ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಇಂಜಿನಿಯರ್ಸ್ ದಿನಾಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 16: ಸಮಾಜದ ಅಭಿವೃದ್ಧಿ ಹಾಗೂ ದೇಶದ ಪ್ರಗತಿಯಲ್ಲಿ ಇಂಜಿನಿಯರ್ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ರೋಟರಿ ಸಂಸ್ಥೆಯ ಅಧ್ಯಕ್ಷ ರಾಕೇಶ್ ಗೋಪಾಲ್ ಜೋಶಿ ಹೇಳಿದರು.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದಲ್ಲಿ ರೋಟರಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಇಂಜಿನಿಯರ್ಸ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ನಿರಂತರವಾಗಿ ನಡೆಯುತ್ತಿರುವ ಬೆಳವಣಿಗೆಗಳಿಗೆ ಇಂಜಿನಿಯರ್ಗಳ ಕೊಡುಗೆ ಅಪಾರವಾಗಿದೆ. ಮೂಲಸೌಕರ್ಯ, ಕೈಗಾರಿಕೆ, ಕೃಷಿ, ಸಾರಿಗೆ ಹಾಗೂ ಮಾಹಿತಿ ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಗತಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದರು.
ಇಂಜಿನಿಯರ್ಗಳು ತಾಂತ್ರಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಸಮಾಜದ ಅಗತ್ಯಗಳನ್ನು ಅರಿತು ಸುಸ್ಥಿರ ಹಾಗೂ ಜನಪರ ಅಭಿವೃದ್ಧಿಗೆ ತಮ್ಮ ಜ್ಞಾನ ಮತ್ತು ಕೌಶಲ್ಯ ಬಳಸಬೇಕು. ಯುವ ಇಂಜಿನಿಯರ್ಗಳು ನವೀನ ಆಲೋಚನೆ, ಸೃಜನಶೀಲತೆ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಹೊಣೆಗಾರಿಕೆ ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ತಾಂತ್ರಿಕ ಶಿಕ್ಷಣ ಇಲಾಖೆಯ ಪರೀಕ್ಷಾ ವಿಭಾಗದ ಡಾ. ಸಂಜೀವ್ ಚೌಹಾಣ್ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಜ್ಞಾನ ಮತ್ತು ಕೌಶಲ್ಯಾಭಿವೃದ್ಧಿಗೆ ಆದ್ಯತೆ ನೀಡಬೇಕು. ಹೊಸ ತಂತ್ರಜ್ಞಾನಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಿವಪುತ್ರ ಜವಳಿ ಮಾತನಾಡಿ, ದೇಶದ ಪ್ರಗತಿಯಲ್ಲಿ ಇಂಜಿನಿಯರ್ಗಳ ಕೊಡುಗೆಯನ್ನು ಸ್ಮರಿಸಿ, ಅವರ ಸೇವೆಯನ್ನು ಗೌರವಿಸುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ರೋಟರಿ ಸಂಸ್ಥೆ ವತಿಯಿಂದ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಉಪನ್ಯಾಸಕರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆಯ ಕಾರ್ಯದರ್ಶಿ ರುದ್ರಗೌಡ ಪಾಟೀಲ, ಗೋಪಾಲ್ ಕುಲಕರ್ಣಿ, ಇಮಾಮ ಹುಲ್ಲೂರ್, ವಾಸುದೇವ ಬೆಂಡಿಗೇರಿ, ಡಾ. ರವೀಂದ್ರ ಬೆಳ್ಳಿ, ಚಂದ್ರಶೇಖರ ಸಿಂಧೂರ, ಕಲ್ಲಪ್ಪ ಮೇತ್ರಿ, ಚೆನ್ನಪ್ಪ ಹುಣಶಾಳ, ಪ್ರದೀಪ ನಾಗನೂರ, ರೇಖಾ ಖಾನಾಪುರ, ಅಕ್ಷತಾ ಕುಷ್ಟಗಿ, ಸುವರ್ಣ ಕಬಾಡೆ, ಪಿ.ಎಸ್. ಪಾಟೀಲ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


