ವಿಜಯಪುರದಲ್ಲಿ ಮಹಾ ಸತ್ಸಂಗ; ಭಕ್ತಿ, ಜ್ಞಾನ, ಸಂಗೀತದ ಅಪೂರ್ವ ಸಂಗಮ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 16:
ಸತ್ಸಂಗವು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲ. ಅದು ಮನಸ್ಸಿಗೆ ನೆಮ್ಮದಿ, ಜೀವನಕ್ಕೆ ಶಿಸ್ತು ಹಾಗೂ ಸಮಾಜದಲ್ಲಿ ಪ್ರೀತಿ, ಸೌಹಾರ್ದತೆ ಬೆಳೆಸುವ ಶಕ್ತಿಯುತ ಮಾಧ್ಯಮವಾಗಿದೆ ಎಂದು ಆರ್ಟ್ ಆಫ್ ಲಿವಿಂಗ್ನ ಡಾ. ಬಿ.ಎಂ. ಪಾಟೀಲ ಗುರೂಜಿ ಹೇಳಿದರು.
ನಗರದ ಸಮರ್ಥ ಬಡಾವಣೆಯ ಶ್ರೀ ಸಾಕ್ಷಿ ಗಜಾನನ ದೇವಸ್ಥಾನದ ಮಹಾಮಂಡಳದ ವತಿಯಿಂದ ಗಜಾನನ ಉತ್ಸವ ಸಮಿತಿಯ ಸಹಯೋಗದಲ್ಲಿ ಆರ್ಟ್ ಆಫ್ ಲಿವಿಂಗ್ ಬೆಂಗಳೂರು ಹಾಗೂ ವಿಜಯಪುರ ಘಟಕಗಳ ನೇತೃತ್ವದಲ್ಲಿ ಆಯೋಜಿಸಿದ್ದ ಮಹಾ ಸತ್ಸಂಗದಲ್ಲಿ ಅವರು ಮಾತನಾಡಿದರು.
ಇಂದಿನ ವೇಗದ ಜೀವನಶೈಲಿಯಲ್ಲಿ ಮನುಷ್ಯ ಒತ್ತಡ, ಆತಂಕ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಇಂತಹ ಸಂದರ್ಭದಲ್ಲಿ ಸತ್ಸಂಗ, ಧ್ಯಾನ, ಪ್ರಾರ್ಥನೆ ಹಾಗೂ ಸಂಗೀತದ ಮೂಲಕ ಮನಸ್ಸನ್ನು ಶಾಂತಗೊಳಿಸಿ, ಬದುಕಿನಲ್ಲಿ ಸಕಾರಾತ್ಮಕ ಚಿಂತನೆ ಬೆಳೆಸಿಕೊಳ್ಳಬಹುದು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಸತ್ಸಂಗಗಳು ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆ, ಸೇವಾ ಮನೋಭಾವ ಮತ್ತು ಮಾನವೀಯತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸತ್ಸಂಗದಲ್ಲಿ ಭಜನೆ, ಭಕ್ತಿಗೀತೆ ಹಾಗೂ ಆಧ್ಯಾತ್ಮಿಕ ವಿಚಾರಗಳ ಮೂಲಕ ಭಕ್ತರಲ್ಲಿ ಭಕ್ತಿ, ಆತ್ಮವಿಶ್ವಾಸ ಮತ್ತು ಆಂತರಿಕ ಶಾಂತಿಯ ಅನುಭವ ಮೂಡಿತು. ಸಂಗೀತಮಯ ಭಕ್ತಿಯ ವಾತಾವರಣದಲ್ಲಿ ಭಕ್ತರು ಉತ್ಸಾಹದಿಂದ ಪಾಲ್ಗೊಂಡರು.
ಆರ್ಟ್ ಆಫ್ ಲಿವಿಂಗ್ನ ಡಾ. ರವೀಂದ್ರ ಬೆಳ್ಳಿ, ಎನ್.ಡಿ. ಮಸೂತಿ, ಸಹನಾ ಪಾಟೀಲ, ಶೋಭಾ ಪಾಟೀಲ, ಡಾ. ಸಾವಿತ್ರಿ ಬಾಗೇವಾಡಿ, ಸುಧಾ ಇಜೇರಿ, ಚಂದ್ರಶೇಖರ ಸಿಂಧೂರ, ಮಾಳಪ್ಪ ಪೂಜಾರಿ, ಕೋಮಲತಾ ಬಾವಿಕಟ್ಟಿ, ಶೃತಿ ಪಾಟೀಲ, ರೇಖಾ ಹುಗ್ಗಿ ಮತ್ತಿತರರು ಉಪಸ್ಥಿತರಿದ್ದರು.
ಗಜಾನನ ಉತ್ಸವ ಸಮಿತಿ ಅಧ್ಯಕ್ಷ ಅಪ್ಪಾಸಾಹೇಬ ಗೌಡ ಬಿರಾದಾರ, ಉಪಾಧ್ಯಕ್ಷ ಬಿ.ಬಿ. ಬಿರಾದಾರ, ಪದಾಧಿಕಾರಿಗಳಾದ ಚಂದ್ರಶೇಖರ ದೊಡ್ಡಮನಿ, ಮಲ್ಲನಗೌಡ ಮುರಾಳ, ಓಂಪ್ರಕಾಶ, ರಾಘವೇಂದ್ರ ಬಗಲಿ ಸೇರಿದಂತೆ ಭಕ್ತರು ಹಾಗೂ ಬಡಾವಣೆಯ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮವು ಭಕ್ತಿ ಮತ್ತು ಆಧ್ಯಾತ್ಮಿಕ ಉಲ್ಲಾಸದಿಂದ ಕೂಡಿದ್ದು, ಭಕ್ತರಿಗೆ ಸತ್ಸಂಗದ ಸಾರ್ಥಕ ಅನುಭವ ನೀಡಿತು.


