ಸಪ್ತಸಾಗರ ವಾರ್ತೆ,ಬೆಂಗಳೂರು, ಸೆ. 15:
ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿರುವ ಸಿನಿರಸಿಕರಿಗೆ ಬಹುನಿರೀಕ್ಷಿತ ಕನ್ನಡ ಚಲನಚಿತ್ರ ‘ವಕ್ರತುಂಡ’ ಚಿತ್ರತಂಡ ಭರ್ಜರಿ ಉಡುಗೊರೆ ನೀಡಿದೆ. ಚಿತ್ರದ ಹೈ-ಎನರ್ಜಿ ಹಾಗೂ ಭಕ್ತಿಭಾವದ ವಿಡಿಯೋ ಟೈಟಲ್ ಟ್ರ್ಯಾಕ್ ‘ಜೈ ಗಣೇಶ’ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಲೋಚನ್ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಮೂಡಿಬಂದಿರುವ ಈ ಹಾಡಿಗೆ ಪ್ರತಿಭಾವಂತ ಸಂಗೀತ ನಿರ್ದೇಶಕ ಜೇಮ್ಸ್ ಆರ್ಕಿಟೆಕ್ಟ್ ಮಾಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಬ್ಬದ ಜೋಶ್ ಹೆಚ್ಚಿಸುವ ಸಾಹಿತ್ಯವನ್ನು ರಾಘವ ರಂಜನ್ ರಚಿಸಿದ್ದು, ಖ್ಯಾತ ಗಾಯಕ ಶಶಾಂಕ್ ಶೇಷಗಿರಿ ಹಾಡಿಗೆ ಧ್ವನಿ ನೀಡಿದ್ದಾರೆ.
ಮಾಸ್ಟರ್ ಕೊರಿಯೋಗ್ರಾಫರ್ ಕಂಬಿ ರಾಜು ಅವರ ನೃತ್ಯ ನಿರ್ದೇಶನದಲ್ಲಿ ಮೂಡಿಬಂದಿರುವ ಹಾಡಿಗೆ ಜೈ ಆನಂದ್ ಛಾಯಾಗ್ರಹಣ ಮಾಡಿದ್ದಾರೆ. ಎಡಿಟರ್ ರವಿ ತೇಜ ಸಂಕಲನದ ಮೂಲಕ ಹಾಡಿನ ವೇಗ ಹಾಗೂ ಮೆರುಗನ್ನು ಹೆಚ್ಚಿಸಿದ್ದಾರೆ. ನಿರ್ದೇಶಕ ಹರೀಶ್ ಕುಂದೂರು ಅವರ ಆ್ಯಕ್ಷನ್ ಕಟ್ನಲ್ಲಿ ಮೂಡಿಬಂದಿರುವ ಈ ಚಿತ್ರಕ್ಕೆ ವಿಭಿನ್ನ ತಾಂತ್ರಿಕ ತಂಡ ಸಾಥ್ ನೀಡಿದೆ.
‘ಜೈ ಗಣೇಶ’ ಹಾಡಿನ ಕಥಾ ಮತ್ತು ದೃಶ್ಯ ಪರಿಕಲ್ಪನೆಗೆ ಲಕ್ಕಿ ಶಂಕರ್ (ಶಂಕರ್ ಎಸ್) ಅವರ ಕೊಡುಗೆ ಇದ್ದು, ಉಮೇಶ್ ಬಿ.ಹೆಚ್. ದಾವಣಗೆರೆ ಸಹ-ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ನಾಗೇಂದ್ರ, ಡಾ. ಪ್ರಭು ಗಂಜಿಹಾಳ್ ಹಾಗೂ ಡಾ. ವೀರೇಶ್ ಹಂಡಗಿ ಪಿ.ಆರ್.ಒ.ಗಳಾಗಿ ಚಿತ್ರತಂಡದೊಂದಿಗೆ ಕೈಜೋಡಿಸಿದ್ದಾರೆ.
ಚಿತ್ರದಲ್ಲಿ ಮಹಾಲಕ್ಷ್ಮಿ, ಲಕ್ಕಿ ಶಂಕರ್, ಉಮೇಶ್ ಬಿ.ಹೆಚ್. ದಾವಣಗೆರೆ, ಮೂಗು ಸುರೇಶ್, ಸಂಗಮೇಶ್ ಕಾಸ್, ಅಮಿತ್ ರಾವ್, ಆಟೋ ನಾಗರಾಜ್, ಭುವನ ಹರೀಶ್ ಹಾಗೂ ಮೋಹನಕೃಷ್ಣ ಸೇರಿದಂತೆ ಹಲವು ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸದ್ಯ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರಲು ಸಜ್ಜಾಗುತ್ತಿರುವ ‘ವಕ್ರತುಂಡ’ ಚಿತ್ರದ ‘ಜೈ ಗಣೇಶ’ ವಿಡಿಯೋ ಹಾಡು A2 Music ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರತಿಕ್ರಿಯೆ ಪಡೆಯುತ್ತಿದೆ. ಗಣೇಶೋತ್ಸವದ ಸಂಭ್ರಮಕ್ಕೆ ಮತ್ತಷ್ಟು ಕಳೆ ತುಂಬಿರುವ ಈ ಹಾಡು ಚಿತ್ರಪ್ರೇಮಿಗಳ ಗಮನ ಸೆಳೆಯುತ್ತಿದೆ.
‘ವಕ್ರತುಂಡ’ ಚಿತ್ರದ ಧಮಾಕಾ: ‘ಜೈ ಗಣೇಶ’ ಟೈಟಲ್ ಟ್ರ್ಯಾಕ್ಗೆ ಭರ್ಜರಿ ಸದ್ದು


