ಸಪ್ತಸಾಗರ ವಾರ್ತೆ,ವಿಜಯಪುರ, ಆ. 28:
ಜಿಲ್ಲೆಯ ಐತಿಹಾಸಿಕ ಹಾಗೂ ಪ್ರವಾಸಿ ತಾಣಗಳನ್ನು ಪ್ರವಾಸಿಗರ ಆಕರ್ಷಣೆಯ ಕೇಂದ್ರಗಳನ್ನಾಗಿ ಅಭಿವೃದ್ಧಿಪಡಿಸಲು ಜಿಲ್ಲಾಡಳಿತ ಮುಂದಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವಿಶೇಷ ಸಮಿತಿಯ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರು ಕುಮಟಗಿ ಹಾಗೂ ಚಟ್ಟರಕಿ ಗ್ರಾಮದ ಐತಿಹಾಸಿಕ ತಾಣಗಳಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಕುಮಟಗಿ ಅರಮನೆಗೆ ಹೊಸ ರೂಪ
ಕುಮಟಗಿ ಗ್ರಾಮದ ಆದಿಲ್ ಶಾಹಿ ಕಾಲದ ಬೇಸಿಗೆ ಅರಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅರಮನೆಯ ವಿಶಿಷ್ಟ ವೈಜ್ಞಾನಿಕ ನೀರು ಸರಬರಾಜು ವ್ಯವಸ್ಥೆ, ಅಪರೂಪದ ವರ್ಣಚಿತ್ರಗಳು ಹಾಗೂ ಪಕ್ಕದಲ್ಲಿರುವ ಐತಿಹಾಸಿಕ ಕೆರೆಯನ್ನು ವೀಕ್ಷಿಸಿದರು.
ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಪಂಚಾಯಿತಿ ಅನುದಾನದಡಿ ಶೌಚಾಲಯ, ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕ ಸೇರಿದಂತೆ ಮೂಲಸೌಕರ್ಯಗಳನ್ನು ತಕ್ಷಣ ಒದಗಿಸಲಾಗುವುದು ಎಂದು ಡಾ. ಆನಂದ ಕೆ. ತಿಳಿಸಿದರು.
ಅಲ್ಲದೆ, ಕೇಂದ್ರ ಸರ್ಕಾರದ ‘ಸ್ವದೇಶ ದರ್ಶನ್’ ಯೋಜನೆಯಡಿ ಕುಮಟಗಿ ತಾಣದ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.
ಚಟ್ಟರಕಿ ದೇಗುಲ ಅಭಿವೃದ್ಧಿಗೆ ಸೂಚನೆ
ಸಿಂದಗಿ ತಾಲೂಕಿನ ಚಟ್ಟರಕಿ ಗ್ರಾಮದ 12ನೇ ಶತಮಾನದ ಸುಂದರ ಕಲ್ಲಿನ ಕೆತ್ತನೆಯ ಶ್ರೀ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಅರ್ಚಕರು, ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿ ದೇವಾಲಯದ ಐತಿಹಾಸಿಕ ಹಿನ್ನೆಲೆ ಮತ್ತು ಅಭಿವೃದ್ಧಿ ಅಗತ್ಯಗಳ ಕುರಿತು ಮಾಹಿತಿ ಪಡೆದರು.
ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವಂತೆ ಸಮುದಾಯ ಶೌಚಾಲಯ, ಸಂಪರ್ಕ ರಸ್ತೆ, ವಿದ್ಯುತ್ ಹಾಗೂ ಕುಡಿಯುವ ನೀರು ಕಲ್ಪಿಸಲು ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ಜಿಲ್ಲಾಧಿಕಾರಿಗಳು ತಕ್ಷಣದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ಐ) ಹಾಗೂ ಪ್ರವಾಸೋದ್ಯಮ ಇಲಾಖೆಯ ಸಮನ್ವಯದೊಂದಿಗೆ ಚಟ್ಟರಕಿ ದತ್ತಾತ್ರೇಯ ದೇವಾಲಯ ಕ್ಷೇತ್ರವನ್ನೂ ‘ಸ್ವದೇಶ ದರ್ಶನ್’ ಯೋಜನೆಯಡಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಅಧಿಕಾರಿಗಳು ಭಾಗಿ
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಅರವಿಂದ ಹೂಗಾರ, ಎಎಸ್ಐ ಸಹಾಯಕ ಸಂರಕ್ಷಣಾಧಿಕಾರಿ ಲಾರೆನ್ಸ್, ಎಎಸ್ಐ ಇಲಾಖೆಯ ಅಧಿಕಾರಿಗಳು, ಪ್ರವಾಸಿ ಮಾರ್ಗದರ್ಶಕರಾದ ಅಮೀನ್ ಹುಲ್ಲೂರ, ಸರದಾರ ಜಾಧವ್ ಹಾಗೂ ದೇವರಹಿಪ್ಪರಗಿ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.


