ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡುವಂತೆ ಮನವಿ
ಸಪ್ತಸಾಗರ ವಾರ್ತೆ,ವಿಜಯಪುರ, ಆ. 29:
ವಿಕಸಿತ ಭಾರತ ಯುವ ಸಂಪರ್ಕ ಹಾಗೂ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಆಯೋಜಿಸಲಾದ ‘ಖೇಲೋ ಇಂಡಿಯಾ ಸಂವಾದ್–ಖೇಲ್ ಕಿ ಬಾತ್, ಪಿಎಂ ಮೋದಿ ಕೆ ಸಾಥ್’ ಕಾರ್ಯಕ್ರಮದಲ್ಲಿ ವಿಜಯಪುರ ಮೂಲದ ಪ್ರತಿಭಾವಂತ ಯುವತಿ ಶಿಫಾ ಜಮಾದಾರ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳ ಅಭಿವೃದ್ಧಿ ಕುರಿತು ಹಲವು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಭುವನೇಶ್ವರದ ಐಐಟಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದ ಶಿಫಾ ಜಮಾದಾರ ಅವರು, ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಮಂಡಿಸುವ ಮೂಲಕ ವಿಜಯಪುರದ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಹೆಚ್ಚಿಸಿದ್ದಾರೆ.
ಗ್ರಾಮೀಣ ಪ್ರದೇಶಗಳು ಅಪಾರ ಕ್ರೀಡಾ ಪ್ರತಿಭೆಗಳ ಆಗರವಾಗಿದ್ದು, ಬಾಲ್ಯದಲ್ಲಿಯೇ ಇಂತಹ ಪ್ರತಿಭೆಗಳನ್ನು ಗುರುತಿಸಿ ಸೂಕ್ತ ಪ್ರೋತ್ಸಾಹ, ಅವಕಾಶ ಹಾಗೂ ಗುಣಮಟ್ಟದ ತರಬೇತಿ ನೀಡಿದರೆ ಅವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗಲಿದೆ ಎಂದು ಶಿಫಾ ಅಭಿಪ್ರಾಯಪಟ್ಟರು.
“ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಅಗತ್ಯ ಸೌಲಭ್ಯ ಮತ್ತು ಸೂಕ್ತ ಮಾರ್ಗದರ್ಶನ ದೊರೆತರೆ, 2030ರ ವೇಳೆಗೆ ನಮ್ಮ ಹೆಮ್ಮೆಯ ಭಾರತ ವಿಕಸಿತ ಕ್ರೀಡಾ ರಾಷ್ಟ್ರವಾಗಿ ವಿಶ್ವಮಟ್ಟದಲ್ಲಿ ಮಿಂಚಲಿದೆ” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಾಲಾ ಹಂತದಲ್ಲಿಯೇ ಹೆಚ್ಚಿನ ಕ್ರೀಡಾಕೂಟಗಳನ್ನು ಆಯೋಜಿಸಲು ಆದ್ಯತೆ ನೀಡಬೇಕು. ಅದರೊಂದಿಗೆ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನ, ಮೂಲಸೌಕರ್ಯ ಹಾಗೂ ತರಬೇತಿ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಸಲಹೆಗಳನ್ನೂ ಅವರು ಸಂವಾದದಲ್ಲಿ ಹಂಚಿಕೊಂಡರು.
ಈ ಹಿಂದೆ ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ನಡೆದ ವಿಶ್ವ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಶಿಫಾ ಜಮಾದಾರ ಭಾಗವಹಿಸಿದ್ದರು. ಇದೀಗ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ನಡೆದ ಮಹತ್ವದ ಸಂವಾದದಲ್ಲಿ ಭಾಗವಹಿಸುವ ಮೂಲಕ ಮತ್ತೊಂದು ಗಮನಾರ್ಹ ಸಾಧನೆ ಮಾಡಿದ್ದಾರೆ.
ಕಾರ್ಯಕ್ರಮದ ಬಳಿಕ ಒಲಿಂಪಿಕ್ಸ್ ಕ್ರೀಡಾಪಟು ಧ್ಯೂತಿ ಚಾಂದ್, ಕೇಂದ್ರ ಕ್ರೀಡಾ ಸಚಿವಾಲಯದ ಪ್ರಾದೇಶಿಕ ನಿರ್ದೇಶಕ ಅಜೀತ್ ಕುಶವಾಹ್ ಸೇರಿದಂತೆ ಗಣ್ಯರು ಶಿಫಾ ಜಮಾದಾರ ಅವರಿಗೆ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.


