ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳ ಇಂಗ್ಲಿಷ್ ಪ್ರವಚನಗಳ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಕೃತಿ

ಸಪ್ತಸಾಗರ ವಾರ್ತೆ,ವಿಜಯಪುರ, ಆ.29:
ಜ್ಞಾನಯೋಗಿ ಸಿದ್ದೇಶ್ವರ ಶ್ರೀಗಳು ಇಂಗ್ಲಿಷ್‌ನಲ್ಲಿ ನೀಡಿರುವ ಪ್ರವಚನಗಳ ಸಂಗ್ರಹವಾದ ‘ರಿಯಲೈಸೇಷನ್ ಆಫ್ ದ ಸೆಲ್ಫ್’ ಕೃತಿಯನ್ನು ಲೇಖಕ ಎಂ. ಎಸ್. ಚಾಂದಕವಟೆ ಅವರು ಕೈಗಾರಿಕೆ, ಮೂಲಸೌಲಭ್ಯ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರಿಗೆ ಶನಿವಾರ ನಗರದ ಗೃಹ ಕಚೇರಿಯಲ್ಲಿ ಹಸ್ತಾಂತರಿಸಿದರು.
ಬೆಂಗಳೂರಿನ ಭಾರತೀಯ ವಿದ್ಯಾಭವನದ ಗಾಂಧಿ ಸೆಂಟರ್ ಆಫ್ ಸಾಯಿನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯುಸ್ ಸಂಸ್ಥೆ ಪ್ರಕಟಿಸಿರುವ ಈ ಕೃತಿ ಆ.17ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಿಡುಗಡೆಯಾಗಿತ್ತು.
ಸಿದ್ದೇಶ್ವರ ಶ್ರೀಗಳ ಪ್ರವಚನಗಳ ಕನ್ನಡ ಕೃತಿಗಳು ಹಾಗೂ ವಿವಿಧ ಭಾಷಾಂತರಗಳು ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಶ್ರೀಗಳು ಇಂಗ್ಲಿಷ್‌ನಲ್ಲಿ ನೀಡಿದ ಪ್ರವಚನಗಳ ಸಮಗ್ರ ಸಂಗ್ರಹ ಕೃತಿಯಾಗಿ ಪ್ರಕಟವಾಗಿರುವುದು ಇದೇ ಮೊದಲು ಎಂದು ಲೇಖಕ ಎಂ. ಎಸ್. ಚಾಂದಕವಟೆ ಅವರು ಸಚಿವರಿಗೆ ವಿವರಿಸಿದರು.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿದ್ದ ಸಂದರ್ಭದಲ್ಲಿ ಸಿದ್ದೇಶ್ವರ ಶ್ರೀಗಳು ಪ್ರತಿ ಭಾನುವಾರ ಇಂಗ್ಲಿಷ್‌ನಲ್ಲಿ ಪ್ರವಚನ ನೀಡುತ್ತಿದ್ದರು. ಶ್ರೀಗಳಿಗೆ ಇಂಗ್ಲಿಷ್ ಭಾಷೆಯ ಮೇಲೂ ಉತ್ತಮ ಪ್ರಭುತ್ವವಿತ್ತು. ಅವರ ಚಿಂತನೆಗಳನ್ನು ದೇಶ-ವಿದೇಶಗಳಲ್ಲಿ ಮತ್ತಷ್ಟು ಪರಿಚಯಿಸುವ ಉದ್ದೇಶದಿಂದ ಅಭಿಮಾನದಿಂದ ಈ ಕೃತಿಯನ್ನು ಸಂಗ್ರಹಿಸಿ ರೂಪಿಸಿರುವುದಾಗಿ ಚಾಂದಕವಟೆ ತಿಳಿಸಿದರು.
ಇದೇ ವೇಳೆ ಆಯ್ದ ಪ್ರವಚನಗಳನ್ನೊಳಗೊಂಡ ‘ಸಾಧಕರ ಜೀವನ ಪ್ರಸಂಗಗಳು’ ಹಾಗೂ ಬುದ್ಧನ ಕುರಿತು ಸಿದ್ದೇಶ್ವರ ಶ್ರೀಗಳು ನೀಡಿರುವ ವಿಚಾರಗಳ ಸಂಕಲನವಾದ ‘ಬುದ್ಧನ ನೆನಹುಗಳು’ ಕೃತಿಗಳನ್ನೂ ಸಚಿವರಿಗೆ ಹಸ್ತಾಂತರಿಸಲಾಯಿತು.
ಸಂತಸದಿಂದ ಕೃತಿಗಳನ್ನು ಸ್ವೀಕರಿಸಿದ ಸಚಿವ ಎಂ. ಬಿ. ಪಾಟೀಲ ಅವರು ಲೇಖಕ ಚಾಂದಕವಟೆ ಅವರನ್ನು ಅಭಿನಂದಿಸಿದರು.
ಚಾಂದಕವಟೆ ಅವರು ಮತ್ತೊಂದು ಇಂಗ್ಲಿಷ್ ಕೃತಿಯ ರಚನೆಯಲ್ಲಿ ತೊಡಗಿದ್ದು, ಕೃತಿ ಪೂರ್ಣಗೊಂಡ ಬಳಿಕ ಪ್ರಕಟಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ವಿಠ್ಠಲ ಕಟಕದೊಂಡ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಾಪುಗೌಡ ಪಾಟೀಲ ಶೇಗುಣಸಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Share this