ರಂಗಭೂಮಿ ಉಳಿದರೆ ನಾಟಕ ಪರಂಪರೆ ಉಳಿಯುತ್ತದೆ

ಜಿಲ್ಲೆಗೊಂದರಂತೆ ನಾಟಕೋತ್ಸವ; ಕಲಾವಿದರಿಗೆ ವೇದಿಕೆ ಕಲ್ಪಿಸುವ ಅಕಾಡೆಮಿ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 11:
ನಾಟಕ ಕೇವಲ ಮನರಂಜನೆಯಲ್ಲ; ಅದು ಸಮಾಜದ ವಾಸ್ತವತೆಯನ್ನು ಪ್ರತಿಬಿಂಬಿಸುವ ಹಾಗೂ ಪರಿವರ್ತನೆಯ ಸಂದೇಶವನ್ನು ಜನರಿಗೆ ತಲುಪಿಸುವ ಶಕ್ತಿಶಾಲಿ ಮಾಧ್ಯಮವಾಗಿದೆ. ನಾಟಕ ಪರಂಪರೆಯನ್ನು ಉಳಿಸಿ ಬೆಳೆಸುವುದರ ಜೊತೆಗೆ ರಂಗಭೂಮಿ ಕಲಾವಿದರಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಡಾ. ಕೆ.ವಿ. ನಾಗರಾಜಮೂರ್ತಿ ಹೇಳಿದರು.
ನಗರದಲ್ಲಿ ಗುರುವಾರ ಸಂಜೆ ಆರಂಭವಾದ ಜಿಲ್ಲಾ ವೃತ್ತಿ ನಾಟಕೋತ್ಸವದ ಮೊದಲ ದಿನದ ‘ಗ್ರಾಮ ಪಂಚಾಯತ ಗಂಗವ್ವ’ ನಾಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದ ಶ್ರೀಮಂತ ನಾಟಕ ಪರಂಪರೆ ಮುಂದಿನ ಪೀಳಿಗೆಗೂ ಜೀವಂತವಾಗಿ ತಲುಪಬೇಕು. ರಂಗಭೂಮಿ ಕಲಾವಿದರಿಗೆ ನಿರಂತರ ಅವಕಾಶ ಹಾಗೂ ಪ್ರೋತ್ಸಾಹ ದೊರೆತಾಗ ಮಾತ್ರ ನಾಟಕ ಕ್ಷೇತ್ರ ಮತ್ತಷ್ಟು ಬೆಳೆಯಲು ಸಾಧ್ಯ. ಈ ಉದ್ದೇಶದಿಂದ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ನಾಟಕೋತ್ಸವಗಳನ್ನು ಆಯೋಜಿಸುತ್ತಿದೆ ಎಂದರು.
ನಾಟಕಗಳು ಸಮಾಜದಲ್ಲಿನ ವಾಸ್ತವಿಕ ಸಮಸ್ಯೆಗಳು, ಜನರ ಬದುಕು ಹಾಗೂ ಸಾಮಾಜಿಕ ಬದಲಾವಣೆಯ ಅಗತ್ಯವನ್ನು ಪರಿಣಾಮಕಾರಿಯಾಗಿ ಬಿಂಬಿಸುತ್ತವೆ. ಪ್ರೇಕ್ಷಕರನ್ನು ಚಿಂತನೆಗೆ ಹಚ್ಚುವ ಮತ್ತು ಸಮಾಜಕ್ಕೆ ಉತ್ತಮ ಸಂದೇಶ ನೀಡುವ ನಾಟಕಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಹೇಳಿದರು.

ಗುಣಮಟ್ಟದ ಪ್ರದರ್ಶನಕ್ಕೆ ಒತ್ತು

ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷ ಎಲ್.ಬಿ. ಶೇಖ ಮಾಸ್ತರ ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿಯಲ್ಲಿ ಗುಣಮಟ್ಟವೇ ಪ್ರಮುಖ ಮಾನದಂಡವಾಗಬೇಕು. ಕಲಾವಿದರು ಉತ್ತಮ ತರಬೇತಿ ಪಡೆದು, ನಿರಂತರ ತಾಲೀಮು ನಡೆಸಿ, ಪ್ರೇಕ್ಷಕರ ಮನಮುಟ್ಟುವ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಂಡು ನಾಟಕಗಳನ್ನು ಪ್ರದರ್ಶಿಸಬೇಕು ಎಂದರು.
ನಾಟಕ ಅಕಾಡೆಮಿ ಉತ್ತಮ ನಾಟಕಗಳು ಹಾಗೂ ಕಲಾವಿದರನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತ ಬಂದಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳನ್ನು ವೀಕ್ಷಿಸಿ ರಂಗಭೂಮಿಯ ಬೆಳವಣಿಗೆಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಮಾಜ ಪರಿವರ್ತನೆಯ ಪ್ರಬಲ ಮಾಧ್ಯಮ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ನಾಟಕಗಳು ಸಮಾಜದ ಕನ್ನಡಿಯಿದ್ದಂತೆ. ಸಮಾಜದಲ್ಲಿನ ಆಗುಹೋಗುಗಳನ್ನು ಜನರ ಮುಂದಿಡುವ ಮೂಲಕ ಪರಿವರ್ತನೆಗೆ ಪ್ರೇರಣೆ ನೀಡುವ ಶಕ್ತಿ ರಂಗಭೂಮಿಗಿದೆ ಎಂದರು.
ನಾಟಕ ಸಂಸ್ಕೃತಿ ಜನರಲ್ಲಿ ಮಾನವೀಯ ಮೌಲ್ಯ, ಸಾಮಾಜಿಕ ಜವಾಬ್ದಾರಿ ಹಾಗೂ ಸಂವೇದನೆಯನ್ನು ಬೆಳೆಸುತ್ತದೆ. ನಾಟಕ ಕ್ಷೇತ್ರದ ಬೆಳವಣಿಗೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರಂತರವಾಗಿ ಸಹಕಾರ ಮತ್ತು ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲೀಕಾರ, ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ, ಹಿರಿಯ ಕಲಾವಿದ ಶ್ರೀಧರ ಹೆಗಡೆ, ಕಸಾಪ ಗೌರವ ಅಧ್ಯಕ್ಷೆ ಜಯಶ್ರೀ ಹಿರೇಮಠ, ಅಲ್ಲಮಪ್ರಭು ಮಲ್ಲಿಕಾರ್ಜುನಮಠ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ ಉಪಸ್ಥಿತರಿದ್ದರು.
ಶಶಿಕಲಾ ನಾಯ್ಕೋಡಿ ಪ್ರಾರ್ಥಿಸಿದರು. ರಿಯಾಜ್ ಪಿಂಜಾರ ಸ್ವಾಗತಿಸಿದರು. ಯಮನಪ್ಪ ಪವಾರ ನಿರೂಪಿಸಿದರು. ಮೆಹತಾಬ್ ಕಾಗವಾಡ ವಂದಿಸಿದರು.

Share this