ಕೌಶಲ್ಯವೇ ಯಶಸ್ಸಿನ ಮೆಟ್ಟಿಲು: ಯುವಜನತೆಗೆ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಕರೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 17: ಇಂದಿನ ಸ್ಪರ್ಧಾತ್ಮಕ ಹಾಗೂ ತಾಂತ್ರಿಕ ಯುಗದಲ್ಲಿ ಕೇವಲ ಶೈಕ್ಷಣಿಕ ಜ್ಞಾನದಿಂದ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಜ್ಞಾನದ ಜೊತೆಗೆ ವೃತ್ತಿಪರ ಕೌಶಲ್ಯವನ್ನು ಬೆಳೆಸಿಕೊಂಡಾಗ ಆತ್ಮವಿಶ್ವಾಸ, ಸ್ವಾವಲಂಬನೆ ಹಾಗೂ ಯಶಸ್ವಿ ಬದುಕಿನ ಹಾದಿ ಸುಗಮವಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ ಹೇಳಿದರು.
ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಗವಾನ್ ವಿಶ್ವಕರ್ಮರು ಸೃಜನಶೀಲತೆ, ಪರಿಶ್ರಮ, ಕೌಶಲ್ಯ ಮತ್ತು ನಿರ್ಮಾಣ ಕಲೆಯ ಪ್ರತೀಕವಾಗಿದ್ದಾರೆ. ಭಾರತೀಯ ಪರಂಪರೆಯಲ್ಲಿ ದೇವಶಿಲ್ಪಿಯಾಗಿ ಪೂಜಿಸಲ್ಪಡುವ ವಿಶ್ವಕರ್ಮರು ತಮ್ಮ ಅದ್ಭುತ ಕಲಾ ನೈಪುಣ್ಯದಿಂದ ದ್ವಾರಕಾ ನಗರ, ಇಂದ್ರನ ಭವನ ಹಾಗೂ ದೈವಿಕ ಆಯುಧಗಳನ್ನು ನಿರ್ಮಿಸಿದ ಮಹಾನ್ ಶಿಲ್ಪಿ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅವರ ಬದುಕು ಕಾಯಕದ ಮಹತ್ವ ಮತ್ತು ಸೃಜನಶೀಲತೆಯ ಶಕ್ತಿಯನ್ನು ಸಾರುತ್ತದೆ ಎಂದರು.
ಯುವಜನತೆ ವಿಶ್ವಕರ್ಮರ ಕಾಯಕ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾವುದೇ ವೃತ್ತಿಯಿರಲಿ, ಅದರಲ್ಲಿ ನೈಪುಣ್ಯ ಸಾಧಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಕೌಶಲ್ಯಕ್ಕೆ ಗೌರವ ನೀಡುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಕರೆ ನೀಡಿದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಸಂತ ಹೊನಮೋಡೆ ಕಾರ್ಯಕ್ರಮ ಉದ್ಘಾಟಿಸಿ, ವಿಶ್ವಕರ್ಮ ಜಯಂತಿಯ ಶುಭಾಶಯ ಕೋರಿದರು.
ಉಪನ್ಯಾಸ ನೀಡಿದ ಕಾಶೀನಾಥ ಕೋಣೆನವರ, ಭಗವಾನ್ ವಿಶ್ವಕರ್ಮರು ಕಾಯಕ ಮತ್ತು ಕಲಾ ಕೌಶಲ್ಯದ ಮೂಲಕ ವಿವಿಧ ವಸ್ತುಗಳಿಗೆ ರೂಪ ನೀಡಿ ಸುಂದರ ಸೃಷ್ಟಿಗಳನ್ನು ನಿರ್ಮಿಸಿದವರು. ಕಾಯಕದಲ್ಲಿಯೇ ಸೃಜನಶೀಲತೆ ಮತ್ತು ಶ್ರೇಷ್ಠತೆಯನ್ನು ಕಂಡುಕೊಳ್ಳಬೇಕು ಎಂಬ ಸಂದೇಶವನ್ನು ಅವರ ಜೀವನ ಸಾರುತ್ತದೆ. ಪರಿಶ್ರಮ, ವೃತ್ತಿಪರ ನೈಪುಣ್ಯ ಹಾಗೂ ಸೃಜನಶೀಲತೆಯನ್ನು ಮೈಗೂಡಿಸಿಕೊಂಡು ಜೀವನದಲ್ಲಿ ಅಭ್ಯುದಯ ಸಾಧಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ ಭೋವಿ ಸ್ವಾಗತಿಸಿದರು. ಮೋಹನ ಕಟ್ಟಿಮನಿ ನಿರೂಪಿಸಿದರು. ಶ್ರೀದೇವಿ ಪತ್ತಾರ ಹಾಗೂ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮೂರುಜಾವರ ಮಠದ ಶ್ರೀ ಮಹೇಂದ್ರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಉಪ ನಿರ್ದೇಶಕ ನಾಗಭೂಷಣ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಲ್ಲನಗೌಡ ಬಿರಾದಾರ, ವಲಯ ಉಪ ಆಯುಕ್ತ ಮೋಹನ ಜಾಧವ, ಮನೋಹರ ಪತ್ತಾರ ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಿಂದ ವಿಶ್ವಕರ್ಮರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಸಮಾವೇಶಗೊಂಡಿತು.

Share this