ಎರಡನೇ ಮದುವೆ ಕುರಿತ ಸಿಎಂ ಹೇಳಿಕೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಪ್ರತಿಕ್ರಿಯೆ
ಸಪ್ತಸಾಗರ ವಾರ್ತೆ,ವಿಜಯಪುರ,ಸೆ. 26: ಉತ್ತರ ಕರ್ನಾಟಕದವರು ಬೆಂಗಳೂರಿಗೆ ತೆರಳಿ ನೆಲೆಯೂರುತ್ತಾರೆ, ಶಾಸಕರು ಕೂಡ ಬೆಂಗಳೂರಿಗೆ ಬಂದು ನೆಲೆಸುತ್ತಾರೆ ಹಾಗೂ ಕೆಲ ಶಾಸಕರು ಎರಡನೇ ಮದುವೆಯಾಗಿ ಅಲ್ಲೇ ಇರುತ್ತಾರೆ ಎಂಬ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರ ಹೇಳಿಕೆ ಇದೀಗ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, “ಮುಖ್ಯಮಂತ್ರಿ ಯಾವ ಆ್ಯಂಗಲ್ನಲ್ಲಿ ಈ ಮಾತು ಹೇಳಿದ್ದಾರೆ ಎಂಬುದನ್ನು ಅವರನ್ನೇ ಕೇಳಬೇಕು. ನನ್ನ ಬಗ್ಗೆ ನಾನು ಹೇಳುತ್ತೇನೆ; ನಾನು ಏಕಪತ್ನಿ ವ್ರತಸ್ಥ. ಶ್ರೀರಾಮಚಂದ್ರನಂತೆ ಹಾಗೂ ನನ್ನ ತಂದೆಯಂತೆ ಬದುಕಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ವಿಜಯಪುರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಬೆಂಗಳೂರಿನ ಬೆಳವಣಿಗೆ ಹಾಗೂ ಉತ್ತರ ಕರ್ನಾಟಕದ ಜನರು ಬೆಂಗಳೂರಿನಲ್ಲಿ ನೆಲೆಸುತ್ತಿರುವ ವಿಚಾರವನ್ನು ವಿವರಿಸುವ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡಿರಬಹುದು. ಸಿಎಂ ಅವರ ಪ್ರಕಾರ ಕೆಲವರು ಎರಡು ಮದುವೆಯಾಗಿರಬಹುದು. ಆದರೆ ನಾನು ಆ ಕೆಟಗರಿಯಲ್ಲಿ ಬರುವುದಿಲ್ಲ ಎಂದು ಹೇಳಿದರು.
ಬೆಂಗಳೂರು ಬೆಳೆದರೆ ಕರ್ನಾಟಕವೂ ಬೆಳೆಯುತ್ತದೆ
ಬೆಂಗಳೂರಿನ ಅಭಿವೃದ್ಧಿಯನ್ನು ಕರ್ನಾಟಕದ ಅಭಿವೃದ್ಧಿಯಿಂದ ಬೇರ್ಪಡಿಸಿ ನೋಡಲು ಸಾಧ್ಯವಿಲ್ಲ. ಕರ್ನಾಟಕ ಇರುವುದರಿಂದ ಬೆಂಗಳೂರು ಅಭಿವೃದ್ಧಿಯಾಗಿದೆ; ಬೆಂಗಳೂರಿನ ಬೆಳವಣಿಗೆಯಿಂದ ಕರ್ನಾಟಕಕ್ಕೂ ಆರ್ಥಿಕ ಶಕ್ತಿ ದೊರೆತಿದೆ. ಸರ್ಕಾರಕ್ಕೆ ಬರುವ ತೆರಿಗೆ ಆದಾಯದಲ್ಲಿ ಬೆಂಗಳೂರಿನ ಪಾಲು ದೊಡ್ಡದಾಗಿದೆ. ಹೀಗಾಗಿ ಬೆಂಗಳೂರಿನ ಅಭಿವೃದ್ಧಿ ಇಡೀ ಕರ್ನಾಟಕದ ಅಭಿವೃದ್ಧಿಯ ಭಾಗವೇ ಆಗಿದೆ ಎಂದು ಯಶವಂತರಾಯಗೌಡ ಪಾಟೀಲ ಹೇಳಿದರು.
ಕೆಲವರು ಪ್ರತ್ಯೇಕ ಉತ್ತರ ಕರ್ನಾಟಕದ ರಾಜ್ಯದ ಬೇಡಿಕೆ ಮುಂದಿಡುತ್ತಿರುವುದು ಸರಿಯಾದ ಕ್ರಮವಲ್ಲ. ರಾಜ್ಯದ ಎಲ್ಲಾ ಭಾಗಗಳನ್ನೂ ಸಮಾನವಾಗಿ ಅಭಿವೃದ್ಧಿಪಡಿಸುವ ಮೂಲಕ ಸಮಗ್ರ ಕರ್ನಾಟಕದ ಪರಿಕಲ್ಪನೆಯನ್ನು ಬಲಪಡಿಸಬೇಕಿದೆ ಎಂದರು.
ತೆಲಂಗಾಣಕ್ಕೆ ನೀರು ಬಿಡುವ ವಿಚಾರದಲ್ಲಿ ಮಾನವೀಯತೆ ಮುಖ್ಯ
ಕರ್ನಾಟಕದಿಂದ ತೆಲಂಗಾಣಕ್ಕೆ ನೀರು ಬಿಡುವ ವಿಚಾರದ ಕುರಿತು ಮಾತನಾಡಿದ ಶಾಸಕ ಯಶವಂತರಾಯಗೌಡ ಪಾಟೀಲ, ಯಾದಗಿರಿಯ ಬಸವಸಾಗರ ಹಾಗೂ ವಿಜಯಪುರದ ಆಲಮಟ್ಟಿ ಜಲಾಶಯದಿಂದ ನೀರು ಬಿಡುವಂತೆ ತೆಲಂಗಾಣದ ಸಚಿವರು ಹಾಗೂ ಶಾಸಕರ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿರುವ ಬಗ್ಗೆ ಹೆಚ್ಚಿನ ಮಾಹಿತಿ ತಮ್ಮ ಬಳಿ ಇಲ್ಲ ಎಂದರು.
ರಾಜ್ಯದಷ್ಟೇ ಅಲ್ಲ, ದೇಶದ ಹಲವು ಭಾಗಗಳಲ್ಲಿ ಬರದ ಪರಿಸ್ಥಿತಿ ಇದೆ. ಕುಡಿಯುವ ನೀರಿನ ವಿಚಾರದಲ್ಲಿ ನಾವೆಲ್ಲರೂ ಸಹೋದರ ರಾಜ್ಯಗಳಂತೆ ಪರಸ್ಪರ ಸಹಕಾರದಿಂದ ನಡೆದುಕೊಳ್ಳಬೇಕಾಗುತ್ತದೆ. ಹಿಂದೆ ಮಹಾರಾಷ್ಟ್ರದಲ್ಲಿ ನೀರಿನ ಸಮಸ್ಯೆ ಎದುರಾದಾಗ ಭೀಮಾ ನದಿಗೆ ನೀರು ಬಿಡಿಸುವಂತೆ ನಾವು ಹೋರಾಟ ಮಾಡಿದ್ದೇವೆ. ಅದೇ ರೀತಿ ಬೇರೆ ರಾಜ್ಯದಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆ ಇದ್ದರೆ ಮಾನವೀಯ ದೃಷ್ಟಿಯಿಂದ ನೀರು ಬಿಡಬೇಕಾಗುತ್ತದೆ ಎಂದು ಹೇಳಿದರು.
ತೆಲಂಗಾಣದವರು ಕುಡಿಯುವ ನೀರಿಗಾಗಿ ನೀರು ಕೇಳುತ್ತಿದ್ದಾರೆಯೇ ಅಥವಾ ಬೆಳೆಗಳಿಗೆ ನೀರು ಕೇಳುತ್ತಿದ್ದಾರೆಯೇ ಎಂಬ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಕುರಿತು ಜಲಸಂಪನ್ಮೂಲ ಸಚಿವರು ಹಾಗೂ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ರಾಜ್ಯ ವಿಭಜನೆಯ ಪರಿಣಾಮದ ಬಗ್ಗೆ ಎಚ್ಚರಿಕೆ ಅಗತ್ಯ
ತೆಲಂಗಾಣ ಮತ್ತು ಆಂಧ್ರಪ್ರದೇಶ ವಿಭಜನೆಯ ನಂತರ ಅಭಿವೃದ್ಧಿ ಹಾಗೂ ಆರ್ಥಿಕ ವಿಚಾರಗಳಲ್ಲಿ ಎದುರಾದ ಸವಾಲುಗಳು ಎಲ್ಲರಿಗೂ ಗೊತ್ತಿರುವ ಸಂಗತಿ. ಸೀಮಾಂಧ್ರ ಭಾಗದಲ್ಲಿ ಅಧಿಕಾರ ನಡೆಸಿದವರಿಗೆ ಎದುರಾದ ಆರ್ಥಿಕ ಸಮಸ್ಯೆಗಳೂ ಗಮನಾರ್ಹವಾಗಿವೆ. ಹೀಗಾಗಿ ಪ್ರತ್ಯೇಕ ರಾಜ್ಯದ ಬೇಡಿಕೆಗಳ ಕುರಿತು ಭಾವನಾತ್ಮಕವಾಗಿ ಅಲ್ಲದೆ, ರಾಜ್ಯದ ಸಮಗ್ರ ಹಿತದ ದೃಷ್ಟಿಯಿಂದ ಚಿಂತನೆ ಮಾಡಬೇಕಿದೆ ಎಂದು ಯಶವಂತರಾಯಗೌಡ ಪಾಟೀಲ ಹೇಳಿದರು.


