ಮಹಾರಾಷ್ಟ್ರ ಮಾದರಿಯಲ್ಲಿ ರಾಜ್ಯದಲ್ಲೂ ರೈತರ ಸಾಲಮನ್ನಾ ಮಾಡಿ

ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಲು ಪರಶುರಾಮಸಿಂಗ್ ರಜಪೂತ ಆಗ್ರಹ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 28:
ರಾಜ್ಯದಲ್ಲಿ ಭೀಕರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೆರೆಯ ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ರಾಜ್ಯ ಸರ್ಕಾರವೂ ಕೂಡಲೇ ರೈತರ ಎರಡು ಲಕ್ಷ ರೂ.ವರೆಗೆ ಸಾಲಮನ್ನಾ ಮಾಡುವ ದಿಟ್ಟ ನಿರ್ಧಾರ ಕೈಗೊಳ್ಳಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡ ಪರಶುರಾಮಸಿಂಗ್ ರಜಪೂತ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬರ ಪರಿಹಾರ ಹಾಗೂ ರೈತರ ನೆರವಿನ ವಿಚಾರದಲ್ಲಿ ರಾಜ್ಯ ಸರ್ಕಾರ ಕೇಂದ್ರದತ್ತ ಬೊಟ್ಟು ಮಾಡುತ್ತಾ ಕುಳಿತುಕೊಳ್ಳದೆ, ಮೊದಲು ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು. ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ದೊರೆಯಲಿದೆ. ಆದರೆ, ರಾಜ್ಯ ಸರ್ಕಾರವೂ ರೈತರ ಹಿತದೃಷ್ಟಿಯಿಂದ ತುರ್ತು ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ರೈತರ ಸಾಲಮನ್ನಾ ಹಾಗೂ ಪ್ರತಿ ಎಕರೆಗೆ ಪರಿಹಾರ ಘೋಷಣೆ ಮಾಡಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತರಿಗೆ ಸರ್ಕಾರ ಕೇವಲ ₹2,500 ಇನ್‌ಪುಟ್ ಸಬ್ಸಿಡಿ ನೀಡಿ ಕೈತೊಳೆದುಕೊಂಡಿದೆ. ಇಷ್ಟೊಂದು ಗಂಭೀರ ಬರ ಪರಿಸ್ಥಿತಿಯಲ್ಲಿ ಇದು ರೈತರಿಗೆ ಸಮರ್ಪಕ ಪರಿಹಾರವಲ್ಲ ಎಂದು ಅವರು ಟೀಕಿಸಿದ್ದಾರೆ.
ರೈತರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ಹಾಗೂ ಸಾಲಮನ್ನಾ ಮಾಡುವಂತೆ ಬಿಜೆಪಿ ಪ್ರತಿಪಕ್ಷ ನಾಯಕ ಆರ್. ಅಶೋಕ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ಹಾಗೂ ಮಿತ್ರಪಕ್ಷ ಜೆಡಿಎಸ್‌ನ ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದ್ದರೂ ಸರ್ಕಾರ ಈ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ರಜಪೂತ ಆರೋಪಿಸಿದ್ದಾರೆ.
₹2,500 ಪರಿಹಾರ ನೀಡುವುದೇ ಸರ್ಕಾರದ ಉದ್ದೇಶವಾಗಿದ್ದರೆ, ಅದನ್ನು ಸಚಿವ ಸಂಪುಟ ಸಭೆಯಲ್ಲಿಯೇ ಘೋಷಿಸಬಹುದಿತ್ತು. ವಿಶೇಷ ಅಧಿವೇಶನ ಕರೆದು ರೈತರಲ್ಲಿ ನಿರೀಕ್ಷೆ ಮೂಡಿಸಿ, ಸರ್ಕಾರದ ಕೋಟ್ಯಂತರ ರೂ. ಹಣ ವ್ಯಯಿಸಿರುವುದರ ಔಚಿತ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ರಾಜ್ಯದಲ್ಲೂ ರೈತರ ಎರಡು ಲಕ್ಷ ರೂ.ವರೆಗೆ ಸಾಲಮನ್ನಾ ಮಾಡಬೇಕು. ಪ್ರತಿ ಎಕರೆಗೆ ₹50 ಸಾವಿರ ಬರ ಪರಿಹಾರ ನೀಡಬೇಕು. ರೈತರ ಮಕ್ಕಳ ಶಾಲಾ ಶುಲ್ಕವನ್ನು ಸರ್ಕಾರವೇ ಭರಿಸಬೇಕು ಎಂದು ಪರಶುರಾಮಸಿಂಗ್ ರಜಪೂತ ಒತ್ತಾಯಿಸಿದ್ದಾರೆ.

Share this