‘ಸಿದ್ದರಾಮಯ್ಯ ಬಾಯಿಂದ ಸತ್ಯ ಹೇಳಿಸಲಿ; ಇಲ್ಲವಾದರೆ ನನ್ನ ಆರೋಪ ವಾಪಸ್ ಪಡೆಯುವುದಿಲ್ಲ’

ಎಂ.ಬಿ. ಪಾಟೀಲ ವಿರುದ್ಧ ಯತ್ನಾಳ ಮತ್ತೆ ಗುಡುಗು; ‘ದ್ರೋಹದ ಭಯಕ್ಕೆ ಸಿದ್ದರಾಮಯ್ಯ ಮನೆಗೆ ಹೋಗಿ ಟ್ರೀಟ್ಮೆಂಟ್ ಪಡೆಯಿರಿ’ ಎಂದು ಟಾಂಗ್

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 15:
ಮುಖ್ಯಮಂತ್ರಿ ಇದ್ದಾಗ ಸಿದ್ದರಾಮಯ್ಯ ಅವರಿಗೆ ಅವರದೇ ಆತ್ಮೀಯರಾದ ಸಚಿವರಾದ ಜಮೀರ್ ಅಹ್ಮದ್ ಖಾನ್, ಸತೀಶ ಜಾರಕಿಹೊಳಿ ಹಾಗೂ ಎಂ.ಬಿ. ಪಾಟೀಲ ಸಾಥ್ ನೀಡಿಲ್ಲ ಎಂಬ ತಮ್ಮ ಆರೋಪಕ್ಕೆ ಬದ್ಧವಾಗಿರುವುದಾಗಿ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಘೋಷಿಸಿದ್ದಾರೆ.
ಮಂಗಳವಾರ ವಿಜಯಪುರದಲ್ಲಿ ಸಚಿವ ಎಂ.ಬಿ. ಪಾಟೀಲ ವಿರುದ್ಧ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿದ ಯತ್ನಾಳ, “ನಾನು ಹೇಳಿದ್ದು ಸತ್ಯವೋ, ಸುಳ್ಳೋ ಎಂಬುದನ್ನು ಸಿದ್ದರಾಮಯ್ಯ ಅವರೇ ಹೇಳಬೇಕು. ಎಂ.ಬಿ. ಪಾಟೀಲ, ಜಮೀರ್ ಅಹ್ಮದ್ ಹಾಗೂ ಸತೀಶ ಜಾರಕಿಹೊಳಿ ಅವರು ನನಗೆ ದ್ರೋಹ ಮಾಡಿಲ್ಲ ಎಂದು ಸಿದ್ದರಾಮಯ್ಯ ಅವರೇ ಪತ್ರಿಕಾಗೋಷ್ಠಿ ಕರೆದು ಹೇಳಲಿ. ಅವರು ಹಾಗೆ ಹೇಳಿದರೆ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ” ಎಂದು ಸವಾಲು ಹಾಕಿದರು.
“ಸಿದ್ದರಾಮಯ್ಯ ಅವರಿಗೆ ದ್ರೋಹ ಮಾಡಿಲ್ಲ ಎಂದು ಹೇಳಿದರೆ ಎಲ್ಲವೂ ಮುಗಿಯುತ್ತದೆ. ಆದರೆ ಆತ್ಮಸಾಕ್ಷಿಗೂ ದ್ರೋಹ ಮಾಡಿಲ್ಲ ಎನ್ನುವುದಾದರೆ ಅದನ್ನೂ ಸ್ಪಷ್ಟವಾಗಿ ಹೇಳಲಿ. ತಮ್ಮ ಬೆನ್ನಿಗೆ ಯಾರೂ ಚೂರಿ ಹಾಕಿಲ್ಲ ಎಂದು ಸಿದ್ದರಾಮಯ್ಯ ಅವರೇ ಬಹಿರಂಗವಾಗಿ ಹೇಳಲಿ” ಎಂದು ಆಗ್ರಹಿಸಿದರು.

‘ಮೋದಿ ವಿರುದ್ಧ ಗುಡುಗುತ್ತಿದ್ದ ಸಿದ್ದರಾಮಯ್ಯ ಈಗ ಏಕೆ ಮೌನ?’

“ಒಂದು ಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದ ಸಿದ್ದರಾಮಯ್ಯ ಅವರು ಇಂದು ಏಕೆ ಮೌನವಾಗಿದ್ದಾರೆ? ಅವರದ್ದು ಏನೋ ಇದೆ. ತಮ್ಮ ಬೆನ್ನಿಗೆ ಇಂಥವರು ಚೂರಿ ಹಾಕಿದ್ದಾರೆ ಎಂದು ಅವರೇ ಹೇಳಲಿ” ಎಂದು ಯತ್ನಾಳ ಕುಟುಕಿದರು.

‘ಎಂ.ಬಿ. ಪಾಟೀಲ ಟೆನ್ಷನ್ ಮಾಡಿಕೊಳ್ಳುವುದು ಬೇಡ’

“ನನ್ನ ಹೇಳಿಕೆಗೆ ಎಂ.ಬಿ. ಪಾಟೀಲ ಅವರು ಟೆನ್ಷನ್ ಮಾಡಿಕೊಳ್ಳುವ ಅಗತ್ಯವಿಲ್ಲ. ಸಿದ್ದರಾಮಯ್ಯ ಅವರ ಬಾಯಿಂದ ನೀವು ದ್ರೋಹ ಮಾಡಿಲ್ಲ ಎಂಬ ಒಂದೇ ಒಂದು ಮಾತನ್ನು ಹೇಳಿಸಿ ಬಿಡಿ” ಎಂದು ವ್ಯಂಗ್ಯವಾಡಿದರು.
“ನಾಳೆ ಸಿದ್ದರಾಮಯ್ಯ ಅವರಿಗೆ ಮಾಡಿದ ದ್ರೋಹದ ವಿಚಾರಗಳು ಸ್ಫೋಟವಾದರೆ ತಮ್ಮ ಕ್ಷೇತ್ರದಲ್ಲಿ ಏನಾಗಬಹುದು ಎಂಬ ಭಯ ಎಂ.ಬಿ. ಪಾಟೀಲರಿಗೆ ಇದೆ. ಆ ಭಯಕ್ಕೆ ಸಿದ್ದರಾಮಯ್ಯ ಅವರ ಮನೆಗೆ ಹೋಗಿ ಟ್ರೀಟ್ಮೆಂಟ್ ಪಡೆದುಕೊಳ್ಳಲಿ. ಬೇಕಾದರೆ ಸಿದ್ದರಾಮಯ್ಯ ಅವರ ಒಪಿನಿಯನ್ ಕೂಡ ಪಡೆದುಕೊಳ್ಳಲಿ” ಎಂದು ಯತ್ನಾಳ ಟಾಂಗ್ ನೀಡಿದರು.

‘ನನ್ನನ್ನು ಶಾಸಕನನ್ನಾಗಿ ಮಾಡಿದ್ದು ಜನರು, ಎಂ.ಬಿ. ಪಾಟೀಲ ಅಲ್ಲ’

“ನನ್ನನ್ನು ಹಿಂದೆ ಶಾಸಕನನ್ನಾಗಿ ಆಯ್ಕೆ ಮಾಡಿದ್ದು ಎಂ.ಬಿ. ಪಾಟೀಲರೇ? ಜನರು ನನ್ನನ್ನು ಆಯ್ಕೆ ಮಾಡಿದ್ದಾರೆ. ಎಂ.ಬಿ. ಪಾಟೀಲರಿಗೂ ನನಗೂ ಯಾವುದೇ ಹೊಂದಾಣಿಕೆ ಇಲ್ಲ. ಅವರಿಂದ ನಾನು ರಾಜಕೀಯಕ್ಕೆ ಬಂದವನಲ್ಲ” ಎಂದು ಯತ್ನಾಳ ತಿರುಗೇಟು ನೀಡಿದರು.
“ನಾನು ಯಡಿಯೂರಪ್ಪ ಅವರ ಕೃಪೆಯಿಂದ ರಾಜಕೀಯಕ್ಕೆ ಬಂದವನಲ್ಲ. ಸ್ವಂತ ಹೋರಾಟದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಯಡಿಯೂರಪ್ಪ ಅವರು ಬಸ್ಸಿನಲ್ಲಿ ವಿಜಯಪುರ ಜಿಲ್ಲೆಗೆ ಬರುತ್ತಿದ್ದಾಗ ನಾವೇ ಬಾಡಿಗೆ ಕಾರಿನಲ್ಲಿ ಅವರನ್ನು ಓಡಾಡಿಸುತ್ತಿದ್ದೆವು” ಎಂದು ತಮ್ಮ ರಾಜಕೀಯ ಹಿನ್ನೆಲೆಯನ್ನು ವಿವರಿಸಿದರು.

‘ಪರಿಷತ್ ಚುನಾವಣೆಯಲ್ಲಿ ಸಹಾಯ ಮಾಡಿದ್ದೇನೆ ಎನ್ನುವುದು ಸುಳ್ಳು’

ಪರಿಷತ್ ಚುನಾವಣೆಯಲ್ಲಿ ತಮಗೆ ಎಂ.ಬಿ. ಪಾಟೀಲ ಸಹಾಯ ಮಾಡಿದ್ದಾರೆ ಎಂಬ ಹೇಳಿಕೆಯನ್ನೂ ತಳ್ಳಿಹಾಕಿದ ಯತ್ನಾಳ, “ಆಗ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಹಾಕಬೇಕಿತ್ತು. ನನ್ನೊಂದಿಗೆ ಎಂ.ಬಿ. ಪಾಟೀಲರಿಗೆ ಹೊಂದಾಣಿಕೆ ಇರಲಿಲ್ಲ. ಬದಲಾಗಿ ಅವರಿಗೂ ಬಿಜೆಪಿಗೂ ಹೊಂದಾಣಿಕೆ ಇತ್ತು” ಎಂದು ಆರೋಪಿಸಿದರು.

‘ಬಬಲೇಶ್ವರದಲ್ಲಿನ ಹೊಂದಾಣಿಕೆ ರಾಜಕೀಯ ನನಗೆ ಗೊತ್ತಿದೆ’

2023ರ ಚುನಾವಣೆಯಲ್ಲಿ ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ತಾವು ಪ್ರಚಾರ ಮಾಡದಿರುವುದಕ್ಕೂ ಇದೇ ಹೊಂದಾಣಿಕೆ ಕಾರಣ ಎಂದು ಯತ್ನಾಳ ಆರೋಪಿಸಿದರು.
“ಯಡಿಯೂರಪ್ಪ ಅವರಿಗೆ ಹಣ ನೀಡಿ ಎಂ.ಬಿ. ಪಾಟೀಲ ತಮ್ಮ ಕ್ಷೇತ್ರಕ್ಕೆ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿಕೊಂಡು ಬರುತ್ತಾರೆ. ಬಿಜೆಪಿ ಅಭ್ಯರ್ಥಿ ಮತದಾನಕ್ಕೂ ಮುನ್ನವೇ ತಲೆ ಒಡೆದುಕೊಂಡು ಪಟ್ಟಿಕಟ್ಟುಕೊಂಡು ಬರುತ್ತಾನೆ. ನಂತರ ತಲೆ ಒಡೆದಿದ್ದಾರೆ ಎಂದು ಆರೋಪ ಮಾಡುತ್ತಾರೆ. ತಲೆ ಒಡೆದಿದ್ದು ಬೇರೆ ಕಡೆ, ಬ್ಯಾಂಡೇಜ್ ಹಾಕಿಕೊಂಡಿದ್ದು ಬೇರೆ ಕಡೆ. ಇದೆಲ್ಲವೂ ಹೊಂದಾಣಿಕೆ ರಾಜಕೀಯ” ಎಂದು ಆರೋಪಿಸಿದರು.

‘ಮುಂದಿನ ಚುನಾವಣೆಗೆ ಹೆದರಿಸುವವರು ಯಾರೂ ಇಲ್ಲ’

“ಮುಂದಿನ ಚುನಾವಣೆಯಲ್ಲಿ ನನ್ನನ್ನು ನೋಡಿಕೊಳ್ಳುತ್ತೇನೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ. ಅದಕ್ಕೆ ನಾನು ಅಂಜುವುದಿಲ್ಲ. ನನ್ನನ್ನು ಶಾಸಕರನ್ನಾಗಿ ಮಾಡುವುದು ಎಂ.ಬಿ. ಪಾಟೀಲ ಅಲ್ಲ; ವಿಜಯಪುರದ ಜನರು” ಎಂದು ಯತ್ನಾಳ ಹೇಳಿದರು.
ಕೊನೆಯಲ್ಲಿ ಕಾಂಗ್ರೆಸ್ ಪಕ್ಷವನ್ನು “ವಿಷದ ಬಾಟಲಿಯಂತೆ” ಟೀಕಿಸಿದ ಅವರು, “ಎಂ.ಬಿ. ಪಾಟೀಲರಿಂದ ರಾಜಕೀಯದ ಬಗ್ಗೆ ನಾನು ಬುದ್ಧಿ ಕಲಿಯುವ ಅವಶ್ಯಕತೆ ಇಲ್ಲ” ಎಂದು ತೀವ್ರ ವಾಗ್ದಾಳಿ ನಡೆಸಿದರು.

‘ಮುಂದಿನ ಸಲ ವಿಧಾನಸಭೆಯಲ್ಲಿ ಯಾರು ಇರ್ತಾರೆ ನೋಡೋಣ!’

“ಮುಂದಿನ ಸಲ ವಿಧಾನಸಭೆಯಲ್ಲಿ ನೀವು ಇರ್ತೀರೋ, ನಾನು ಇರ್ತೀನೋ ನೋಡೋಣ” ಎಂದು ಯತ್ನಾಳ ಎಂ. ಬಿ. ಪಾಟೀಲ ವಿರುದ್ದ ಸವಾಲು ಹಾಕಿದ್ದಾರೆ. “ಮುಂದಿನ ಚುನಾವಣೆಯಲ್ಲಿ ನಗರಕ್ಕೆ ಹೇಗೆ ಶಾಸಕರಾಗುತ್ತೀರಿ ಎಂದು ಧಮ್ಕಿ ಕೊಟ್ಟರೆ ನಡೆಯುವುದಿಲ್ಲ. ನನ್ನ ಹೋರಾಟ ಮುಂದುವರಿಯಲಿದೆ. ನಿಮ್ಮ ಬಳಿ ಸಿಕ್ಕಾಪಟ್ಟೆ ಹಣವಿದೆ ಎಂದು ಹುಚ್ಚರಂತೆ ಮಾತನಾಡಬಾರದು” ಎಂದು ಎಂ.ಬಿ. ಪಾಟೀಲ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
“ನಾನು ನಿಮ್ಮ ಹಾಗೆ ಮಾತನಾಡುವುದಿಲ್ಲ. ಹಿಂದೆ ಯಡಿಯೂರಪ್ಪ ಅವರು ಹಣ ಕೊಟ್ಟು ವೀಕ್ ಕ್ಯಾಂಡಿಡೇಟ್ ಹಾಕಿಕೊಂಡು ಬಂದಿದ್ದರು. ಈಗ ವಿಜಯೇಂದ್ರಗೆ ಹಣ ಕೊಟ್ಟು ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆದ್ದು ಬರುತ್ತೀರಿ ಎಂದುಕೊಂಡಿದ್ದರೆ ಅದು ನಡೆಯುವುದಿಲ್ಲ” ಎಂದು ಟೀಕಿಸಿದರು.
“ಮುಂದಿನ ಬಾರಿ ನಾನು ವಿಧಾನಸಭೆಯ ಮುಂದಿನ ಸಾಲಿನ ಖುರ್ಚಿಯಲ್ಲಿ ಕೂರುತ್ತೇನೆ. ಆಗ ನೀವು ಲೆಟರ್ ಹಿಡಿದುಕೊಂಡು ನನ್ನ ಮುಂದೆ ಬಂದು ನಿಲ್ಲುವ ಪರಿಸ್ಥಿತಿ ಬರುತ್ತದೆಯೋ ಯಾರಿಗೆ ಗೊತ್ತು” ಎಂದು ಯತ್ನಾಳ ಹೇಳಿದರು.
ತಾಳಿಕೋಟೆ ಮೆರವಣಿಗೆಯನ್ನು ಉಲ್ಲೇಖಿಸಿದ ಅವರು, “ನಿನ್ನೆ ಮೆರವಣಿಗೆಯಲ್ಲಿ 12 ಜೆಸಿಬಿಗಳು ನನ್ನ ಹಿಂದೆ ಇದ್ದವು. ಜನ ಮನಸ್ಸು ಮಾಡಿದರೆ ಸಾಮಾನ್ಯರನ್ನೂ ಗೆಲ್ಲಿಸುತ್ತಾರೆ” ಎಂದರು.
ತಮ್ಮ ವಿರುದ್ಧ ಮುಸ್ಲಿಂ ಟೋಪಿ ಧರಿಸಿದ್ದ ವಿಚಾರ ಪ್ರಸ್ತಾಪಿಸಲಾಗುತ್ತಿದೆ ಎಂದು ಹೇಳಿದ ಯತ್ನಾಳ, “ಹೌದು, ಹಿಂದೆ ನಾನು ಮುಸ್ಲಿಂ ಟೋಪಿ ಹಾಕಿದ್ದೆ. ಆ ತಪ್ಪಿಗೆ ತಲೆ ಬೋಳಿಸಿಕೊಂಡು ಗಂಗಾನದಿಯಲ್ಲಿ ಸ್ನಾನ ಮಾಡಿ ಪ್ರಾಯಶ್ಚಿತ್ತ ಮಾಡಿಕೊಂಡಿದ್ದೇನೆ. ಮುಂದೆ ಎಂದೂ ಮುಸ್ಲಿಂ ಟೋಪಿ ಹಾಕುವುದಿಲ್ಲ” ಎಂದು ಹೇಳಿದರು.
“ಸೋನಿಯಾ ಗಾಂಧಿ, ರಾಹುಲ್ ಗಾಂಧಿ ನಿಮಗೆ ಗೊತ್ತಿರಬೇಕು; ನನಗೆ ವಿಜಯಪುರದ ಜನ ಮಾತ್ರ ಗೊತ್ತು” ಎಂದು ಎಂ.ಬಿ. ಪಾಟೀಲರಿಗೆ ತಿರುಗೇಟು ನೀಡಿದರು.
ಕರ್ನಾಟಕದಲ್ಲೂ ರಾಜಕೀಯ ಬದಲಾವಣೆ ಬರಲಿದೆ ಎಂದು ಹೇಳಿದ ಯತ್ನಾಳ, “ಬಸನಗೌಡ ಯತ್ನಾಳ ಮುಖ್ಯಮಂತ್ರಿ ಆಗುವುದು ಖಚಿತ. ಢಣ್… ಢಣ್… ಢಣ್…” ಎಂದು ಘೋಷಿಸಿದರು.
ಜೆಸಿಬಿ ಪಕ್ಷದ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಲಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂಬುದಾಗಿಯೂ ಯತ್ನಾಳ ಹೇಳಿಕೊಂಡರು.

‘ಸಿದ್ದರಾಮಯ್ಯ ಹಿಂದೆ ಕೊನೆಗೆ ಯಾರೂ ನಿಲ್ಲಲಿಲ್ಲ’

ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಸಂದರ್ಭ ಬಂದಾಗ ಅವರ ಪರವಾಗಿ ಹಾಲುಮತ ಸಮಾಜವಾಗಲಿ, ಅಲ್ಪಸಂಖ್ಯಾತರಾಗಲಿ ಹೋರಾಟ ನಡೆಸಲಿಲ್ಲ. ಅವರ ಪರವಾಗಿ ಯಾರೊಬ್ಬರೂ ಗಟ್ಟಿಯಾಗಿ ಮಾತನಾಡಲಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.
2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ವಿವಾದಿತ ಮುಸ್ಲಿಂ ಧರ್ಮಗುರುವಿನ ಮನೆಗೆ ತೆರಳಿದ್ದರು. ಆ ಧರ್ಮಗುರುವಿಗೆ ಐಎಸ್ಐ ಸಂಪರ್ಕವಿದೆ ಎಂಬ ಅನುಮಾನಗಳಿದ್ದರೂ ಅಲ್ಲಿಗೆ ಹೋಗಿದ್ದರು. ಆದರೆ, ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಪರಿಸ್ಥಿತಿ ಎದುರಾದಾಗ ಇದೇ ಧರ್ಮಗುರು ಸಿದ್ದರಾಮಯ್ಯ ಪರವಾಗಿ ಯಾವುದೇ ಹೇಳಿಕೆ ನೀಡಲಿಲ್ಲ ಎಂದು ಟೀಕಿಸಿದರು.
ಜಮೀರ್ ಅಹ್ಮದ್ ಖಾನ್ ಅವರಿಗೆ ಸಚಿವ ಸ್ಥಾನ ನೀಡದ ಸಂದರ್ಭದಲ್ಲಿ ಮಾತ್ರ ಪ್ರಶ್ನೆಗಳು ಎದ್ದವು. ಆದರೆ, ಸಿದ್ದರಾಮಯ್ಯ ಅವರ ವಿಚಾರ ಬಂದಾಗ ಯಾರೂ ಅವರ ಪರವಾಗಿ ನಿಲ್ಲಲಿಲ್ಲ ಎಂದು ಯತ್ನಾಳ ಹೇಳಿದರು.
‘ಹಾಲುಮತ ಸಮಾಜಕ್ಕೂ ಸಿದ್ದರಾಮಯ್ಯ ಏನೂ ಮಾಡಿಲ್ಲ. ಆ ಸಮಾಜದವರೂ ಅವರಿಗಾಗಿ ಹೋರಾಟಕ್ಕೆ ಮುಂದಾಗಲಿಲ್ಲ. ಅಲ್ಪಸಂಖ್ಯಾತರಿಗೆ ಎಲ್ಲವನ್ನೂ ಮಾಡಿದರು. ಆದರೆ ಇತರ ಸಮಾಜಗಳು ಹಾಗೂ ಹಾಲುಮತ ಸಮಾಜದವರಿಗೆ ಏನೂ ಮಾಡಲಿಲ್ಲ’ ಎಂದು ಅವರು ಆರೋಪಿಸಿದರು.
ಸಿದ್ದರಾಮಯ್ಯ ಅವರು ಸಚಿವರಾದ ಸತೀಶ ಜಾರಕಿಹೊಳಿ ಹಾಗೂ ಎಚ್.ಸಿ. ಮಹದೇವಪ್ಪ ಅವರನ್ನು ನಿರ್ಲಕ್ಷಿಸಿದರು. ‘ಜಮೀರ್… ಜಮೀರ್…’ ಎಂದು ಅವರ ಹಿಂದೆ ಹೋದ ಸಿದ್ದರಾಮಯ್ಯ ಅವರಿಗೆ ಅಂತಿಮವಾಗಿ ಯಾರೂ ಬೆಂಬಲವಾಗಿ ನಿಲ್ಲಲಿಲ್ಲ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

Share this