ವಿಜಯಪುರದಲ್ಲಿ ಹೈದರಾಬಾದ್ ವಿಮೋಚನಾ ದಿನಾಚರಣೆ
ಸಪ್ತಸಾಗರ ವಾರ್ತೆ, ವಿಜಯಪುರ, ಸೆ. 17:
ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು ಇಂದಿನ ಯುವಜನಾಂಗಕ್ಕೆ ಸ್ಫೂರ್ತಿಯಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ರಾಜ್ಯಾಧ್ಯಕ್ಷ ಜಗದೇವ ಸೂರ್ಯವಂಶಿ ಹೇಳಿದರು.
ನಗರದ ವಲ್ಲಭಭಾಯಿ ಪಟೇಲ ವೃತ್ತದಲ್ಲಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ಆಯೋಜಿಸಿದ್ದ ಹೈದರಾಬಾದ್ ವಿಮೋಚನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಆಪರೇಷನ್ ಪೋಲೊ ಮೂಲಕ ಹೈದರಾಬಾದ್ ಪ್ರಾಂತವನ್ನು ಭಾರತದ ಒಕ್ಕೂಟಕ್ಕೆ ಸೇರ್ಪಡೆಗೊಳಿಸುವಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರು ಮಹತ್ವದ ಪಾತ್ರ ವಹಿಸಿದ್ದಾರೆ. ವಿಜಯಪುರ ಜಿಲ್ಲೆಯೂ ಹೈದರಾಬಾದ್ ಸಂಸ್ಥಾನದ ಭಾಗವಾಗಿದ್ದು, ಸ್ವಾಮಿ ರಾಮಾನಂದ ತೀರ್ಥರು ವಿಮೋಚನಾ ಚಳವಳಿಯ ನೇತೃತ್ವ ವಹಿಸಿ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
371(ಜೆ) ಹೋರಾಟಗಾರ ವಿನೋದ ಖೇಡ ಹಾಗೂ ಕರವೇ ಸ್ವಾಭಿಮಾನಿ ಸೇನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಎಂ.ಆರ್. ಗುರಿಕಾರ ಮಾತನಾಡಿ, ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ಜಿಲ್ಲೆಯ ಸಾವಿರಾರು ಹೋರಾಟಗಾರರು ಬಲಿದಾನಗೈದಿದ್ದಾರೆ. ಸರ್ದಾರ್ ಬಸವರಾಜ ನಾಗೂರ, ಸಿದ್ದಗೊಂಡಪ್ಪಗೌಡ ಪಾಟೀಲ, ಸಂಗಯ್ಯ ಹಿರೇಮಠ ಸೇರಿದಂತೆ ಅನೇಕರು ಶ್ರಮಿಸಿದ ಫಲವಾಗಿ ಹೈದರಾಬಾದ್ ಪ್ರಾಂತ ಭಾರತದ ಒಕ್ಕೂಟದ ಭಾಗವಾಯಿತು ಎಂದರು.
371(ಜೆ) ಹೋರಾಟಗಾರರಾದ ಲಾಯಪ್ಪ ಇಂಗಳೆ ಹಾಗೂ ಕಲ್ಲಪ್ಪ ಶಿವಶರಣ ಮಾತನಾಡಿ, ಹೈದರಾಬಾದ್ ವಿಮೋಚನಾ ಚಳವಳಿಯಲ್ಲಿ ವಿಜಯಪುರ ಜಿಲ್ಲೆಯ ಹೋರಾಟಗಾರರು ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆಯ ವಿಮೋಚನಾ ಚಳವಳಿಗಾರರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಹೋರಾಟಗಾರರಾದ ಮಲ್ಲಿಕಾರ್ಜುನ ಬಟಗಿ, ಅನಿಲ ಇಕ್ಕಡೆ, ಚಂದ್ರಶೇಖರ ಹೊಸಮನಿ, ಮಲ್ಲಿಕಾರ್ಜುನ ಲಂಗೋಟಿ, ಅಂಬಣ್ಣ ಗುನ್ನಾಪೂರ, ನೀಲಾಂಬಿಕಾ ಬಿರಾದಾರ, ಈಶ್ವರ ಚಂದ್ರ ಪಡಗಾನೂರ, ಶಂಕರ ಸಾತಪೋತೆ, ಶರಣಪ್ಪ ಕಟ್ಟಿ, ತಿಮ್ಮನಗೌಡ ಪಾಟೀಲ, ರಾಜಕುಮಾರ ಉಪ್ಪಾರ, ಚಿದಾನಂದ ಹಳ್ಳಿ, ವಿಠ್ಠಲ ಕರಿಗಾರ ಹಾಗೂ ಉಮೇಶ ದೊಡಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.


