ಸಪ್ತಸಾಗರ ವಾರ್ತೆ,ವಿಜಯಪುರ, ಸೆ.14 :
ಗಣೇಶೋತ್ಸವದ ಹಿನ್ನೆಲೆಯಲ್ಲಿ ನಗರದಲ್ಲಿ ಸಾರ್ವಜನಿಕವಾಗಿ ಹಾಗೂ ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ಸುಗಮ, ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ನಡೆಯುವಂತೆ ವಿಜಯಪುರ ಮಹಾನಗರ ಪಾಲಿಕೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದೆ.
ಸಾರ್ವಜನಿಕರ ಸುರಕ್ಷತೆ, ನೈರ್ಮಲ್ಯ ಮತ್ತು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿರುವ ಪಾಲಿಕೆ, ನಗರದ ವಿವಿಧೆಡೆ ಕೃತಕ ವಿಸರ್ಜನಾ ಹೊಂಡಗಳು, ಮೊಬೈಲ್ ಟ್ಯಾಂಕ್ಗಳು ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯುವ ಹಿನ್ನೆಲೆಯಲ್ಲಿ ಜೈಲ ದರ್ಗಾ ಸಮೀಪ 100×40 ಅಡಿ ಹಾಗೂ ಕೆಎಸ್ಆರ್ಟಿಸಿ ಸ್ಯಾಟ್ಲೈಟ್ ಬಸ್ ನಿಲ್ದಾಣದ ಬಳಿ 40×40 ಅಡಿ ಅಳತೆಯ ವಿಶಾಲ ಕೃತಕ ಹೊಂಡಗಳನ್ನು ನಿರ್ಮಿಸಲಾಗಿದೆ. ಸುಮಾರು ಎರಡು ಅಡಿ ಎತ್ತರದ ಗಣೇಶ ಮೂರ್ತಿಗಳ ವಿಸರ್ಜನೆಗೆ ತಾಜಬಾವಡಿ ಆವರಣದಲ್ಲಿರುವ ಖಾಯಂ ಪುಷ್ಕರಣಿಯನ್ನು ಕಾಯ್ದಿರಿಸಲಾಗಿದೆ.
ಇದಲ್ಲದೆ ಶ್ರೀನಗರ ಪಾರ್ಕ್, ಕೆ.ಸಿ. ನಗರ, ಐಟಿಐ ಕಾಲೇಜು ಹಿಂಭಾಗ, ಕಲ್ಯಾಣ ನಗರ, ಪಾರೇಕ ನಗರ, ಸ್ವಾಮಿ ವಿವೇಕಾನಂದ ಗಾರ್ಡನ್, ಗಣೇಶ ನಗರ, ಜಲನಗರ ಪಾಲಿಕೆ ಕಚೇರಿ, ರಾಮನಗರ ಬಸ್ ನಿಲ್ದಾಣದ ಹಿಂಭಾಗ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆವರಣ, ಅಯ್ಯಪ್ಪ ಸ್ವಾಮಿ ಗುಡಿ ಹಾಗೂ ಶಿವನಗರ ಗಾರ್ಡನ್ ಸೇರಿದಂತೆ ನಗರದ ವಿವಿಧೆಡೆ ಕೃತಕ ವಿಸರ್ಜನಾ ಹೊಂಡಗಳನ್ನು ನಿರ್ಮಿಸಲಾಗಿದೆ.
ಮನೆ ಗಣಪತಿಗೆ ಮೊಬೈಲ್ ಟ್ಯಾಂಕ್
ಮನೆಗಳಲ್ಲಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ನಾಗರಿಕರಿಗೆ ಅನುಕೂಲವಾಗುವಂತೆ ಪಾಲಿಕೆಯಿಂದ ಸಂಚಾರಿ ಮೊಬೈಲ್ ಟ್ಯಾಂಕ್ಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಸಾರ್ವಜನಿಕರು ದೂರದ ವಿಸರ್ಜನಾ ಕೇಂದ್ರಗಳಿಗೆ ತೆರಳುವ ಅಗತ್ಯ ಕಡಿಮೆಯಾಗಲಿದೆ.
ವಿಸರ್ಜನಾ ಕೇಂದ್ರಗಳಲ್ಲಿ ರಾತ್ರಿ ವೇಳೆಯಲ್ಲಿಯೂ ವಿಸರ್ಜನೆಗೆ ಅನುಕೂಲವಾಗುವಂತೆ ವಿದ್ಯುತ್ ಹಾಗೂ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಬ್ಯಾರಿಕೇಡ್ಗಳನ್ನು ಅಳವಡಿಸಿ, ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಮಾರ್ಗಗಳನ್ನು ರೂಪಿಸಲಾಗಿದೆ.
ಸ್ವಚ್ಛತೆಗೆ ಹೆಚ್ಚುವರಿ ಸಿಬ್ಬಂದಿ
ವಿಸರ್ಜನಾ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡಲು ಹೆಚ್ಚುವರಿ ಪೌರಕಾರ್ಮಿಕರ ತಂಡಗಳನ್ನು ನಿಯೋಜಿಸಲಾಗಿದ್ದು, ವಿಸರ್ಜನೆಯ ಸಂದರ್ಭದಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ನೈಸರ್ಗಿಕ ಜಲಮೂಲಗಳಲ್ಲಿ ಗಣೇಶ ಮೂರ್ತಿಗಳನ್ನು ವಿಸರ್ಜಿಸುವುದರಿಂದ ಉಂಟಾಗಬಹುದಾದ ಪರಿಸರ ಮಾಲಿನ್ಯ ತಡೆಗಟ್ಟಲು, ಸಾರ್ವಜನಿಕರು ಪಾಲಿಕೆ ನಿರ್ಮಿಸಿರುವ ಕೃತಕ ಹೊಂಡಗಳು ಹಾಗೂ ನಿಗದಿತ ವಿಸರ್ಜನಾ ಸ್ಥಳಗಳನ್ನೇ ಬಳಸುವಂತೆ ಮನವಿ ಮಾಡಲಾಗಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ್ನಿಂದ ತಯಾರಿಸಿದ ಮೂರ್ತಿಗಳು, ಪ್ಲಾಸ್ಟಿಕ್ ಅಲಂಕಾರಿಕ ಸಾಮಗ್ರಿಗಳು ಹಾಗೂ ಪರಿಸರಕ್ಕೆ ಹಾನಿಕಾರಕ ವಸ್ತುಗಳನ್ನು ಜಲಮೂಲಗಳಿಗೆ ಹಾಕದಂತೆ ಪಾಲಿಕೆ ಸೂಚಿಸಿದೆ. ಹೂವು, ಹಾರ ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಗಣೇಶ ಮೂರ್ತಿಗಳ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಾಗದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಗರಿಕರು ಪಾಲಿಕೆ ಕಲ್ಪಿಸಿರುವ ಸೌಲಭ್ಯಗಳನ್ನು ಬಳಸಿಕೊಂಡು ಶಾಂತಿ, ಸುವ್ಯವಸ್ಥೆ, ಸ್ವಚ್ಛತೆ ಹಾಗೂ ಪರಿಸರ ಸ್ನೇಹಿ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ಸಹಕರಿಸಬೇಕು ಎಂದು ಮಹಾನಗರ ಪಾಲಿಕೆಯ ಮೇಯರ್ ಎಂ.ಎಸ್. ಕರಡಿ ಮನವಿ ಮಾಡಿದ್ದಾರೆ.


