ಸಪ್ತಸಾಗರ ವಾರ್ತೆ,ವಿಜಯಪುರ, ಆ. 30: ಪ್ರಧಾನಿ ನರೇಂದ್ರ ಮೋದಿ ಅವರ ‘ಫಿಟ್ ಇಂಡಿಯಾ’ ಅಭಿಯಾನದ ಆಶಯದಂತೆ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ಭಾನುವಾರ ನಗರದಲ್ಲಿ ವಿಶಿಷ್ಟ ಸೈಕ್ಲಿಂಗ್ ಜಾಥಾ ನಡೆಯಿತು.
ಸೈನಿಕ ಶಾಲೆಯ ಫಸ್ಟ್ ಗೇಟ್ನಿಂದ ಆರಂಭಗೊಂಡ ಜಾಥಾವು ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಅಂಬೇಡ್ಕರ್ ವೃತ್ತ ಹಾಗೂ ಕನಕದಾಸ ವೃತ್ತದ ಮೂಲಕ ಸಾಗಿತು. ಬಳಿಕ ಐತಿಹಾಸಿಕ ಗೋಲಗುಮ್ಮಟ ತಲುಪಿ ಜಾಥಾ ಮುಕ್ತಾಯಗೊಂಡಿತು.
ಜಾಥಾದ ಪ್ರಮುಖ ಆಕರ್ಷಣೆಯಾಗಿದ್ದು, ನಗರದ 17 ಮಕ್ಕಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಸೈಕಲ್ ಸವಾರಿ ಮಾಡಿದ್ದು. ಕಣ್ಣಿಗೆ ಬಟ್ಟೆ ಕಟ್ಟಿಕೊಂಡೇ ಮಕ್ಕಳು ಸೈಕಲ್ ಚಲಾಯಿಸುತ್ತಿರುವುದನ್ನು ಕಂಡ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿ, ಮಕ್ಕಳ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಮಾರ್ಗದುದ್ದಕ್ಕೂ ಈ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು.
ಇದಕ್ಕೂ ಮುನ್ನ ಕರ್ನಾಟಕ ರಾಜ್ಯ ಸೈಕ್ಲಿಂಗ್ ಸಂಸ್ಥೆ ಅಧ್ಯಕ್ಷ ರಾಜು ಬಿರಾದಾರ ಅವರು ಜಾಥಾಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ. ಮಹಾಂತೇಶ ಬಿರಾದಾರ, ಡಿವೈಎಸ್ಪಿ ಬಸವರಾಜ ಯಲಿಗಾರ, ಅಪ್ಪು ಚಿಮ್ಮಲಗಿ, ವೀರೇಶ ಹಳ್ಳಿ ಸೇರಿದಂತೆ ಸೈಕ್ಲಿಂಗ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸೈಕ್ಲಿಂಗ್ ಅಭಿಮಾನಿಗಳು ಉಪಸ್ಥಿತರಿದ್ದರು.
ಕಣ್ಣಿಗೆ ಬಟ್ಟೆ… ಸೈಕಲ್ ಮೇಲೆ ಪೋರರ ಸಾಹಸ!17 ಮಕ್ಕಳ ವಿಶಿಷ್ಟ ಸೈಕ್ಲಿಂಗ್ ಜಾಥಾ; ಬೆರಗಾದ ವಿಜಯಪುರಿಗರು


