ಪಿಡಬ್ಲ್ಯುಡಿ ಐಬಿಯನ್ನು ಸ್ಮಾರಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಲು ದಲಿತ ಸಂಘರ್ಷ ಸಮಿತಿ ಆಗ್ರಹ

ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ, ಗ್ರಂಥಾಲಯ ಸ್ಥಾಪನೆಗೆ ಒತ್ತಾಯ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 16:

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಜಯಪುರದಲ್ಲಿ ವಾಸ್ತವ್ಯ ಹೂಡಿದ್ದ ಐತಿಹಾಸಿಕ ಪಿಡಬ್ಲ್ಯುಡಿ ಐಬಿ ಕಟ್ಟಡವನ್ನು ಸಂರಕ್ಷಿಸಿ, ಸ್ಮಾರಕ ಹಾಗೂ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ. ಜಿ. ಸಾಗರ ಬಣ) ಜಿಲ್ಲಾ ಸಮಿತಿ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿ ಡಾ. ಆನಂದ ಕೆ. ಅವರಿಗೆ ಮನವಿ ಸಲ್ಲಿಸಿರುವ ಸಮಿತಿಯ ಜಿಲ್ಲಾ ಸಂಚಾಲಕ ಸಿದ್ದು ರಾಯಣ್ಣನವರ, ಅಂಬೇಡ್ಕರ್ ಅವರ ವಿಜಯಪುರ ಭೇಟಿಯ ಐತಿಹಾಸಿಕ ಮಹತ್ವವನ್ನು ವಿವರಿಸಿ, ಕಟ್ಟಡದ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಐತಿಹಾಸಿಕ ಘಟನೆಗೆ ಸಾಕ್ಷಿಯಾದ ಕಟ್ಟಡ

1939ರ ಫೆಬ್ರವರಿ 11 ಮತ್ತು 12ರಂದು ಡಾ. ಬಿ.ಆರ್. ಅಂಬೇಡ್ಕರ್ ಅವರು ವಿಜಯಪುರದ ಪಿಡಬ್ಲ್ಯುಡಿ ಐಬಿಯಲ್ಲಿ ವಾಸ್ತವ್ಯ ಹೂಡಿದ್ದರು. ಈ ಅವಧಿಯಲ್ಲಿ ಬೀಳಗಿಯಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮನಗೌಡ ಪಾಟೀಲ ಅವರ ಪರವಾಗಿ ತಮ್ಮ ಕಾನೂನು ಪಾಂಡಿತ್ಯದಿಂದ ವಾದ ಮಂಡಿಸಿ, ಪ್ರಕರಣದಲ್ಲಿ ಜಯ ದೊರಕಿಸಿಕೊಟ್ಟಿದ್ದರು ಎಂದು ಸಿದ್ದು ರಾಯಣ್ಣನವರ ಸ್ಮರಿಸಿದ್ದಾರೆ.

ಅದೇ ವರ್ಷದ ಫೆಬ್ರವರಿ 12ರಂದು ವಿಜಯಪುರದಲ್ಲಿ ನಡೆದ ಹರಿಜನರ ಸಮ್ಮೇಳನದಲ್ಲಿ ಬೃಹತ್ ದಲಿತ ಸಮುದಾಯವನ್ನು ಉದ್ದೇಶಿಸಿ ಅಂಬೇಡ್ಕರ್ ಅವರು ಮಾತನಾಡಿದ್ದರು. ಸಾಮಾಜಿಕ ಸಮಾನತೆ, ಸ್ವಾಭಿಮಾನ ಮತ್ತು ಹಕ್ಕುಗಳ ಅರಿವಿನ ಸಂದೇಶ ಸಾರಿದ ಈ ಐತಿಹಾಸಿಕ ಘಟನೆಯ ನೆನಪುಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಥಿಲ ಕಟ್ಟಡದ ಸಂರಕ್ಷಣೆಗೆ ಆಗ್ರಹ

ಅಂಬೇಡ್ಕರ್ ಅವರ ವಾಸ್ತವ್ಯಕ್ಕೆ ಸಾಕ್ಷಿಯಾಗಿರುವ ಪಿಡಬ್ಲ್ಯುಡಿ ಐಬಿ ಕಟ್ಟಡ ಇಂದು ಶಿಥಿಲಾವಸ್ಥೆಯಲ್ಲಿದ್ದು, ಅದರ ಐತಿಹಾಸಿಕ ಮಹತ್ವದ ಬಗ್ಗೆ ಬಹುತೇಕ ಜನರಿಗೆ ಅರಿವಿಲ್ಲ. ಇಂತಹ ಮಹತ್ವದ ಸ್ಮರಣೀಯ ಸ್ಥಳ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ವಿಷಾದನೀಯ. ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಗಮನಹರಿಸಿ, ಕಟ್ಟಡವನ್ನು ವೈಜ್ಞಾನಿಕವಾಗಿ ಸಂರಕ್ಷಿಸುವುದರ ಜೊತೆಗೆ ಅದರ ಐತಿಹಾಸಿಕ ಹಿನ್ನೆಲೆಯನ್ನು ದಾಖಲಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಪ್ರೇರಣೆಯ ಕೇಂದ್ರವಾಗಿ ರೂಪಿಸಲು ಮನವಿ

ಕಟ್ಟಡದ ಆವರಣದಲ್ಲಿ ಡಾ. ಅಂಬೇಡ್ಕರ್ ಅವರ ಬೃಹತ್ ಪ್ರತಿಮೆ ಸ್ಥಾಪಿಸಿ, ಅವರ ಜೀವನ, ಹೋರಾಟ, ಸಂವಿಧಾನ ರಚನೆ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗಳನ್ನು ಪರಿಚಯಿಸುವ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ನಿರ್ಮಿಸಬೇಕು. ಐತಿಹಾಸಿಕ ಕಟ್ಟಡವನ್ನು ಸುಂದರವಾಗಿ ಅಭಿವೃದ್ಧಿಪಡಿಸಿ, ವಿದ್ಯಾರ್ಥಿಗಳು, ಸಂಶೋಧಕರು, ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಜ್ಞಾನ ಮತ್ತು ಪ್ರೇರಣೆ ನೀಡುವ ಕೇಂದ್ರವನ್ನಾಗಿ ರೂಪಿಸಬೇಕು ಎಂದು ಸಮಿತಿ ಆಗ್ರಹಿಸಿದೆ.
ಅಂಬೇಡ್ಕರ್ ಅವರ ವಿಜಯಪುರ ಭೇಟಿಯು ಜಿಲ್ಲೆಯ ಇತಿಹಾಸದ ಮಹತ್ವದ ಅಧ್ಯಾಯವಾಗಿದ್ದು, ಅದನ್ನು ಮುಂದಿನ ಪೀಳಿಗೆಗೆ ಉಳಿಸಿ ತಲುಪಿಸುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದೆ. ಆದ್ದರಿಂದ ಈ ಸ್ಥಳವನ್ನು ಕೇವಲ ಕಟ್ಟಡವಾಗಿ ಪರಿಗಣಿಸದೆ, ಸಾಮಾಜಿಕ ಪರಿವರ್ತನೆಯ ಇತಿಹಾಸವನ್ನು ಸಾರುವ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಸಮಿತಿ ಮನವಿ ಮಾಡಿದೆ.
ಈ ಸಂದರ್ಭದಲ್ಲಿ ಪ್ರೇಮ್ ಚಲವಾದಿ, ಆಕಾಶ ಹಿಪ್ಪರಗಿ, ಆಶಿಫ್ ಪಟೇಲ್ ಸೇರಿದಂತೆ ದಲಿತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

Share this