ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 2: ಕೇಂದ್ರ ಸರ್ಕಾರದ ಖೇಲೋ ಇಂಡಿಯಾ, ಫಿಟ್ ಇಂಡಿಯಾ ಹಾಗೂ ಡ್ರಗ್ಸ್ ಮುಕ್ತ ಭಾರತ ಅಭಿಯಾನಗಳ ಆಶಯದೊಂದಿಗೆ ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ, ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್, ವಿಜಯಪುರ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಷನ್, ಜಿಲ್ಲಾಡಳಿತ ಹಾಗೂ ವಿಸಿಜಿ ಗ್ರೂಪ್ ಸಹಯೋಗದಲ್ಲಿ ಅಸ್ಮೀತಾ ವುಮೆನ್ಸ್ ರೋಡ್ ಸೈಕ್ಲಿಂಗ್ ಚಾಂಪಿಯನ್ಶಿಪ್ ಸೆ. 5 ಮತ್ತು 6ರಂದು ವಿಜಯಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ (ಸೊಲ್ಲಾಪುರ ರಸ್ತೆ ಎಡಬದಿ)ಯಲ್ಲಿ ನಡೆಯಲಿದೆ.
ಪ್ರತಿದಿನ ಬೆಳಿಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಸ್ಪರ್ಧೆಗಳು ನಡೆಯಲಿದ್ದು, ಕ್ರೀಡಾಕೂಟಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ರಾಜು ಬಿರಾದಾರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಪರ್ಧೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಕ್ರೀಡಾಪಟುಗಳ ಸುರಕ್ಷತೆಗಾಗಿ ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದರು.
ವಿವಿಧ ವಿಭಾಗಗಳಲ್ಲಿ ಸ್ಪರ್ಧೆ
17 ವರ್ಷದೊಳಗಿನ ಬಾಲಕಿಯರಿಗೆ 10 ಕಿ.ಮೀ. ಟೈಮ್ ಟ್ರಯಲ್ ಹಾಗೂ 25 ಕಿ.ಮೀ. ಮಾಸ್ಟ್ ಸ್ಟಾರ್ಟ್ ಸ್ಪರ್ಧೆಗಳು ನಡೆಯಲಿವೆ. ಮಹಿಳೆಯರ ವಿಭಾಗದಲ್ಲಿ 20 ಕಿ.ಮೀ. ಟೈಮ್ ಟ್ರಯಲ್ ಮತ್ತು 45 ಕಿ.ಮೀ. ಮಾಸ್ಟ್ ಸ್ಟಾರ್ಟ್ ಸ್ಪರ್ಧೆ ಆಯೋಜಿಸಲಾಗಿದೆ.
ಸ್ಪರ್ಧೆಯಲ್ಲಿ ಆಯ್ಕೆಯಾಗುವ ಪ್ರತಿ ವಯೋಮಿತಿಯ ತಲಾ ಆರು ಸೈಕ್ಲಿಸ್ಟ್ಗಳನ್ನು ಸೌತ್ ಝೋನ್ ಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು ಎಂದು ರಾಜು ಬಿರಾದಾರ ತಿಳಿಸಿದರು.
ಸೆ. 11, 12ರಂದು ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್
ವಿಜಯಪುರದಲ್ಲಿ ಇದೇ ಮೊದಲ ಬಾರಿಗೆ ರಾಜ್ಯ ಮಟ್ಟದ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ ಸೆ. 11 ಮತ್ತು 12ರಂದು ನಗರದ ಹೊರವಲಯದಲ್ಲಿರುವ ನೂತನ ವೆಲೋಡ್ರೋಮ್ನಲ್ಲಿ ನಡೆಯಲಿದೆ.
14, 16, 18 ವರ್ಷದೊಳಗಿನ ಬಾಲಕ–ಬಾಲಕಿಯರು ಹಾಗೂ ಪುರುಷರು ಮತ್ತು ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ವೈಯಕ್ತಿಕ ಟೈಮ್ ಟ್ರಯಲ್, ಇಂಡಿವಿಜುವಲ್ ಪರ್ಸ್ಯೂಟ್ ಹಾಗೂ ಮಾಸ್ಟ್ ಸ್ಟಾರ್ಟ್ ಸ್ಪರ್ಧೆಗಳು ಇರಲಿವೆ. ಇಲ್ಲಿಂದ ಆಯ್ಕೆಯಾಗುವ ಕ್ರೀಡಾಪಟುಗಳನ್ನು ಮುಂದಿನ ದಿನಗಳಲ್ಲಿ ರಾಂಚಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಟ್ರ್ಯಾಕ್ ಸೈಕ್ಲಿಂಗ್ ಚಾಂಪಿಯನ್ಶಿಪ್ಗೆ ಕರ್ನಾಟಕ ತಂಡದ ಆಯ್ಕೆಗಾಗಿ ಪರಿಗಣಿಸಲಾಗುವುದು ಎಂದರು.
₹6–7 ಲಕ್ಷ ವೆಚ್ಚದ ನಿರೀಕ್ಷೆ
ಚಾಂಪಿಯನ್ಶಿಪ್ ಆಯೋಜನೆಗೆ ಅಂದಾಜು ₹6ರಿಂದ ₹7 ಲಕ್ಷ ವೆಚ್ಚವಾಗುವ ಸಾಧ್ಯತೆಯಿದ್ದು, ನಗರದ ದಾನಿಗಳು ಹಾಗೂ ಕ್ರೀಡಾಪ್ರೇಮಿಗಳ ನೆರವು ಪಡೆಯಲಾಗುವುದು. ಜಿಲ್ಲೆಯ ಜನಪ್ರತಿನಿಧಿಗಳು, ದಾನಿಗಳು ಹಾಗೂ ಕ್ರೀಡಾಪ್ರೇಮಿಗಳು ಕ್ರೀಡಾಕೂಟಕ್ಕೆ ಸಹಕಾರ ನೀಡುವಂತೆ ರಾಜು ಬಿರಾದಾರ ಮನವಿ ಮಾಡಿದರು.
ಗಣ್ಯರಿಂದ ಚಾಲನೆ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್ನ ತವರೂರು ಎಂಬ ಖ್ಯಾತಿ ಹೊಂದಿರುವ ವಿಜಯಪುರದಲ್ಲಿ ನಡೆಯುವ ಸೈಕ್ಲಿಂಗ್ ಕ್ರೀಡಾಕೂಟಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಹಾಗೂ ಸಂಸದ ರಮೇಶ ಜಿಗಜಿಣಗಿ ಅವರು ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ.
ಮಾಜಿ ಸಚಿವ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ, ಜಿಲ್ಲಾಧಿಕಾರಿ ಡಾ. ಆನಂದ ಕೆ. ಸೇರಿದಂತೆ ಗಣ್ಯರು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಸೆ. 6ರಂದು ಸಮಾರೋಪ
ಸೆ. 6ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸೈನಿಕ ಶಾಲೆಯ ಪ್ರಾಚಾರ್ಯೆ ಪ್ರತಿಭಾ ಬಿಸ್ಟ್, ಉಪಮೇಯರ್ ಸುನಿತಾ ಜಾಧವ, ಅಂತಾರಾಷ್ಟ್ರೀಯ ಸೈಕ್ಲಿಂಗ್ ಪಟು ಹಾಗೂ ಬಾಗಲಕೋಟೆ ಶಹರ ಪೊಲೀಸ್ ಠಾಣೆಯ ಪಿಎಸ್ಐ ಗಂಗೂ ಬಿರಾದಾರ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ.
ಸೈಕ್ಲಿಂಗ್ ಕ್ಷೇತ್ರಕ್ಕೆ ವಿಭಿನ್ನ ಕೊಡುಗೆ ನೀಡಿರುವ ಅವಿಭಜಿತ ವಿಜಯಪುರ ಜಿಲ್ಲೆಯ ಸೈಕ್ಲಿಸ್ಟ್ಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ರಾಜು ಬಿರಾದಾರ ತಿಳಿಸಿದರು.
ಸೈಕಲ್ಗಳಿಗಾಗಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ
ಜಿಲ್ಲೆಯ ಸೈಕ್ಲಿಸ್ಟ್ಗಳ ಹಿತದೃಷ್ಟಿಯಿಂದ ಐದು ಸೈಕಲ್ಗಳನ್ನು ಒದಗಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಕ್ರೀಡಾಪಟುಗಳ ಬಳಕೆಗೆ ಐದು ಸೈಕಲ್ಗಳನ್ನು ನೀಡುವ ಕುರಿತು ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ಸಂತಸ ತಂದಿದೆ ಎಂದು ರಾಜು ಬಿರಾದಾರ ಹೇಳಿದರು.
ಪೋಷಕರಾದ ಪ್ರದೀಪ ರಾಠೋಡ, ರಾಜಾಸಾಬ್ ಅತ್ತಾರ, ಜಿ.ಎಂ. ಪತ್ತಾರ, ನಾಗರಾಜ್ ಬಿರಾದಾರ, ಶಿವನಗೌಡ ಪಾಟೀಲ, ಸಂಜೀವ ಪಡತರೆ, ಸಂತೋಷ ಕತನಕನಳ್ಳಿ, ಶ್ರೀಕಾಂತ ಮಠ, ಲಕ್ಷ್ಮಣ ತೇರದಾಳ, ನಿಜಪ್ಪ ಎಂಟೆತ್ತು, ಲಕ್ಕಪ್ಪ ಕುರಣಿ ಮತ್ತಿತರರು ಉಪಸ್ಥಿತರಿದ್ದರು.


