ರೂಟ್ಚಾರ್ಟ್ ಅಪ್ಡೇಟ್ಗೆ ನೆಟ್ವರ್ಕ್ ಅಡ್ಡಿ; ಪರೀಕ್ಷಾ ಸಮಯದಲ್ಲೇ ವಿದ್ಯಾರ್ಥಿಗಳ ಪರದಾಟ
ರುದ್ರಪ್ಪ ಆಸಂಗಿ | ಸಪ್ತ ಸಾಗರ, ವಿಜಯಪುರ
ವಿಜಯಪುರ ನಗರದ ನಗರ ಸಾರಿಗೆ ವ್ಯವಸ್ಥೆ ಸೋಮವಾರ ಬೆಳಗ್ಗೆಯೇ ಅಸ್ತವ್ಯಸ್ತಗೊಂಡ ಪರಿಣಾಮ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಪರದಾಡುವಂತಾಯಿತು. ನಿಗದಿತ ಸಮಯಕ್ಕೆ ಡಿಪೋಗಳಿಂದ ಬಸ್ಗಳು ಹೊರಡದ ಕಾರಣ ಪ್ರಮುಖ ಮಾರ್ಗಗಳಲ್ಲಿ ಬಸ್ಗಳ ಸಂಚಾರ ವಿಳಂಬಗೊಂಡು, ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಯಿತು.
ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ತರಗತಿಗಳು ಹಾಗೂ ವಿವಿಧ ಪರೀಕ್ಷೆಗಳು ನಡೆಯುತ್ತಿರುವ ಸಂದರ್ಭದಲ್ಲಿ ಬಸ್ಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿರುವುದು ವಿದ್ಯಾರ್ಥಿಗಳಿಗೆ ಮತ್ತಷ್ಟು ಸಂಕಷ್ಟ ತಂದೊಡ್ಡಿತು. ಪರೀಕ್ಷಾ ಕೇಂದ್ರಗಳಿಗೆ ಸಮಯಕ್ಕೆ ತಲುಪಬೇಕಿದ್ದ ವಿದ್ಯಾರ್ಥಿಗಳು ಬಸ್ಗಾಗಿ ಕಾಯುತ್ತಾ ಆತಂಕಕ್ಕೊಳಗಾದರು. ಉದ್ಯೋಗ, ವ್ಯಾಪಾರ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ತೆರಳುತ್ತಿದ್ದವರಿಗೂ ಇದೇ ಸಮಸ್ಯೆ ಎದುರಾಯಿತು.
ರೂಟ್ಚಾರ್ಟ್ ಅಪ್ಡೇಟ್ ಆಗದಿರುವುದೇ ಮೂಲ ಸಮಸ್ಯೆ?
ನಗರ ಸಾರಿಗೆ ಬಸ್ಗಳು ಯಾವ ಮಾರ್ಗದಲ್ಲಿ, ಯಾವ ಸಮಯಕ್ಕೆ ಸಂಚರಿಸಬೇಕು ಎಂಬ ವಿವರಗಳನ್ನು ಡಿಪೋಗಳಲ್ಲಿರುವ ಕಂಪ್ಯೂಟರ್ ವ್ಯವಸ್ಥೆಯಲ್ಲಿ ರೂಟ್ಚಾರ್ಟ್ ಮೂಲಕ ಅಪ್ಡೇಟ್ ಮಾಡಲಾಗುತ್ತದೆ. ಆದರೆ ಬಿಎಸ್ಎನ್ಎಲ್ ನೆಟ್ವರ್ಕ್ನಲ್ಲಿ ಉಂಟಾದ ತಾಂತ್ರಿಕ ಸಮಸ್ಯೆಯಿಂದ ರೂಟ್ಚಾರ್ಟ್ ಅಪ್ಡೇಟ್ ಪ್ರಕ್ರಿಯೆ ವಿಳಂಬಗೊಂಡಿದೆ ಎನ್ನಲಾಗಿದೆ.
ರೂಟ್ಚಾರ್ಟ್ ಅಪ್ಡೇಟ್ ಆಗದೆ ಇರುವುದರಿಂದ ಬಸ್ಗಳ ನಿರ್ಗಮನದಲ್ಲೂ ವಿಳಂಬ ಉಂಟಾಗಿ, ನಗರ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಸಮಸ್ಯೆ ಬಗೆಹರಿಸಲು ಸಾರಿಗೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಲವು ಪ್ರಯತ್ನಗಳನ್ನು ನಡೆಸಿದರು. ಡಾಂಗಲ್ ಬಳಸಿ ರೂಟ್ಚಾರ್ಟ್ ಅಪ್ಡೇಟ್ ಮಾಡಲು ಮುಂದಾದರೂ ನಿರೀಕ್ಷಿತ ವೇಗದಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳಲಿಲ್ಲ ಎನ್ನಲಾಗಿದೆ.
ನೆಟ್ವರ್ಕ್ ಸಮಸ್ಯೆಗೆ ಸಾರ್ವಜನಿಕರ ಆಕ್ರೋಶ
ನಗರದ ಸಾರಿಗೆ ವ್ಯವಸ್ಥೆಯಂತಹ ಅಗತ್ಯ ಸೇವೆಯಲ್ಲೂ ನೆಟ್ವರ್ಕ್ ಸಮಸ್ಯೆಯಿಂದ ವ್ಯತ್ಯಯ ಉಂಟಾಗಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ತಾಂತ್ರಿಕ ಸಮಸ್ಯೆ ಏನೇ ಇರಲಿ, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬಸ್ಗಳ ಸಂಚಾರಕ್ಕೆ ತೊಂದರೆಯಾಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ವಹಿಸಬೇಕಿತ್ತು ಎಂಬ ಅಭಿಪ್ರಾಯವೂ ಕೇಳಿಬಂತು.
ವಿಶೇಷವಾಗಿ ಪರೀಕ್ಷಾ ದಿನಗಳಲ್ಲಿ ವಿದ್ಯಾರ್ಥಿಗಳ ಸಮಯದ ಮಹತ್ವವನ್ನು ಪರಿಗಣಿಸಿ ಬಸ್ಗಳನ್ನು ನಿಗದಿತ ವೇಳೆಗೆ ಕಾರ್ಯಾಚರಣೆಗೊಳಿಸಬೇಕು. ನಗರ ಸಾರಿಗೆ ಬಸ್ಗಳ ರೂಟ್ಚಾರ್ಟ್ ಹಾಗೂ ತಾಂತ್ರಿಕ ವ್ಯವಸ್ಥೆಗಳಲ್ಲಿ ಉಂಟಾಗುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಂಡು, ಪ್ರಯಾಣಿಕರಿಗೆ ಸಮಯಪಾಲನೆಯ ಸಾರಿಗೆ ಸೇವೆ ಒದಗಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ಕೇಳಿಬಂದಿದೆ.
ಬಿಎಸ್ಸೆನ್ನೆಲ್ ನೆಟವರ್ಕ್ ಸಮಸ್ಯೆಯಿಂದ ವಿಳಂಬ
ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಯಿಂದಾಗಿ ಇಂದು ಬೆಳ್ಳಂ ಬೆಳಗ್ಗೆ ಬಸ್ ರೂಟ್ ಮಾರ್ಟ್ ಹಾಕಿಕೊಡಲು ತೀವ್ರ ತೊಂದರೆ ಆಯಿತು. ಮೊಬೈಲ್ ನೆಟ್ವರ್ಕ್ ನಿಂದ ಸಮಸ್ಯೆ ಪರಿಹರಿಸಲು ನಮ್ಮ ಸಿಬ್ಬಂದಿ ಪ್ರಯತ್ನಿಸಿದರು. ಆದರೆ ಅದು ಅಷ್ಟು ಕೆಲಸ ಕೊಡಲಿಲ್ಲ. ಬೆಳಿಗ್ಗೆ 8:30 ಕ್ಕೆ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆ ಪರಿಹಾರವಾಗಿದೆ.
-ಡಿ.ಎ. ಬಿರಾದಾರ, ಕೆಕೆಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವಿಜಯಪುರ


