ಸೆ.30ರೊಳಗೆ e-KYC ಪೂರ್ಣಗೊಳಿಸಿ: ಮಹಾಪೌರ ಮಡಿವಾಳಪ್ಪ ಕರಡಿ ಸೂಚನೆ

ಸಪ್ತಸಾಗರ ವಾರ್ತೆ, ವಿಜಯಪುರ, ಸೆ.25: ನಗರದ ಎಲ್ಲ ಪಡಿತರ ಚೀಟಿದಾರರ ಬಾಕಿ ಇರುವ e-KYC ಪ್ರಕ್ರಿಯೆಯನ್ನು ಸೆ.30ರೊಳಗೆ ಪೂರ್ಣಗೊಳಿಸಬೇಕು. ಯಾವುದೇ ಗ್ರಾಹಕರು e-KYCಯಿಂದ ಹೊರಗುಳಿಯದಂತೆ ಕ್ರಮ ವಹಿಸಬೇಕು ಹಾಗೂ ಸರ್ಕಾರ ನಿಗದಿಪಡಿಸಿದ ಪ್ರಮಾಣದಲ್ಲಿ, ಸರಿಯಾದ ತೂಕದೊಂದಿಗೆ ಪಡಿತರ ವಿತರಿಸಬೇಕು ಎಂದು ಮಹಾಪೌರ ಮಡಿವಾಳಪ್ಪ ಕರಡಿ ಅವರು ನ್ಯಾಯಬೆಲೆ ಅಂಗಡಿಕಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ವಿಜಯಪುರ ಮಹಾನಗರ ಪಾಲಿಕೆಯಲ್ಲಿ ನಡೆದ ನಗರದ ನ್ಯಾಯಬೆಲೆ ಅಂಗಡಿಕಾರರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬ ಪಡಿತರ ಚೀಟಿದಾರರನ್ನು ಸಂಪರ್ಕಿಸಿ ಬಾಕಿ ಇರುವ e-KYC ಕಾರ್ಯವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಪಡಿತರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸುವುದರ ಜತೆಗೆ, ಸಾರ್ವಜನಿಕರಿಂದ ಬರುವ ದೂರುಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಮಹಾಪೌರರು ಸೂಚಿಸಿದರು.

ಸಚಿವರ ಸಭೆಗೂ ಮುನ್ನ ಕಾರ್ಯ ಪೂರ್ಣಗೊಳಿಸಲು ಸೂಚನೆ

ಸೆ.30ರಂದು ನಡೆಯಲಿರುವ ಸಚಿವರ ಸಭೆಯ ಹಿನ್ನೆಲೆಯಲ್ಲಿ ನಗರದ ಎಲ್ಲ ನ್ಯಾಯಬೆಲೆ ಅಂಗಡಿಕಾರರು ಅದಕ್ಕೂ ಮುನ್ನ ಅಗತ್ಯ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ, ಬಾಕಿ ಇರುವ e-KYC ಕಾರ್ಯವನ್ನು ಮುಗಿಸಬೇಕು ಎಂದು ಸಭೆಯಲ್ಲಿ ಸೂಚಿಸಲಾಯಿತು.
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ ಮಾತನಾಡಿ, ನ್ಯಾಯಬೆಲೆ ಅಂಗಡಿಕಾರರು ಹಾಗೂ ಇಲಾಖೆಯ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಪಡಿತರ ವಿತರಣಾ ವ್ಯವಸ್ಥೆಯನ್ನು ಸುಗಮವಾಗಿ ನಡೆಸಬೇಕು. ಸಾರ್ವಜನಿಕರಿಂದ ಬರುವ ದೂರುಗಳು ಹಾಗೂ ಸಲಹೆಗಳನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಂಗಡಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಮನವಿ

ನಗರದ ಕೆಲವು ನ್ಯಾಯಬೆಲೆ ಅಂಗಡಿಗಳು ಸಹಕಾರ ಸಂಘಗಳು, ಕಂಜ್ಯೂಮರ್ ಸೊಸೈಟಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮೂಲಕ ನಡೆಯುತ್ತಿವೆ. ಇಂತಹ ಅಂಗಡಿಗಳಿಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಪ್ರತಿ ವಾರ್ಡ್‌ನಲ್ಲಿ ಸರ್ಕಾರಿ ಜಮೀನು ಅಥವಾ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂದು ನ್ಯಾಯಬೆಲೆ ಅಂಗಡಿಕಾರರು ಮನವಿ ಮಾಡಿದರು.
ಸರ್ಕಾರ ಜಮೀನು ಒದಗಿಸಿದಲ್ಲಿ ನಿಯಮಾನುಸಾರ ಹಣ ಪಾವತಿಸಿ, ಅಗತ್ಯ ಬಾಂಡ್ ಹಾಗೂ ಒಪ್ಪಿಗೆ ಪತ್ರ ನೀಡಲು ಸಿದ್ಧರಿರುವುದಾಗಿ ಅವರು ತಿಳಿಸಿದರು.
ಇದೇ ವೇಳೆ ನ್ಯಾಯಬೆಲೆ ಅಂಗಡಿಕಾರರು ಹಾಗೂ ಸಹಾಯಕರಿಗೆ ಸರ್ಕಾರದ ವತಿಯಿಂದ ವಿಮಾ ಯೋಜನೆ ಜಾರಿಗೊಳಿಸಬೇಕು ಎಂದು ಮಹಾಪೌರರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಭೆಯಲ್ಲಿ ಉಪ ಮಹಾಪೌರರಾದ ಸುಮಿತ್ರಾ ರಾಜು ಜಾಧವ, ಆಹಾರ ಇಲಾಖೆಯ ಉಪ ನಿರ್ದೇಶಕ ವಿನಯಕುಮಾರ ಪಾಟೀಲ, ಸಹಾಯಕ ನಿರ್ದೇಶಕ ಅಮರೇಶ ತಾಂಡೂರ, ಆಹಾರ ನಿರೀಕ್ಷಕರಾದ ವಿಜಯಕುಮಾರ ಗುಮಶೆಟ್ಟಿ, ಶಂಕರಗೌಡ ಬಿರಾದಾರ, ಅಷ್ಪಕ್ ಕೋಲ್ಹಾರ, ಜಾಗೃತಿ ಸಮಿತಿ ಸದಸ್ಯರಾದ ಅಶೋಕ್ ನಾಯ್ಕೋಡಿ, ದಿಲೀಪ್ ಪ್ರಭಾಕರ್, ಹಾಜಿಲಾಲ ದಳವಾಯಿ, ನ್ಯಾಯಬೆಲೆ ಅಂಗಡಿಕಾರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಸಭೆಯ ನಿರೂಪಣೆಯನ್ನು ಸಹಾಯಕ ನಿರ್ದೇಶಕ ಅಮರೇಶ ತಾಂಡೂರ ನೆರವೇರಿಸಿದರು. ಕೊನೆಯಲ್ಲಿ ವಂದನಾರ್ಪಣೆ ಸಲ್ಲಿಸಲಾಯಿತು.

Share this