ಸ್ವಾಮಿ ರಾಮಾನಂದ ತೀರ್ಥರ ಜಯಂತಿ ಸರಕಾರದಿಂದ ಆಚರಿಸಲು ಆಗ್ರಹ– ವಿನೋದ ಖೇಡ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 24:
ಹೈದರಾಬಾದ್ ವಿಮೋಚನಾ ಚಳವಳಿಯ ಮಹಾನಾಯಕ, ರಾಷ್ಟ್ರವೀರ ಸ್ವಾಮಿ ರಾಮಾನಂದ ತೀರ್ಥರ ಜನ್ಮದಿನವಾದ ಅಕ್ಟೋಬರ್ 3ರಂದು ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಸರ್ಕಾರದ ವತಿಯಿಂದ ಜಯಂತಿ ಆಚರಿಸಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ ಸಂಘ-ಸಂಸ್ಥೆಗಳ ಮುಖಂಡರು ಜಿಲ್ಲಾಧಿಕಾರಿ ಕೆ. ಆನಂದ ಅವರ ಮೂಲಕ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಸಂಘ-ಸಂಸ್ಥೆಗಳ ಒಕ್ಕೂಟದ ಮುಖಂಡ ವಿನೋದ ಖೇಡ ಮಾತನಾಡಿ, ಸಿಂದಗಿ ತಾಲೂಕಿನವರಾದ ಸ್ವಾಮಿ ರಾಮಾನಂದ ತೀರ್ಥರು ಭಾರತದ ಸ್ವಾತಂತ್ರ್ಯ ಸಂಗ್ರಾಮ ಹಾಗೂ ಹೈದರಾಬಾದ್ ಸಂಸ್ಥಾನದ ವಿಮೋಚನಾ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಹೈದರಾಬಾದ್ ರಾಜ್ಯ ಕಾಂಗ್ರೆಸ್‌ಗೆ ನೇತೃತ್ವ ನೀಡಿ ನಡೆಸಿದ ಹೋರಾಟವು ಹೈದರಾಬಾದ್ ಪ್ರಾಂತ್ಯ ಭಾರತ ಒಕ್ಕೂಟಕ್ಕೆ ಸೇರ್ಪಡೆಯಾಗುವಲ್ಲಿ ಪ್ರಮುಖವಾಗಿತ್ತು. ಅವರ ಸೇವೆಯನ್ನು ಸ್ಮರಿಸಿ ಅಕ್ಟೋಬರ್ 3ನ್ನು ಸರ್ಕಾರಿ ಜಯಂತಿಯಾಗಿ ಆಚರಿಸಬೇಕು ಎಂದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ದನಗೌಡ ಪಾಟೀಲ ಹಾಗೂ ಅನಿಲ ಇಕ್ಕಡೆ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರ ತ್ಯಾಗ, ಸತ್ಯಾಗ್ರಹ ಮತ್ತು ನಾಯಕತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಸರ್ಕಾರ ಅವರ ಜಯಂತಿಯನ್ನು ಅಧಿಕೃತವಾಗಿ ಆಚರಿಸಿ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
371(ಜೆ) ಹೋರಾಟಗಾರ ಹಾಗೂ ಇತಿಹಾಸ ಸಂಶೋಧಕ ಲಾಯಪ್ಪ ಇಂಗಳೆ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರು ಶಿಕ್ಷಣ, ಕಾರ್ಮಿಕ ಚಳವಳಿ ಹಾಗೂ ಹಿಂದುಳಿದ ವರ್ಗಗಳ ಏಳಿಗೆಗೂ ಶ್ರಮಿಸಿದ್ದರು. ಆಂಧ್ರಪ್ರದೇಶ, ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಅವರ ಹೆಸರಿನಲ್ಲಿ ಸ್ಮಾರಕ, ಸಂಶೋಧನಾ ಕೇಂದ್ರ ಹಾಗೂ ವಿಶ್ವವಿದ್ಯಾಲಯ ಸ್ಥಾಪಿಸಿರುವುದನ್ನು ಉಲ್ಲೇಖಿಸಿದ ಅವರು, ಕರ್ನಾಟಕದಲ್ಲೂ ಅವರ ಕೊಡುಗೆಯನ್ನು ಅಧಿಕೃತವಾಗಿ ಸ್ಮರಿಸುವ ಕಾರ್ಯವಾಗಬೇಕು ಎಂದರು.
ಮುಖಂಡರಾದ ಅಶೋಕ ಅಲ್ಲಾಪುರ, ಜಗದೇವ ಸೂರ್ಯವಂಶಿ ಹಾಗೂ ಎನ್. ಸುರೇಶಕುಮಾರ ಮಾತನಾಡಿ, ಸ್ವಾಮಿ ರಾಮಾನಂದ ತೀರ್ಥರ ಜನ್ಮಸ್ಥಳ ಸಿಂದಗಿಯಲ್ಲಿರುವ ವೀರಸೌಧವನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಲ್ಲನಗೌಡ ಪಾಟೀಲ (ಬರಟಗಿ), ಪ್ರದೀಪ ದೇಶಪಾಂಡೆ, ಕಲ್ಲಪ್ಪ ಶಿವಶರಣ, ಅಂಬಣ್ಣ ಗುನ್ನಾಪುರ, ರಾಜು ತಡಲಗಿ, ಸಂತೋಷ ಕಲಗುಡಿ, ರಾಜು ಕುಮಟಗಿ, ಅಶೋಕ ಚೋಳಕೆ, ಅಯೂಬಖಾನ್ ನದಾಫ್, ಮೊಹಮ್ಮದ್ ಬಾಗವಾನ, ಎಂ.ಎಂ. ಹಂಗರಗಿ, ಸಂಗನಗೌಡ ಪಾಟೀಲ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

Share this