ಸಪ್ತಸಾಗರ ವಾರ್ತೆ,ವಿಜಯಪುರ, ಸೆ.30:
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಸಮೀಪ ಬುಧವಾರ ಮುಂಜಾನೆ 2.04ಕ್ಕೆ 3.5 ತೀವ್ರತೆಯ ಭೂಕಂಪ ಸಂಭವಿಸಿದೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (KSNDMC) ಪ್ರಕಾರ, ಬಸವನಬಾಗೇವಾಡಿಯಿಂದ 3.9 ಕಿ.ಮೀ. ಈಶಾನ್ಯ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ದಾಖಲಾಗಿದೆ. 10 ಕಿ.ಮೀ. ಆಳದಲ್ಲಿ ಸಂಭವಿಸಿದ ಭೂಕಂಪದ ಕೇಂದ್ರದ ಅಕ್ಷಾಂಶ 16.604° ಉತ್ತರ ಹಾಗೂ ರೇಖಾಂಶ 75.990° ಪೂರ್ವವಾಗಿದೆ.
ಕೇಂದ್ರಬಿಂದುವಿನಿಂದ ಹುಣಶ್ಯಾಳ ಗ್ರಾಮ ಪಂಚಾಯಿತಿ 7.8 ಕಿ.ಮೀ., ಹೂವಿನ ಹಿಪ್ಪರಗಿ ಗ್ರಾಮ ಪಂಚಾಯಿತಿ 11.2 ಕಿ.ಮೀ., ಆಲಮಟ್ಟಿ ಅಣೆಕಟ್ಟು 31 ಕಿ.ಮೀ. ಹಾಗೂ ವಿಜಯಪುರ ನಗರ 38 ಕಿ.ಮೀ. ದೂರದಲ್ಲಿವೆ.
ಭೂಕಂಪದ ತೀವ್ರತೆ ಕಡಿಮೆಯಾಗಿದ್ದು, ಕೇಂದ್ರಬಿಂದುವಿನಿಂದ 50ರಿಂದ 60 ಕಿ.ಮೀ. ವ್ಯಾಪ್ತಿಯಲ್ಲಿ ಕಂಪನ ಅನುಭವವಾಗಿದೆ. ಆದರೆ ಯಾವುದೇ ಹಾನಿ ಉಂಟಾಗಿಲ್ಲ. ಸ್ಥಳೀಯವಾಗಿ ಸಣ್ಣ ಪ್ರಮಾಣದ ಕಂಪನ ಮಾತ್ರ ಅನುಭವವಾಗಬಹುದು ಎಂದು KSNDMC ತಿಳಿಸಿದೆ.
ಕೇಂದ್ರಬಿಂದು ಭೂಕಂಪನ ವಲಯ–IIIರಲ್ಲಿ ಬರುತ್ತಿದ್ದು, ಈ ಪ್ರದೇಶದಲ್ಲಿ ಯಾವುದೇ ಪ್ರಮುಖ ಭೌಗೋಳಿಕ ರಚನಾ ವ್ಯತ್ಯಯಗಳಿಲ್ಲ. ಭೂಕಂಪದ ಪ್ರಮಾಣ ಹಾಗೂ ತೀವ್ರತೆ ಕಡಿಮೆ ಇರುವುದರಿಂದ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು KSNDMC ನಿರ್ದೇಶಕರು ತಿಳಿಸಿದ್ದಾರೆ.
Editor
Rudrappa B Asangi
Editor
Managing Editor
Chetan Asangi
Managing Editor


