ರೈತ ಸಂಘದಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭ
ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 2:
ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬುಧವಾರದಿಂದ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.
ನಗರದ ಗಾಂಧಿ ವೃತ್ತದಿಂದ ಮೆರವಣಿಗೆ ಮೂಲಕ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿ ನಿರ್ಮಿಸಿರುವ ಟೆಂಟ್‌ಗೆ ತೆರಳಿದ ರೈತರು ಅಲ್ಲಿ ಧರಣಿ ಆರಂಭಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿ, ಜಿಲ್ಲೆಯ 13 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ರೈತರ ಪ್ರಮುಖ ಬೇಡಿಕೆಗಳು:
- ಜಿಲ್ಲೆಯ ಎಲ್ಲ 13 ತಾಲೂಕುಗಳನ್ನು ಬರಗಾಲ ಪ್ರದೇಶವೆಂದು ಘೋಷಿಸಬೇಕು.
- ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು.
- ಬೆಳೆ ವಿಮೆ ಪಾವತಿಸಿರುವ ರೈತರಿಗೆ ಶೇ.50ರಷ್ಟು ಮಧ್ಯಂತರ ವಿಮಾ ಪರಿಹಾರವನ್ನು ಕೂಡಲೇ ಬಿಡುಗಡೆ ಮಾಡಬೇಕು.
- ಜಿಲ್ಲೆಯ ಎಲ್ಲ ಹಳ್ಳ, ಕೊಳ್ಳ, ಕೆರೆ ಹಾಗೂ ಕಾಲುವೆಗಳನ್ನು ತುಂಬಿಸಬೇಕು.
- ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವಿನ ವ್ಯವಸ್ಥೆ ಮಾಡಬೇಕು.
- ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಉದ್ಯೋಗ ಕಲ್ಪಿಸಬೇಕು.
ಈ ಎಲ್ಲ ಬೇಡಿಕೆಗಳನ್ನು ಈಡೇರಿಸುವವರೆಗೆ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ಮುಂದುವರಿಸಲಾಗುವುದು ಎಂದು ರೈತ ಸಂಘದ ಮುಖಂಡರು ಎಚ್ಚರಿಸಿದರು.
ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಈ ವಿಚಾರವನ್ನು ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಕೂಡಲೇ ವಿಜಯಪುರ ಜಿಲ್ಲೆಯನ್ನು ಬರಗಾಲ ಪೀಡಿತ ಜಿಲ್ಲೆಯೆಂದು ಘೋಷಿಸಬೇಕು. ಇಲ್ಲವಾದಲ್ಲಿ ಜಿಲ್ಲೆಯ ಎಲ್ಲ ಎಂಟು ಶಾಸಕರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿ ರೈತರೊಂದಿಗೆ ಹೋರಾಟಕ್ಕೆ ಧುಮುಕಬೇಕು ಎಂದು ಆಗ್ರಹಿಸಿದರು.
ಧರಣಿಯಲ್ಲಿ ನಾದ ಕೆ.ಡಿ. ಗ್ರಾಮದ ಮಠಾಧೀಶ ಶಿವಾನಂದ ಹಿರೇಮಠ, ರಾಜ್ಯ ಉಪಾಧ್ಯಕ್ಷ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ಮುಖಂಡರಾದ ಬಸನಗೌಡ ಪಾಟೀಲ ಯಾಡ್ಯಾಪೂರ, ರಾಮನಗೌಡ ಪಾಟೀಲ, ಶ್ರೀಶೈಲ ಮುಳಜಿ, ಅನಮೇಶ ಜಮಖಂಡಿ, ಸುರೇಶ ಕಿರೆಸೂರ, ಮಾಳು ಪೂಜಾರಿ, ಸಂಗಪ್ಪ ಟಕ್ಕೆ, ಈರಪ್ಪ ಕುಳೆಕುಮಟಗಿ, ಶ್ರೀಶೈಲ ವಾಲಿಕಾರ, ಎಸ್.ಟಿ. ಪಾಟೀಲ, ಶಾನೂರ್ ನಂದರಗಿ, ಸಂಗೀತಾ ರಾಠೋಡ, ಜಗದೇವಿ ಬಿರಾದಾರ, ಲಕ್ಷ್ಮೀ ಬಿರಾದಾರ, ಪ್ರಶಾಂತ ಭೂಸಾನೂರ, ಚೆನ್ನಮ್ಮ ಮೈತ್ರಿ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.


