ಬರದ ಹೊಡೆತಕ್ಕೆ ರೈತರು ಕಂಗಾಲು: ತಕ್ಷಣ ಬರಪೀಡಿತ ಪ್ರದೇಶ ಘೋಷಿಸಿ

ಕುಡಿಯುವ ನೀರು, ಮೇವು, ಬೆಳೆಹಾನಿ ಪರಿಹಾರಕ್ಕೆ ಜೆಡಿಎಸ್ ಆಗ್ರಹ

ಸಪ್ತಸಾಗರ ವಾರ್ತ,ವಿಜಯಪುರ, ಸೆ. 25: ರಾಜ್ಯದಲ್ಲಿ ತಲೆದೋರಿರುವ ತೀವ್ರ ಬರ ಪರಿಸ್ಥಿತಿಯಿಂದ ರೈತರು ಹಾಗೂ ಗ್ರಾಮೀಣ ಜನತೆ ಸಂಕಷ್ಟಕ್ಕೆ ಸಿಲುಕಿದ್ದು, ಬರದ ತೀವ್ರತೆ ಹೆಚ್ಚಿರುವ ತಾಲೂಕು ಹಾಗೂ ಗ್ರಾಮಗಳನ್ನು ಕೂಡಲೇ ಬರಪೀಡಿತ ಪ್ರದೇಶಗಳೆಂದು ಘೋಷಿಸಿ ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ವಿಜಯಪುರ ನಗರ ಜನತಾದಳ (ಜಾತ್ಯತೀತ) ಆಗ್ರಹಿಸಿದೆ.
ಈ ಕುರಿತು ಜೆಡಿಎಸ್ ನಗರ ಘಟಕದ ಅಧ್ಯಕ್ಷ ಪ್ರಶಾಂತ ಎಸ್. ಕಿಣಗಿ ಅವರ ನೇತೃತ್ವದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಜಿಲ್ಲಾಡಳಿತದ ಮೂಲಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.
ಬರಪೀಡಿತ ಪ್ರದೇಶಗಳಲ್ಲಿ ತಕ್ಷಣ ಉದ್ಯೋಗಾಧಾರಿತ ಬರ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿರುವ ಗ್ರಾಮಗಳಿಗೆ ಟ್ಯಾಂಕರ್ ಸೇರಿದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಜಾನುವಾರುಗಳಿಗೆ ಅಗತ್ಯ ಪ್ರಮಾಣದಲ್ಲಿ ಮೇವು ಪೂರೈಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬರದಿಂದ ಒಣಗಿರುವ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ತುರ್ತಾಗಿ ಜಾರಿಗೊಳಿಸಬೇಕು. ಇದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿಸುವುದರ ಜೊತೆಗೆ ಜಾನುವಾರು ಹಾಗೂ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ ಎಂದು ಮುಖಂಡರು ತಿಳಿಸಿದ್ದಾರೆ.
ರೈತರು ಬೆಳೆ ನಷ್ಟದಿಂದ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಬೆಳೆಹಾನಿಯ ವೈಜ್ಞಾನಿಕ ಸಮೀಕ್ಷೆ ನಡೆಸಿ ಅರ್ಹ ರೈತರಿಗೆ ತ್ವರಿತವಾಗಿ ಪರಿಹಾರ ಬಿಡುಗಡೆ ಮಾಡಬೇಕು. ಬರಪೀಡಿತ ಪ್ರದೇಶಗಳಲ್ಲಿ ಪರ್ಯಾಯ ಹಾಗೂ ಅಲ್ಪಾವಧಿ ಬೆಳೆಗಳನ್ನು ಬೆಳೆಯಲು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ ಅಗತ್ಯ ಬೀಜ, ರಸಗೊಬ್ಬರ ಹಾಗೂ ತಾಂತ್ರಿಕ ನೆರವು ಒದಗಿಸಬೇಕು ಎಂದು ಆಗ್ರಹಿಸಿದರು.
ಬರ ಪರಿಸ್ಥಿತಿಯನ್ನು ಕೇವಲ ಘೋಷಣೆಗೆ ಸೀಮಿತಗೊಳಿಸದೆ, ರೈತರು ಮತ್ತು ಗ್ರಾಮೀಣ ಜನರ ಸಂಕಷ್ಟಕ್ಕೆ ಸ್ಪಂದಿಸುವಂತೆ ತುರ್ತು ಪರಿಹಾರ ಕ್ರಮಗಳನ್ನು ಜಾರಿಗೊಳಿಸಬೇಕು. ವಿಳಂಬವಾದರೆ ರೈತರು ಹಾಗೂ ಕೃಷಿ ಕಾರ್ಮಿಕರ ಬದುಕಿನ ಮೇಲೆ ಮತ್ತಷ್ಟು ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಜೆಡಿಎಸ್ ಮುಖಂಡರು ಸರ್ಕಾರದ ಗಮನ ಸೆಳೆದರು.
ರಾಜ್ಯ ಘಟಕದ ಸೂಚನೆಯ ಮೇರೆಗೆ ನಡೆದ ಸಭೆ ಹಾಗೂ ಮನವಿ ಸಲ್ಲಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಪಂಚಪ್ಪ ಕಲಬುರ್ಗಿ, ಎಸ್.ಎಸ್. ಖಾದ್ರಿ ಇನಾಮದಾರ, ವೀರೇಂದ್ರ ಪಾಟೀಲ ಹಳಸಂಗಿ, ಎಸ್.ವಿ. ಪಾಟೀಲ, ಪ್ರಶಾಂತ ಕಿಣಗಿ, ವಿಶ್ವನಾಥ ಕೋರಿ, ಮರೆಪ್ಪ ಗಿರಣಿವಡ್ಡರ, ಎಂ.ಎನ್. ಪಾಟೀಲ ಸಿಂದಗಿ, ಪ್ರದೀಪ ನಾಯ್ಕೋಡಿ, ಎಸ್.ವೈ. ನಡವಿನಕೇರಿ, ಎಸ್.ಎ. ಕಿಣಗಿ, ಸಂಜೀವ ಹಿರೇಮಠ, ಬಾಬು ಸಿರಂಗರ, ಮುತ್ತುರಾಜ ಜಂಗಮಶೆಟ್ಟಿ, ಮುದಕಣ್ಣ ಗೋಡೆಕರ, ಪೀರಬಾಷಾ ಗಚ್ಚಿಮಹಲ್, ಡಾ. ಮಲ್ಲಿಕಾರ್ಜುನ ಸಿರೂರ, ಜಾಫರ್ ಕಲಾದಗಿ, ಮನೋಜ ಬಿರಾದಾರ ಸೇರಿದಂತೆ ಹಲವು ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಬರದ ಸಂಕಷ್ಟಕ್ಕೆ ಸರ್ಕಾರ ತಕ್ಷಣ ಸ್ಪಂದಿಸಿ, ರೈತರು ಹಾಗೂ ಗ್ರಾಮೀಣ ಜನರಿಗೆ ಅಗತ್ಯ ಪರಿಹಾರ ಒದಗಿಸಬೇಕು ಎಂದು ಮಲ್ಲಿಕಾರ್ಜುನ ಯಂಡಿಗೇರಿ ಹಾಗೂ ಪ್ರಶಾಂತ ಎಸ್. ಕಿಣಗಿ ಒತ್ತಾಯಿಸಿದರು.

Share this