ಅಭಿವೃದ್ಧಿಯ ಹಾದಿಯಲ್ಲಿ ವಿಜಯಪುರ; ಧೂಳು-ಕಸದ ನಗರದಿಂದ ಸ್ವಚ್ಛ, ಸುಂದರ ನಗರದೆಡೆಗೆ: ಯತ್ನಾಳ

ರೂ.8.95 ಕೋಟಿ ವೆಚ್ಚದ ಒಳಚರಂಡಿ, ಸಿಸಿ ರಸ್ತೆ ಕಾಮಗಾರಿಗಳಿಗೆ ಚಾಲನೆ

ಸಪ್ತಸಾಗರ ವಾರ್ತೆ,ವಿಜಯಪುರ, ಸೆ. 30:
ಕೆಲ ವರ್ಷಗಳ ಹಿಂದೆ ಹಾಳಾದ ರಸ್ತೆಗಳು, ಎಲ್ಲೆಂದರಲ್ಲಿ ಕಸದ ರಾಶಿ ಹಾಗೂ ಧೂಳಿನಿಂದಾಗಿ ಜನರು ತೊಂದರೆ ಅನುಭವಿಸುತ್ತಿದ್ದ ವಿಜಯಪುರ ನಗರದ ಚಿತ್ರಣ ಇದೀಗ ಸಂಪೂರ್ಣ ಬದಲಾಗಿದೆ. 2018ರಿಂದ ನಗರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ವಿಜಯಪುರ ಧೂಳು ಮುಕ್ತ ನಗರವಾಗಿ ರೂಪುಗೊಂಡಿದ್ದು, ಅಸ್ತಮಾ ಮುಕ್ತ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ವಾರ್ಡ್ ನಂ.33ರ ಕೇತನ ನಗರದಲ್ಲಿ ಗಣಪತಿ ಪ್ರತಿಷ್ಠಾಪನಾ ಸ್ಥಳದ ಸಮೀಪ ಮದೀನಾ ನಗರ, ಕೇತನ ನಗರ ಹಾಗೂ ಕೆ.ಜಿ.ಎನ್. ನಗರಗಳಲ್ಲಿ ರೂ.8.95 ಕೋಟಿ ಅನುದಾನದಲ್ಲಿ ಕೈಗೊಳ್ಳಲಿರುವ ಆಂತರಿಕ ಒಳಚರಂಡಿ ಹಾಗೂ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ನಗರದ ಪ್ರಮುಖ ರಸ್ತೆಗಳ ಜತೆಗೆ ಬಡಾವಣೆ ಹಾಗೂ ಕಾಲೊನಿಗಳಲ್ಲೂ ಗುಣಮಟ್ಟದ ಸಿಸಿ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಇದರಿಂದ ರಸ್ತೆಗಳಲ್ಲಿ ಧೂಳು ಕಡಿಮೆಯಾಗಿದ್ದು, ದೇಶದ ಅತ್ಯುತ್ತಮ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ವಿಜಯಪುರ ನಾಲ್ಕನೇ ಸ್ಥಾನದಲ್ಲಿದೆ. ಅಭಿವೃದ್ಧಿಯ ಪರಿಣಾಮ ನಗರದ ಎಲ್ಲ ಭಾಗಗಳಲ್ಲೂ ನಿವೇಶನಗಳ ಬೆಲೆಯೂ ಗಣನೀಯವಾಗಿ ಏರಿಕೆಯಾಗಿದೆ ಎಂದು ಹೇಳಿದರು.
ರಸ್ತೆ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡ ಬಳಿಕ ಮತ್ತೆ ರಸ್ತೆ ಅಗೆಯುವ ಪರಿಸ್ಥಿತಿ ನಿರ್ಮಾಣವಾಗದಂತೆ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು. ರಸ್ತೆ ಕಾಮಗಾರಿ ಆರಂಭಕ್ಕೂ ಮುನ್ನವೇ ಮನೆಗಳ ಪೈಪ್‌ಲೈನ್ ಹಾಗೂ ಇತರೆ ಸಂಪರ್ಕ ಜೋಡಣೆಗಳನ್ನು ಪೂರ್ಣಗೊಳಿಸಬೇಕು. ರಸ್ತೆ ನಿರ್ಮಾಣದ ನಂತರ ಅಗೆಯುವುದರಿಂದ ಸರ್ಕಾರದ ಹಣವೂ ವ್ಯರ್ಥವಾಗುತ್ತದೆ, ರಸ್ತೆಯ ಗುಣಮಟ್ಟವೂ ಹಾಳಾಗುತ್ತದೆ ಎಂದು ತಿಳಿಸಿದರು.

ಕಸ ನಿರ್ವಹಣೆಯಲ್ಲೂ ಜನರ ಹೊಣೆಗಾರಿಕೆ ಮುಖ್ಯ

ನಗರ ಸ್ವಚ್ಛವಾಗಿರಬೇಕಾದರೆ ಮಹಾನಗರ ಪಾಲಿಕೆಯೊಂದರ ಪ್ರಯತ್ನದಿಂದ ಮಾತ್ರ ಸಾಧ್ಯವಿಲ್ಲ. ಸಾರ್ವಜನಿಕರೂ ತಮ್ಮ ಜವಾಬ್ದಾರಿ ಅರಿತು ಕಸವನ್ನು ಎಲ್ಲೆಂದರಲ್ಲಿ ಎಸೆಯದೆ ಕಸದ ವಾಹನಗಳಿಗೆ ನೀಡಬೇಕು. ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ಬದಿಯಲ್ಲಿ ಎಸೆಯುವುದರಿಂದ ಜಾನುವಾರುಗಳು ಅದನ್ನು ಸೇವಿಸಿ ಅನಾರೋಗ್ಯಕ್ಕೆ ತುತ್ತಾಗುತ್ತವೆ. ಇಂತಹ ತಪ್ಪುಗಳು ನಮ್ಮಿಂದ ನಡೆಯದಂತೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಯತ್ನಾಳ ಸಲಹೆ ನೀಡಿದರು.
ಮಹಾನಗರ ಪಾಲಿಕೆ ಮೇಯರ್ ಎಂ.ಎಸ್. ಕರಡಿ, ಸದಸ್ಯರಾದ ರಾಜಶೇಖರ ಕುರಿಯವರ, ಆರತಿ ಶಹಾಪುರ, ಮುಖಂಡರಾದ ಶಂಕರ ಹೂಗಾರ, ಆನಂದ ಹಂಜಿ, ವಿಠ್ಠಲ ನಡುವಿನಕೇರಿ, ಶುಭಂ ಜಾಧವ, ನಿತಿನ್ ಕಾಳೆ, ಸಂಗಮೇಶ ಹಿರೇಮಠ, ಗುರು ಪರಿತ್, ಮಹಾದೇವ ಬನ್ಸೋಡೆ, ಮಹಾದೇವಿ ಭಜಂತ್ರಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿ ಶಿವಾನಂದ ಪಟ್ಟಣಶೆಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share this