ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:
ನಗರದ ಹೃದಯಭಾಗದಲ್ಲಿರುವ ಐತಿಹಾಸಿಕ ಗಾಂಧಿ ವೃತ್ತವನ್ನು ನವೀಕರಿಸಿ, ಭವ್ಯವಾದ ಮಹಾತ್ಮ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲು ಕ್ರಮ ಕೈಗೊಳ್ಳಲಾಗಿದ್ದು, ಮುಂಬರುವ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
ನಗರದ ತಮ್ಮ ಗೃಹ ಕಚೇರಿಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಗಾಂಧಿ ವೃತ್ತದ ನವೀಕರಣದ ವಿನ್ಯಾಸ, ರೂಪುರೇಷೆ ಹಾಗೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ವಿಜಯಪುರ ನಗರದ ಪ್ರಮುಖ ಸ್ಥಳದಲ್ಲಿರುವ ಗಾಂಧಿ ವೃತ್ತ ಹಲವು ವರ್ಷಗಳಿಂದ ಹಳೆಯ ಸ್ವರೂಪದಲ್ಲೇ ಇದೆ. ಅಲ್ಲಿರುವ ಮಹಾತ್ಮ ಗಾಂಧೀಜಿಯವರ ಪ್ರತಿಮೆಯೂ ಚಿಕ್ಕದಾಗಿದ್ದು, ಅಭಿವೃದ್ಧಿ ಹೊಂದುತ್ತಿರುವ ನಗರದ ಸೌಂದರ್ಯಕ್ಕೆ ತಕ್ಕಂತೆ ವೃತ್ತವನ್ನು ಆಧುನೀಕರಿಸುವ ಅಗತ್ಯವಿದೆ ಎಂದು ಹೇಳಿದರು.
ಸತ್ಯ, ಅಹಿಂಸೆ, ಶಾಂತಿ ಹಾಗೂ ಸಮಾನತೆಯ ಸಂದೇಶವನ್ನು ಜಗತ್ತಿಗೆ ಸಾರಿದ ಮಹಾತ್ಮ ಗಾಂಧೀಜಿಯವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಸ್ಮರಣೆಯನ್ನು ಮತ್ತಷ್ಟು ಅರ್ಥಪೂರ್ಣಗೊಳಿಸುವ ಜೊತೆಗೆ ನಗರದ ಸೌಂದರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಗಾಂಧಿ ವೃತ್ತವನ್ನು ಸಮಗ್ರವಾಗಿ ನವೀಕರಿಸಿ, ಭವ್ಯ ಗಾಂಧೀಜಿ ಪುತ್ಥಳಿಯನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಗಾಂಧಿ ವೃತ್ತವನ್ನು ಅಂದಗೊಳಿಸಿ, ಭವ್ಯ ಗಾಂಧೀಜಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವ ಕುರಿತು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಸಚಿವರು ಈಗಾಗಲೇ ಸೂಚನೆ ನೀಡಿದ್ದರು. ಅದರಂತೆ ಪ್ರಖ್ಯಾತ ವಾಸ್ತುಶಿಲ್ಪಿ ಆನಂದ ಕುಸೂರ ಅವರು ಸಿದ್ಧಪಡಿಸಿರುವ ವಿನ್ಯಾಸವನ್ನು ಸಭೆಯಲ್ಲಿ ಸಚಿವರಿಗೆ ಪ್ರಸ್ತುತಪಡಿಸಲಾಯಿತು.
ವಿನ್ಯಾಸ ಪರಿಶೀಲಿಸಿದ ಸಚಿವರು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿದರು.
ಕಾಮಗಾರಿಯನ್ನು ತ್ವರಿತವಾಗಿ ಕೈಗೆತ್ತಿಕೊಂಡು, ಅಕ್ಟೋಬರ್ 2ರ ಗಾಂಧಿ ಜಯಂತಿಯಂದೇ ಶಂಕುಸ್ಥಾಪನೆ ನೆರವೇರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಬಾಪೂಗೌಡ ಪಾಟೀಲ ಶೇಗುಣಸಿ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಆಯುಕ್ತ ರಾಜಶೇಖರ ಡಂಬಳ, ಮುಖಂಡ ಅಬ್ದುಲ್ ಹಮೀದ್ ಮುಶ್ರೀಫ್ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ಟೋಬರ್ 2ರಂದು ಗಾಂಧಿ ವೃತ್ತ ನವೀಕರಣಕ್ಕೆ ಶಂಕುಸ್ಥಾಪನೆ: ಎಂ.ಬಿ. ಪಾಟೀಲ


