದಿ ‘Absent’ ಎಂದು ಗುರುತಿಸಿರುವುದು ವಿಶೇಷ ಗಮನ ಸೆಳೆದಿದೆ.
‘Absent’ ಎಂದು ಗುರುತಿಸಿರುವುದೇ ಮತದಾರ ಅನರ್ಹನೆಂಬ ಅರ್ಥವಲ್ಲ. ಉದ್ಯೋಗ, ಶಿಕ್ಷಣ, ವ್ಯಾಪಾರ ಅಥವಾ ಕುಟುಂಬದ ಕಾರಣದಿಂದ ವ್ಯಕ್ತಿ ತಾತ್ಕಾಲಿಕವಾಗಿ ಬೇರೆಡೆ ವಾಸಿಸುತ್ತಿರಬಹುದು. SIR ಸಂದರ್ಭದಲ್ಲಿ ಮನೆಗೆ ಭೇಟಿ ನೀಡಿದಾಗ ವ್ಯಕ್ತಿ ಸಿಗಲಿಲ್ಲ ಎಂಬ ಕಾರಣಕ್ಕೆ ಅವರ ಮತದಾನದ ಹಕ್ಕನ್ನು ಪ್ರಶ್ನಿಸುವುದು ಸರಿಯಲ್ಲ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘Shifted’ ಮತದಾರರ ಹಕ್ಕು ರಕ್ಷಿಸಬೇಕು

ವಿಜಯಪುರ ಜಿಲ್ಲೆಯಿಂದ ಉದ್ಯೋಗ, ಶಿಕ್ಷಣ, ವ್ಯಾಪಾರ ಹಾಗೂ ಉತ್ತಮ ಜೀವನೋಪಾಯಕ್ಕಾಗಿ ಬೆಂಗಳೂರು, ಗೋವಾ, ಮಹಾರಾಷ್ಟ್ರ, ಕೇರಳ ಸೇರಿದಂತೆ ವಿವಿಧ ನಗರ ಮತ್ತು ರಾಜ್ಯಗಳಿಗೆ ತೆರಳುವುದು ಸಾಮಾನ್ಯವಾಗಿದೆ.
ಹೀಗಾಗಿ ಬೇರೆಡೆಗೆ ಸ್ಥಳಾಂತರವಾಗಿರುವುದು ಮತದಾನದ ಹಕ್ಕು ಕಳೆದುಕೊಳ್ಳಲು ಕಾರಣವಾಗಬಾರದು. ಹಳೆಯ ಸ್ಥಳದ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಂದರ್ಭದಲ್ಲಿ ಹೊಸ ಸ್ಥಳದಲ್ಲಿ ಮತದಾರರಾಗಿ ನೋಂದಾಯಿಸಿಕೊಳ್ಳಲು ಸರಳ ವ್ಯವಸ್ಥೆ ಕಲ್ಪಿಸಬೇಕು. ಇಲ್ಲವಾದರೆ ಹಳೆಯ ಮತ್ತು ಹೊಸ ಎರಡೂ ಕಡೆ ಮತದಾರರ ಪಟ್ಟಿಯಿಂದ ಹೆಸರು ಹೊರಗುಳಿಯುವ ಅಪಾಯವಿದೆ ಎಂದು ಸಮಿತಿ ಎಚ್ಚರಿಸಿದೆ.

‘ಅರ್ಹ ಮತದಾರರ ಹಕ್ಕು ಕಸಿಯಬಾರದು’

ಮತ ಕಾವಲು ಸಮಿತಿ ಅಧ್ಯಕ್ಷ ಭೋಗೇಶ್ ಸೋಲಾಪುರ್ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ SIR ಪ್ರಕ್ರಿಯೆಯಡಿ ಸುಮಾರು 2.97 ಲಕ್ಷ ಮತದಾರರು ಕರಡು ಪಟ್ಟಿಯಿಂದ ಹೊರಗುಳಿದಿರುವುದು ಅತ್ಯಂತ ಆತಂಕಕಾರಿ ಸಂಗತಿ. ಅದರಲ್ಲೂ 1.52 ಲಕ್ಷಕ್ಕೂ ಹೆಚ್ಚು ಮತದಾರರನ್ನು ‘ಸ್ಥಳಾಂತರಗೊಂಡವರು’ ಹಾಗೂ 59 ಸಾವಿರಕ್ಕೂ ಹೆಚ್ಚು ಮಂದಿಯನ್ನು ‘ಗೈರು’ ಎಂದು ಗುರುತಿಸಲಾಗಿದೆ ಎಂದರು.
ಉದ್ಯೋಗ, ಶಿಕ್ಷಣ, ವ್ಯಾಪಾರ ಅಥವಾ ಇತರ ಕಾರಣಗಳಿಂದ ತಾತ್ಕಾಲಿಕವಾಗಿ ಬೇರೆಡೆ ವಾಸಿಸುವುದು ಮತದಾನದ ಹಕ್ಕು ಕಸಿಯಲು ಕಾರಣವಾಗಬಾರದು. ವಿಶೇಷವಾಗಿ ವಿಜಯಪುರ ನಗರ ಕ್ಷೇತ್ರದಲ್ಲಿ 79,737 ಮತದಾರರು ಪಟ್ಟಿಯಿಂದ ಹೊರಗುಳಿದಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕ್ಷೇತ್ರವಾರು ಸಂಪೂರ್ಣ ಪಾರದರ್ಶಕತೆ ಹಾಗೂ ಸ್ಪಷ್ಟತೆ ನೀಡಬೇಕು ಎಂದು ಆಗ್ರಹಿಸಿದರು.
ಅರ್ಹ ಮತದಾರರ ಹೆಸರುಗಳನ್ನು ವೈಯಕ್ತಿಕ ಪರಿಶೀಲನೆ ಹಾಗೂ ಸಮರ್ಪಕ ಅವಕಾಶವಿಲ್ಲದೆ ಕೈಬಿಡಬಾರದು. ಒಬ್ಬನೇ ಒಬ್ಬ ಅರ್ಹ ಮತದಾರನ ಮತದಾನದ ಹಕ್ಕು ಕಳೆದುಹೋಗದಂತೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ಹೋರಾಟ ಮುಂದುವರಿಸಲಾಗುವುದು ಎಂದು ಹೇಳಿದರು.

SIR ಪ್ರಕ್ರಿಯೆ ಪಾರದರ್ಶಕವಾಗಲಿ

ಮೊಹಮ್ಮದ್ ಖದೀರ್ ಮಾತನಾಡಿ, SIR ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿ ನಡೆಯಬೇಕು. ‘Absent’ ಮತ್ತು ‘Shifted’ ಎಂದು ಗುರುತಿಸಲಾದ ಪ್ರತಿಯೊಬ್ಬ ಮತದಾರನಿಗೂ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ನೀಡಬೇಕು. ಚುನಾವಣಾ ಆಯೋಗವು ಕ್ಷೇತ್ರವಾರು ಸಂಪೂರ್ಣ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಜನರಲ್ಲಿ ಇರುವ ಗೊಂದಲ ನಿವಾರಿಸಬೇಕು ಎಂದು ಒತ್ತಾಯಿಸಿದರು.
ಲಕ್ಷ್ಮಣ ಹಂದ್ರಾಳ ಮಾತನಾಡಿ, ಉದ್ಯೋಗ ಹಾಗೂ ಶಿಕ್ಷಣಕ್ಕಾಗಿ ಯುವಕರು ಮತ್ತು ಕುಟುಂಬಗಳು ಬೇರೆ ನಗರಗಳಿಗೆ ತೆರಳುವುದು ಸಹಜ. ಅವರನ್ನು ‘Shifted’ ಎಂದು ಗುರುತಿಸಿ ಪಟ್ಟಿಯಿಂದ ಹೊರಗಿಡುವ ಬದಲು, ಮತದಾರರ ಹಕ್ಕು ಸುರಕ್ಷಿತವಾಗಿರುವಂತೆ ಮತ ವರ್ಗಾವಣೆ ಮತ್ತು ಮರುನೋಂದಣಿಗೆ ಸರಳ ವ್ಯವಸ್ಥೆ ಕಲ್ಪಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ದೋಷದ ಹೊಣೆಯನ್ನು ಸಾಮಾನ್ಯ ಮತದಾರರ ಮೇಲೆ ಹೊರಿಸುವುದು ಸರಿಯಲ್ಲ ಎಂದರು.
ಡಾ. ಗುರಿಕರ್ ಮಾತನಾಡಿ, SIRನಲ್ಲಿ ಕಂಡುಬರುವ ‘Logical Discrepancy’ ಸೇರಿದಂತೆ ಯಾವುದೇ ಡೇಟಾ ಅಥವಾ ತಾಂತ್ರಿಕ ವ್ಯತ್ಯಾಸವನ್ನು ಮತದಾರನ ಅನರ್ಹತೆಯ ಅಂತಿಮ ಸಾಕ್ಷಿಯಾಗಿ ಪರಿಗಣಿಸಬಾರದು. ಪ್ರತಿಯೊಂದು ಪ್ರಕರಣವನ್ನೂ ಮಾನವೀಯವಾಗಿ ಪರಿಶೀಲಿಸಿ, ಸಂಬಂಧಪಟ್ಟ ಮತದಾರರಿಗೆ ದಾಖಲೆ ಸಲ್ಲಿಸಿ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.

ಮತದಾರರೇ ತಪ್ಪಿತಸ್ಥರೇ?

SIR ಪ್ರಕ್ರಿಯೆಯ ಕುರಿತು ಸಾರ್ವಜನಿಕರಿಗೆ ಸಮರ್ಪಕ ಮಾಹಿತಿ ತಲುಪದಿದ್ದರೆ ಅದರ ಹೊಣೆಯನ್ನು ಮತದಾರರ ಮೇಲೆ ಹೊರಿಸುವುದು ಸರಿಯಲ್ಲ ಎಂದು ಸಮಿತಿ ಹೇಳಿದೆ.
ಎನ್ಯೂಮರೇಷನ್ ಫಾರಂ ಸಮಯಕ್ಕೆ ತಲುಪದಿರುವುದು, BLOಗೆ ಸಮರ್ಪಕ ಮಾರ್ಗದರ್ಶನದ ಕೊರತೆ ಅಥವಾ ಮತದಾರರು ಕೆಲಸದ ನಿಮಿತ್ತ ಊರಿನಲ್ಲಿ ಇಲ್ಲದಿರುವುದು ಮುಂತಾದ ಆಡಳಿತಾತ್ಮಕ ಕಾರಣಗಳಿಂದ ಅರ್ಹ ಮತದಾರರ ಹೆಸರು ಪಟ್ಟಿಯಿಂದ ಹೊರಗುಳಿಯಬಾರದು. ತಾಂತ್ರಿಕ ಅಥವಾ ಆಡಳಿತಾತ್ಮಕ ದೋಷದ ಶಿಕ್ಷೆಯನ್ನು ಸಾಮಾನ್ಯ ಮತದಾರ ಅನುಭವಿಸಬಾರದು ಎಂದು ಒತ್ತಾಯಿಸಿದೆ.

ಸಮಿತಿಯ ಪ್ರಮುಖ ಬೇಡಿಕೆಗಳು

  • SIRನಲ್ಲಿ ತಪ್ಪಾಗಿ ಹೊರಗುಳಿದಿರುವ ಎಲ್ಲ ಅರ್ಹ ಮತದಾರರ ಹೆಸರುಗಳನ್ನು ಮರುಪರಿಶೀಲಿಸಬೇಕು.
  • ‘Absent’ ಎಂದು ಗುರುತಿಸಿರುವ ಪ್ರತಿಯೊಬ್ಬ ಮತದಾರನಿಗೂ ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಅವಕಾಶ ನೀಡಬೇಕು.
  • ‘Shifted’ ಮತದಾರರಿಗೆ ಹೊಸ ವಿಳಾಸಕ್ಕೆ ಮತ ವರ್ಗಾಯಿಸಿಕೊಳ್ಳಲು ಸರಳ ಹಾಗೂ ತ್ವರಿತ ವ್ಯವಸ್ಥೆ ಕಲ್ಪಿಸಬೇಕು.
  • ವೈಯಕ್ತಿಕ ಪರಿಶೀಲನೆ ಮತ್ತು ಸಮರ್ಪಕ ಅವಕಾಶವಿಲ್ಲದೆ ಯಾವುದೇ ಅರ್ಹ ಮತದಾರನ ಹೆಸರನ್ನು ಅಂತಿಮವಾಗಿ ಕೈಬಿಡಬಾರದು.
  • ‘Logical Discrepancy’ ಎಂದು ಗುರುತಿಸಿರುವ ಮತದಾರರಿಗೆ ಅದರ ಕಾರಣವನ್ನು ಸ್ಪಷ್ಟವಾಗಿ ತಿಳಿಸಬೇಕು.
  • BLOಗಳು ಹಾಗೂ ಸಾರ್ವಜನಿಕರಿಗೆ SIR ಕುರಿತು ಹೆಚ್ಚಿನ ತರಬೇತಿ ಮತ್ತು ಜಾಗೃತಿ ನೀಡಬೇಕು.
  • ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಪರಿಣಾಮಕಾರಿ ಮತದಾರರ ಸಹಾಯ ಕೇಂದ್ರಗಳನ್ನು ನಡೆಸಬೇಕು.
  • ಕರಡು ಪಟ್ಟಿಯ ಆಕ್ಷೇಪಣೆಗಳನ್ನು ಪಕ್ಷಪಾತವಿಲ್ಲದೆ ಪರಿಶೀಲಿಸಿ ಅರ್ಹ ಮತದಾರರ ಹೆಸರುಗಳನ್ನು ಮರುಸ್ಥಾಪಿಸಬೇಕು.
  • SIRನ ಪ್ರತಿಯೊಂದು ಹಂತದ ಅಂಕಿಅಂಶಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿ ಸಂಪೂರ್ಣ ಪಾರದರ್ಶಕತೆ ಕಾಪಾಡಬೇಕು.

‘ಅನರ್ಹರನ್ನು ಗುರುತಿಸಿ – ಅರ್ಹರನ್ನು ಅಳಿಸಬೇಡಿ’

ಮತ ಕಾವಲು ಸಮಿತಿಯ ಹೋರಾಟವು ಯಾವುದೇ BLO, ಚುನಾವಣಾಧಿಕಾರಿ ಅಥವಾ ವೈಯಕ್ತಿಕ ಅಧಿಕಾರಿಯ ವಿರುದ್ಧವಲ್ಲ. ಅದು ವ್ಯವಸ್ಥೆಯ ಪಾರದರ್ಶಕತೆ, ಪ್ರಕ್ರಿಯೆಯ ನ್ಯಾಯಸಮ್ಮತತೆ ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕಿನ ರಕ್ಷಣೆಯ ಪರವಾಗಿದೆ ಎಂದು ಸಮಿತಿ ಸ್ಪಷ್ಟಪಡಿಸಿದೆ.
“ಅನರ್ಹರನ್ನು ಗುರುತಿಸಿ – ಅರ್ಹರನ್ನು ಅಳಿಸಬೇಡಿ. ಮತದಾರರ ಪಟ್ಟಿ ಶುದ್ಧೀಕರಣದ ಹೆಸರಿನಲ್ಲಿ ಮತದಾನದ ಹಕ್ಕು ಕಸಿಯಬೇಡಿ” ಎಂಬ ಘೋಷಣೆಯೊಂದಿಗೆ ಸಮಿತಿ ತನ್ನ ಹೋರಾಟ ಮುಂದುವರಿಸುವುದಾಗಿ ತಿಳಿಸಿದೆ.
ವಿಜಯಪುರ ಜಿಲ್ಲೆಯ 2.97 ಲಕ್ಷ ಮತದಾರರ ಹೆಸರುಗಳು ಏಕೆ ಕರಡು ಪಟ್ಟಿಯಿಂದ ಹೊರಗುಳಿದಿವೆ ಎಂಬುದಕ್ಕೆ ಚುನಾವಣಾ ಆಯೋಗವು ಕ್ಷೇತ್ರವಾರು ಹಾಗೂ ಮತದಾರರ ವರ್ಗವಾರು ಸಂಪೂರ್ಣ ಸ್ಪಷ್ಟತೆ ನೀಡಬೇಕು. ಪ್ರತಿಯೊಬ್ಬ ಅರ್ಹ ಮತದಾರನ ಹೆಸರು ಮತದಾರರ ಪಟ್ಟಿಯಲ್ಲಿ ಉಳಿಯಬೇಕು ಹಾಗೂ ಪ್ರತಿಯೊಬ್ಬ ಅರ್ಹ ನಾಗರಿಕನ ಮತದಾನದ ಹಕ್ಕು ರಕ್ಷಿಸಲ್ಪಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮತ ಕಾವಲು ಸಮಿತಿಯ ಸದಸ್ಯರಾದ ಅಕ್ರಮ ಮಾಶಾಲ್ಕರ್, ಫಯಾಜ್ ಕಲಾದಗಿ, ನೀಲಂಬಿಕಾ ಬಿರಾದಾರ್ ಹಾಗೂ ಶ್ರೀನಾಥ್ ಪೂಜಾರಿ ಉಪಸ್ಥಿತರಿದ್ದರು.

Share this